ರಾಜ್ಯಸಭಾ ಚುನಾವಣೆ; ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಿಂದ ಒಬ್ಬರು ಹೊರಕ್ಕೆ?
ಬೆಂಗಳೂರು, ಮೇ 29: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ ಹತ್ತರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಹಾಗಾಗಿ, ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯ ಅಂತಿಮ ಕಸರತ್ತಿನಲ್ಲಿವೆ.
ರಾಜ್ಯದ ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಇನ್ನುಳಿದ ಒಂದು ಸ್ಥಾನ ಗೆಲ್ಲಲು ಇತರ ಪಕ್ಷಗಳ ಬೆಂಬಲ ಅತ್ಯಗತ್ಯ. ಇದರಿಂದಾಗಿ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೋ ಅಥವಾ ಪಕ್ಷೇತರರಾಗಿ ಬೇರೋರ್ವ ಮುಖಂಡ ಕಣದಲ್ಲಿ ಇರುತ್ತಾರೋ ಎನ್ನುವುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
ಬಿಜೆಪಿಯ ಮತ್ತು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಕೆ.ಸಿ.ರಾಮಮೂರ್ತಿಯವರ ಅವಧಿ ಮುಕ್ತಾಯಗೊಳ್ಳಲಿದೆ. ಚುನಾವಣೆಗೆ ರಾಜ್ಯ ಬಿಜೆಪಿ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿ ಕಳುಹಿಸಲಾಗಿದೆ.
ಆದರೆ, ರಾಜ್ಯದ ಪಟ್ಟಿಯನ್ನು ಕೇಂದ್ರದ ವರಿಷ್ಠರು ಸೈಡಿಗಿಟ್ಟ ಉದಾಹರಣೆಗಳೇ ಹೆಚ್ಚಾಗಿರುವುದರಿಂದ, ಯಾರು ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಕುತೂಹಲ ಮನೆಮಾಡಿದೆ. ಈ ನಡುವೆ, ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ ಎನ್ನಲಾಗುತ್ತಿರುವ ಮತ್ತು ಮಂಚೂಣಿಯಲ್ಲಿದ್ದ ಮುಖಂಡರು ಟಿಕೆಟ್ ನೀಡಬೇಡಿ ಎಂದು ನೇರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ವರಿಷ್ಠರು ಇವರ ತೀರ್ಮಾನವನ್ನು ಒಪ್ಪುತ್ತಾರೋ ಅಥವ ಅವರನ್ನೇ ಕಣದಲ್ಲಿ ನಿಲ್ಲಿಸುತ್ತಾರೋ ಎನ್ನುವುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಉತ್ತರ ಪ್ರದೇಶದಿಂದ ಹನ್ನೊಂದು ಸ್ಥಾನಗಳು ಖಾಲಿಯಾಗುತ್ತಿವೆ. ಇಲ್ಲಿಂದ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಯಾಕೆಂದರೆ, ರಾಜ್ಯದವರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಡ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಈ ಹಿಂದೆ, ಈಗಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಣದಲ್ಲಿದ್ದಾಗ ಇದೇ ಕೂಗು ಕೇಳಿ ಬಂದಿತ್ತು.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ. ಎಲ್. ಸಂತೋಷ್
ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ. ಎಲ್. ಸಂತೋಷ್ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ನಿರ್ಮಲ್ ಕುಮಾರ್ ಸುರಾನ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಗೀತಾ ವಿವೇಕಾನಂದ ಇವರಿಬ್ಬರ ಹೆಸರನ್ನು ವರಿಷ್ಠರು ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಈಗ, ನನಗೆ ಟಿಕೆಟ್ ಬೇಡ ಎಂದು ನಿರ್ಮಲ್ ಕುಮಾರ್ ಸುರಾನ ವರಿಷ್ಠರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಸಭೆ ಟಿಕೆಟ್ ಬೇಡ ಎಂದು ನಿರ್ಮಲ್ ಕುಮಾರ್ ಸುರಾನ
ಬಿಬಿಎಂಪಿ ಮತ್ತು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಪರವಾಗಿ ದುಡಿಯಲು ನನಗೆ ಅವಕಾಶ ನೀಡಿ, ರಾಜ್ಯಸಭೆ ಟಿಕೆಟ್ ಬೇಡ ಎಂದು ನಿರ್ಮಲ್ ಕುಮಾರ್ ಸುರಾನ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಆಪ್ತಮೂಲಗಳಿಂದ ತಿಳಿದು ಬಂದಿದೆ. ಸುರನಾ ಅವರ ಪತ್ರಕ್ಕೆ ವರಿಷ್ಠರಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಾಗಿದೆ. ಬಹುಶಃ ಮೇ 31ರಂದು ಬಿಜೆಪಿಯ ಪಟ್ಟಿ ಹೊರಬೀಳಬಹುದು.

ವರಿಷ್ಠರ ನಿರ್ಧಾರ ಬಿಜೆಪಿ ಆಪ್ತವಲಯದಲ್ಲಿ ಕುತೂಹಲ
ಎಲ್ಲಾ ವಿಚಾರದಲ್ಲೂ ರಹಸ್ಯ ಉಳಿಸಿಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲೂ ನಮ್ಮದೇ ಅಂತಿಮ ನಿರ್ಧಾರ ಎಂದು ಸಾರಿದ್ದಾಗಿದೆ. ಯಡಿಯೂರಪ್ಪನವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದರೆ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೊರತಾಗಿ ಇತರ ಇಬ್ಬರು ಅಚ್ಚರಿಯ ಆಯ್ಕೆಯಾಗಿತ್ತು. ಹಾಗಾಗಿ, ವರಿಷ್ಠರ ನಿರ್ಧಾರ ಬಿಜೆಪಿ ಆಪ್ತವಲಯದಲ್ಲಿ ಕುತೂಹಲ ಮೂಡಿಸಿದೆ.












Click it and Unblock the Notifications