June total Rain: ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆ, ವಲಯವಾರು ವರದಿ ಇಲ್ಲಿದೆ
ಬೆಂಗಳೂರು, ಜುಲೈ 01: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದಿದೆ. ಮೊದಲ ತಿಂಗಳಲ್ಲೇ ವಾಡಿಕೆಯಷ್ಟು ಮಳೆ ಆಗಿದ್ದು, ಅಲ್ಪವೇ ಕೊರತೆ ಉಂಟಾಗಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಸದ್ಯ ಅಬ್ಬರಿಸುತ್ತಿರುವ ಮಳೆ ಜೂನ್ ತಿಂಗಳಲ್ಲಿ ಕೊರತೆ ಸೃಷ್ಟಿ ಮಾಡಿದೆ, ಉತ್ತಮ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಹೌದು, ಜೂನ್ ತಿಂಗಳಲ್ಲಿ ವಾಡಿಕೆ 199ಮಿಲಿ ಮೀಟರ್ ಮಳೆ ಆಗಬೇಕಿತ್ತು. ಸದ್ಯ ಜೂನ್ 30 ದಿನಗದಲ್ಲಿ ಒಟ್ಟು 194 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮೂಲಕ ತಾಪಮಾನದ ತೀವ್ರತೆ ಇಳಿಕೆಗೆ, ಕೃಷಿ ಚಟುವಟಿಕೆಗೆ ಮುಂಗಾರು ಆಧಾರವಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಿದೆ.

ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ಹಾಗಾದರೆ ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ ವಾಡಿಕೆ ಆಗಬೇಕು, ಆಗಿದ್ದೆಷ್ಟು, ಶೇಕಡಾವಾರು ಪ್ರಮಾಣ, ಕೊರತೆ ಪ್ರಮಾಣದ ಮಾಹಿತಿಗೆ ಮುಂದೆ ತಿಳಿಯಿರಿ. ಜೊತೆಗೆ ಮುನ್ಸೂಚನೆ ಸಹ ನೀಡಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ 67 ಮಿಲಿ ಮೀಟರ್ ಆಗಬೇಕಿದ್ದು, ವಾಸ್ತವದಲ್ಲಿ 116 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹೀಗಾಗಿ ಇಲ್ಲಿ ಜೂನ್ ತಿಂಗಳಲ್ಲಿ ಶೇಕಡಾ 73ರಷ್ಟು ಅಧಿಕ ಮಳೆ ದಾಖಲಾಗಿದೆ.
ಉತ್ತರ ಒಳನಾಡಿನಲ್ಲಿ ವಾಡಿಕೆ 106 ಮಿಲಿ ಮೀಟರ್ ಆಗಬೇಕಿತ್ತು, ಸದ್ಯ ಆಗಿರುವುದು 151 ಮಿಲಿ ಮೀಟರ್ ಮಳೆ ಸುರಿದಿದೆ. ಇದರಿಂದ ಈ ಭಾಗದ ಜಿಲ್ಲೆಗಳಲ್ಲಿ ಜೂನ್ ನಲ್ಲಿ ಶೇಕಡಾ 43ರಷ್ಟು ಅಧಿಕ ಮಳೆ ಬಂದಂತಾಗಿದೆ. ಹೀಗಿದ್ದರೂ ಈ ಭಾಗದ ಒಂದಷ್ಟು ಜಿಲ್ಲೆಗಳಲ್ಲಿ ರೈತರು ಮಳೆಗೆ ಕಾಯುತ್ತಿದ್ದಾರೆ.
ಮಲೆನಾಡಿನಲ್ಲಿ ಮಳೆ ಕೊರತೆ
ಮಲೆನಾಡಿನಲ್ಲಿ ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ವಾಡಿಕೆ 384 ಮಿಲಿ ಮೀಟರ್ ನಷ್ಟು ಮಳೆ ನಿರೀಕ್ಷೆ ಇತ್ತು. ಆದರೆ ಆಗಿದ್ದು ಕೇವಲ 280ಮಿಲಿ ಮೀಟರ್ ನಷ್ಟು ಮಳೆ. ಇದರಿಂದಾಗಿ ಜೂನ್ ನಲ್ಲಿ ಮಲೆನಾಡು ವಲಯಕ್ಕೆ ಬರೋಬ್ಬರಿ -27 ರಷ್ಟು ಮಳೆ ಕೊರತೆ ಆಗಿದೆ. ಸದ್ಯ ಇನ್ನೊಂದು ವಾರದಲ್ಲಿ ಈ ಭಾಗದಲ್ಲಿ ಅತ್ಯುತ್ತಮ ಮಳೆ ಬರುವ ಮುನ್ಸೂಚನೆ ಇದ್ದು, ಜುಲೈ ತಿಂಗಳಲ್ಲಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕರಾವಳಿಗೂ ಮಳೆ ಆಗಿದ್ದೆಷ್ಟು, ಕೊರತೆ ಎಷ್ಟು?
