ಕರ್ನಾಟಕದ ಈ 3 ಜಿಲ್ಲೆಗಳಲ್ಲಿ ಮಳೆ ಉಳಿದ ಭಾಗದಲ್ಲಿ ಚಳಿ ವಾತಾವರಣ: ಐಎಂಡಿ
Karnataka Imd Report: ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದ್ದು, ವಿವಿಧ ಭಾಗದಲ್ಲಿ ಚಳಿ ಹೆಚ್ಚಳವಾಗಿದೆ. ಇನ್ನು ಐದು ದಿನಗಳ ಅವಧಿಗೆ ರಾಜ್ಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇಲ್ಲ. ಅಲ್ಲದೇ ಹವಾಮಾನದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ನವೆಂಬರ್ 13ರ ಹವಾಮಾನ ವರದಿ ಇಲ್ಲಿದೆ.
ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಮಾನ್ಸೂನ್ ಮಳೆ ದುರ್ಬಲವಾಗಿದೆ. ಇನ್ನು ರಾಜ್ಯದಾದ್ಯಂತ ಈಶಾನ್ಯ ಮಾನ್ಸೂನ್ ದುರ್ಬಲವಾಗಿತ್ತು. ರಾಜ್ಯದಾದ್ಯಂತ ಬಹುತೇಕ ಒಣಹವೆ ಇದ್ದು, ವಿವಿಧ ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ. ಇನ್ನು ಕನಿಷ್ಠ ತಾಪಮಾನದಲ್ಲಿ ರಾಜ್ಯದಾದ್ಯಂತ ದೊಡ್ಡ ಬದಲಾವಣೆ ಇಲ್ಲ. ಆದರೆ ಚಳಿ ಪ್ರಮಾಣ ಹೆಚ್ಚಳವಾಗಲಿದೆ ಎಂದು ಐಎಂಡಿ ವರದಿ ಮಾಡಿದೆ.

ಈ ಜಿಲ್ಲೆಗಳಲ್ಲಿ ಮಳೆ: ರಾಜ್ಯದಾದ್ಯಂತ ಈಶಾನ್ಯ ಮಾನ್ಸೂನ್ ದುರ್ಬಲವಾಗಿದ್ದರೂ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ನವೆಂಬರ್ 13ರ ಗುರುವಾರದಂದು ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಇನ್ನು ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ.
ನವೆಂಬರ್ 18ರ ವರೆಗೆ ಮಳೆ: ಇನ್ನು ನವೆಂಬರ್ 18ರ ವರೆಗೆ ರಾಜ್ಯದ ವಿವಿಧ ಭಾಗದಲ್ಲಿ ಸಾಧಾರಣ ಮಳೆ ಆಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಚಾಮರಾಜನಗರದಲ್ಲಿ ಇನ್ನೂ ಐದು ದಿನಗಳ ವರೆಗೆ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ನವೆಂಬರ್ 18ಕ್ಕೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹೇಗಿದೆ ಹವಾಮಾನ ?
ಬೆಂಗಳೂರಿನಲ್ಲಿ ಮುಖ್ಯವಾಗಿ ಮುಂದಿನ 24 ಗಂಟೆ ಅವಧಿಯಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆಲ್ಸಿಯಸ್ ಹಾಗೂ 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಇನ್ನು ಮುಂದಿನ 48 ಗಂಟೆಯ ಅವಧಿಯಲ್ಲೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಈ ಭಾಗದಲ್ಲಿ ಒಣಹವೆ: ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 13 ಡಿಗ್ರಿ ಸೆಲ್ಸಿಯಸ್ ಬೀದರ್ ಜಿಲ್ಲೆಯಲ್ಲಿ ದಾಖಲಾಗಿದೆ ಎಂದು ಐಎಂಡಿ ಹೇಳಿದೆ.












Click it and Unblock the Notifications