ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಏಪ್ರಿಲ್ 15: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗಿದ್ದು, ಇನ್ನೂ ಮೂರು ದಿನ ಮಳೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್ 15ರಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ.
ಕರ್ನಾಟಕದ ವಿವಿಧೆಡೆ ಬುಧವಾರ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಗದಗ, ಬೀದರ್, ಹಾವೇರಿ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದ್ದು, ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ ಮಳೆಯಾಗಲಿದೆ?
ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಮೈಸೂರು, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ರಾಯಚೂರು, ಯಾದಗಿರಿ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಸಾಧಾರಣ ಮಳೆಯಾಗುವುದಾಗಿ ತಿಳಿದುಬಂದಿದೆ. ಏಪ್ರಿಲ್ 17ರವರೆಗೂ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.

ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಹಾಗೂ ಮೈಸೂರಿನಲ್ಲಿ ಏಪ್ರಿಲ್ 15 ಹಾಗೂ ಏಪ್ರಿಲ್ 16ರಂದು ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ ಹಾಗೂ ಗದಗ ಹೊರತುಪಡಿಸಿ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಏಪ್ರಿಲ್ 15ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ದಾಖಲು
ಏಪ್ರಿಲ್ 15 ಹಾಗೂ 16ರಂದು ಹೆಚ್ಚಿನ ಮಳೆಯಾಗಲಿದ್ದು, ಏಪ್ರಿಲ್ 17ರಂದು ಚದುರಿದಂತೆ ಮಳೆಯಾಗಲಿರುವುದಾಗಿ ತಿಳಿದುಬಂದಿದೆ. ಆನಂತರ ಬಿಸಿಲು ಹೆಚ್ಚಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿಯೂ ಮಳೆಯಾಗಿರುವುದಾಗಿ ತಿಳಿದುಬಂದಿದೆ.
Recommended Video

ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ಮಳೆ ಸಾಧ್ಯತೆ
ಕರ್ನಾಟಕವಲ್ಲದೇ ತಮಿಳುನಾಡು, ಕೇರಳ, ತೆಲಂಗಾಣದಲ್ಲಿಯೂ ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿರುವುದಾಗಿ ಇಲಾಖೆ ತಿಳಿಸಿದೆ. ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಮಾಹಿತಿ ನೀಡಿದೆ.












Click it and Unblock the Notifications