ಮೂರು ಜಿಲ್ಲೆಗಳನ್ನು ಒಳಗೊಂಡಿರುವ ಕರಾವಳಿ ಭಾಗದಲ್ಲಿ ಜೂನ್ ತಿಂಗಳಲ್ಲಿ ಒಟ್ಟು 873 ಮಿಲಿ ಮೀಟರ್‌ನಷ್ಟು ಮಳೆ ಆಗಬೇಕಿತ್ತು. ನಿರೀಕ್ಷೆಯಷ್ಟು ಬಾರದ ಮಳೆ ಕೇವಲ 738ರಷ್ಟು ಮಳೆ ಆಗಿದೆ. ಹೀಗಾಗಿ ಇಲ್ಲಿ -15ರಷ್ಟು ಮಳೆ ದಾಖಲಾಗಿದೆ. ಸದ್ಯ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಜುಲೈನಲ್ಲಿ ಮಳೆ ಕೊರತೆ ಆಗದಂತೆ ಸುರಿಯವು ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.
ಭಾರೀ ಮಳೆಗೆ ಕಾಯುತ್ತಿರುವ ರೈತರು
ಒಟ್ಟಾರೆಯಾಗಿ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆದ ಹಿನ್ನೆಲೆಯಲ್ಲಿ -3 ರಷ್ಟು ಮಳೆ ಕೊರತೆ ಉಂಟಾಗಿದೆ. ಒಂದೆಡೆ ಜೋರು ಮಳೆ ಆದರೂ ಅಲ್ಲಿ ಕೊರತೆ ಉಂಟಾಗಿದೆ. ಮತ್ತೊಂದೆಡೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ ಆಗಿದೆ.
ಹೀಗಿದ್ದರೂ ರೈತರು ಭಾರೀ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹಾವೇರಿ, ಗದಗ, ಕೊಪ್ಪಳ, ಬೀದರ್, ದಾವಣಗೆರೆ, ಬಳ್ಳಾರಿ, ಇನ್ನಿತರ ಭಾಗದ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಜೋಳ, ಶೇಂಗಾ, ಹೆಸರು, ಬೆಂಡಿ ಇನ್ನಿತರ ಬೆಳೆ ಬೆಳೆದಿದ್ದಾರೆ. ಆದರೆ ಈ ಬೆಳೆಗಳಿಗೆ ಅಗತ್ಯದಷ್ಟು ನೀರು ಸಿಗದೇ ಬಣಗುಡುತ್ತಿದೆ. ತುಂತುರು ಮಳೆ ಸಾಕಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಕಳೆದ ವಾರ ಜೋರಾಗಿ ಅಬ್ಬರಿಸಿದ್ದ ಮಳೆಯ ಪರಿಣಾಮವಾಗಿ ಕರಾವಳಿ ಹಾಗೂ ಮಲೆನಾಡಿಗೆ ಒಂದಷ್ಟು ಮಳೆ ಬಂದಂತಾಗಿದೆ. ಇಲ್ಲವಾದರೆ ಇನ್ನಷ್ಟು ಮಳೆ ಕೊರತೆ ಅನುಭವಿಸಬೇಕಾಗಿತ್ತು ಎಂದು ಐಎಂಡಿ ವರದಿ ನೋಡಿದರೆ ತಿಳಿಯುತ್ತದೆ. ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆ ಆರ್ಭಟ ಹೆಚ್ಚಾಗಿರುತ್ತದೆ. ಜುಲೈನಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.












Click it and Unblock the Notifications