ಕಾಫಿನಾಡಲ್ಲಿ ನಿಲ್ಲದ ಮಳೆಯ ಆರ್ಭಟ, ಧರೆಗುರಳಿದ ಬೃಹತ್ ಮರಗಳು
ಚಿಕ್ಕಮಗಳೂರು, ಆಗಸ್ಟ್.12: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಭಾನುವಾರ ಮಳೆಯ ಆರ್ಭಟ ಮುಂದುವರೆದಿದೆ. ಅದರಲ್ಲೂ ಮಲೆನಾಡು ಭಾಗವಾದ ಶೃಂಗೇರಿ, ಎನ್ ಆರ್ ಪುರ, ಕೊಪ್ಪ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ತುಂಗಾ, ಭದ್ರಾ ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಭದ್ರಾ ನದಿಯ ಆರ್ಭಟಕ್ಕೆ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು- ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಈ ವರ್ಷವೇ 13 ನೇ ಭಾರಿ ಮುಳುಗಿದೆ.
ಅಲ್ಲದೇ, ಮಳೆಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಚಿಕ್ಕಮಗಳೂರು - ಮಂಗಳೂರು ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.

ಇನ್ನು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಬಾಬಾಬುಡನ್ ಗಿರಿ ಸಮೀಪ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತ ಉಂಟಾದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವೀಕೆಂಡ್ ಹಿನ್ನೆಲೆಯಲ್ಲಿ ಗಿರಿಗೆ ಬಂದ ಸಾವಿರಾರು ಪ್ರವಾಸಿಗರು ಪರದಾಡುವಂತಾಗಿದ್ದು, ಕಿಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಪ್ರವಾಸಿಗರು ಪರದಾಡುವಂತಾಯಿತು.

ಇದು ಮಲೆನಾಡಿನ ಸ್ಥಿತಿಯಾದರೆ ಕರಾವಳಿ ಭಾಗದಲ್ಲಿ ಶನಿವಾರ ರಾತ್ರಿಯಿಂದ ಜಡಿ ಮಳೆ ಸುರಿಯುತ್ತಲೇ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಹಲವೆಡೆ ಅಡಿಕೆ ಮರಗಳು ಉರುಳಿಬಿದ್ದಿದ್ದು, ಅಲ್ಲೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.












Click it and Unblock the Notifications