Bengaluru Bandh: ಕಾವೇರಿ ಕಿಚ್ಚು- ಬೆಂಗಳೂರು ಬಂದ್‌ಗೆ ಕರೆ ನೀಡಿದ ವಿವಿಧ ಸಂಘಟನೆಗಳು, ಬಿಜೆಪಿಯಿಂದಲೂ ಬೆಂಬಲ, ದಿನಾಂಕ, ವಿವರ
ಬೆಂಗಳೂರು, ಸೆಪ್ಟೆಂಬರ್ 23: ಕಾವೇರಿ ಜಲವಿವಾದದಲ್ಲಿ ಕರ್ನಾಟಕ ಅಥವಾ ತಮಿಳುನಾಡು ಪರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಇದು ವಿರೋಧ ಪಕ್ಷಗಳ ಹಾಗೂ ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಬಿಜೆಪಿಯೂ ಬೆಂಬಲ ವ್ಯಕ್ತಪಡಿಸಿದೆ.
ಇದೇ ಮಂಗಳವಾರ ಅಂದರೆ ಸೆಪ್ಟೆಂಬರ್ 26 ರಂದು ಬೆಂಗಳೂರು ನಗರವನ್ನು ಬಂದ್ ಮಾಡಲು ರೈತಪರ ಸಂಘಟನೆಗಳು ತೀರ್ಮಾನಿಸಿವೆ.

ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಕುರುಬೂರು ಶಾಂತ ಕುಮಾರ್, ರಾಜ್ಯದ ಎಲ್ಲಾ ಸಂಘಟನೆಗಳು ಬಂದ್‌ಗೆ ಕೈಜೋಡಿಸಬೇಕು. 26ರಂದು ನಡೆಯುವ ಬೆಂಗಳೂರು ಬಂದ್‌ಗೆ ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ (ಕೆಜೆಎಸ್‌ಎಸ್) ಸಹ ಸೆ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹಲವು ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡುತ್ತಿರುವುದಾಗಿ ಕೆಜೆಎಸ್‌ಎಸ್ ತಿಳಿಸಿದೆ.
ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಟೌನ್ ಹಾಲ್‌ನಿಂದ ಮೈಸೂರು ಸರ್ಕಲ್ ವರೆಗೂ ರ್ಯಾಲಿಯನ್ನು ನಡೆಸಲಾಗುವುದು ಎಂದು ಮುಖಂಡರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಬಂದ್ ಬಿಜೆಪಿಯೂ ಬೆಂಬಲ ಸೂಚಿಸಿದೆ. ಈ ಬಂದ್‌ಗೆ ಕನ್ನಡಿಗರು ಸಂಪೂರ್ಣ ಬೆಂಬಲ ನೀಡಬೇಕೆಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾವೇರಿ ಜಲ ವಿವಾದವು ರಾಜಕೀಯವನ್ನು ಮೀರಿದೆ ಎಂದು ಬಿಜೆಪಿ ತಿಳಿಸಿದೆ.
ಈ ಮಧ್ಯೆ, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ಕೆಎಸ್‌ಟಿಒಎ) ಅಧ್ಯಕ್ಷ ಕೆ ರಾಧಾ ಕೃಷ್ಣ ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ನೀರಿನ ಸಮಸ್ಯೆ ಪ್ರಮುಖವಾಗಿ ಕಾಡುತ್ತಿರುವ ಕಾರಣ ಕೆಎಸ್‌ಆರ್‌ಟಿಸಿ ಬಂದ್‌ಗೆ ಬೆಂಬಲ ನೀಡುತ್ತಿದೆ ಎಂದು ಹೊಳ್ಳ ಹೇಳಿದ್ದಾರೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು ಬಂದ್‌ಗೆ ವಿವಿಧ ಸಂಘಟನೆಗಳಿಂದ ಸಹಕಾರ ಕೋರಿದ್ದಾರೆ. ಶಾಲಾ-ಕಾಲೇಜುಗಳಿಗೆ, ಫಿಲಂ ಚೇಂಬರ್ ಮತ್ತು ಐಟಿ ಕಂಪನಿಗಳಿಗೆ ರಜೆ ಘೋಷಿಸುವಂತೆ ಶಾಂತಕುಮಾರ್ ಮನವಿ ಮಾಡಿದ್ದಾರೆ. ಈ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ, ಕನ್ನಡ ಪರ ಸಂಘಟನೆಗಳು ಸೇರಿದಂತೆ 15 ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು. ಇವುಗಳು ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿವೆ.
ಬೆಂಗಳೂರಿನಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಹಲವೆಡೆ ಸಂಚಾರ ಸ್ಥಗಿತಗೊಳಿಸಲು ಯತ್ನಿಸಿವೆ.
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಂಡು ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.












Click it and Unblock the Notifications