Karnataka Rains: ಕರಾವಳಿಗೆ ಮತ್ತೆ ವರುಣಾರ್ಭಟ, ಒಳನಾಡು ಜಿಲ್ಲೆಗಳಿಗೆ ಏನಿದೆ ಮುನ್ಸೂಚನೆ?
ಬೆಂಗಳೂರು, ಜುಲೈ 03: ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಭರ್ಜರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗಾದರೆ ಯಾವ ಭಾಗದ, ಯಾವ ಜಿಲ್ಲೆಗಳಿಗೆ ಅತ್ಯಧಿಕ ಮಳೆ, ಎಲ್ಲೆಲ್ಲಿ ಸಾಮಾನ್ಯ ಮಳೆ ಎಂಬ ಮಾಹಿತಿ ಮತ್ತು ಐದು ದಿನದ ಮಳೆ ಮುನ್ಸೂಚನೆ ಇಲ್ಲಿದೆ.
ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಅಬ್ಬರಿಸಿದ್ದ ಮುಂಗಾರು ಮಳೆ ಸದ್ಯಕ್ಕೆ ಹಲವು ಜಿಲ್ಲೆಗಳಲ್ಲಿ ತಣ್ಣಗಾಗುವ ಮುನ್ಸೂಚನೆ ನೀಡಿದೆ. ಹವಾಮಾನದಲ್ಲಿನ ಬದಲಾವಣೆ ಸಂದರ್ಭದಲ್ಲಿ ಕಳೆದ ಶನಿವಾರದಿಂದ ಮಲೆನಾಡು, ಕರಾವಳಿಯಲ್ಲಿ ಭಾರೀ ಆರ್ಭಟ ಮುಂದುವರೆಸಿತ್ತು. ಇದೇ ವೇಳೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಗೆ ಮಳೆ ಆಗಿರಲಿಲ್ಲ.

ಇದೀಗ ಮತ್ತೆ ಮುಂಗಾರು ಹಲವು ಜಿಲ್ಲೆಗಳಿಗೆ ಶಾಕ್ ನೀಡಿದೆ. ಕೇವಲ ಕರ್ನಾಟಕ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ದಿನ ಅಂದರೆ ಇಂದಿನಿಂದ ಜುಲೈ 5ರವರೆಗೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಹೀಗಾಗಿ ಮೂರು ಜಿಲ್ಲೆಗಳಿಗೆ ಮಾತ್ರ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.
ಎರಡು ದಿನ 'ಆರೆಂಜ್ ಅಲರ್ಟ್'
ನಂತರದ ಎರಡು ದಿನ ಕರಾವಳಿಯಲ್ಲೇ ಮಳೆ ತೀವ್ರಗೊಳ್ಳಲಿದೆ. ಜುಲೈ 6 ಮತ್ತು 7 ರಂದು ಕರಾವಳಿಯ ಇದೇ ಮೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಆಗುವ ಲಕ್ಷಣ ಇದೆ. ಆದ್ದರಿಂದ ಈ ಎರಡು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ಇಲ್ಲಿ ಜೋರಾಗಿದ್ದ ಮಳೆಯಬ್ಬರ ಇದೀಗ ಇಳಿಕೆ ಆಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು, ದಾವಣಗೆರೆ, ಬಳ್ಳಾರಿ, ಕೋಲಾರ ಇನ್ನಿತರ ಕಡೆಗಳಲ್ಲಿ ಸಾಮಾನ್ಯ ಮಳೆ ಬರುವ ಮುನ್ಸೂಚನೆ ಇದೆ.
ಉತ್ತರ ಕರ್ನಾಟಕಕ್ಕೆ ಮಳೆ ಕಡಿಮೆ, ಆತಂಕದಲ್ಲಿ ರೈತ
ವಿಪರ್ಯಾಸವೆಂದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸುಸೂತ್ರವಾಗಿ ಮಳೆ ಆಗುತ್ತಿಲ್ಲ. ಇಲ್ಲಿ ಕೆಲವು ಜಿಲ್ಲೆಗಳಿಗೆ ಮಳೆ ಬಂದರೆ ಮತ್ತೆ ಕೆಲವು ಜಿಲ್ಲೆಗಳಿಗೆ ಮಳೆಯೇ ಆಗುತ್ತಿಲ್ಲ. ರೈತರು ಉತ್ತಮ ಮಳೆಗೆ ಕಾಯುತ್ತಿದ್ದಾರೆ. ಕಳೆದ ವಾರಪೂರ್ತಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಅಲ್ಲಲ್ಲಿ ಸೋನೆ, ಹಗುರ ಮಳೆ ಕಂಡು ಬಂತೆ ವಿನಃ ವ್ಯಾಪಕ ಮಳೆಯೇ ಆಗಿಲ್ಲ.
ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮಳೆಯಾಶ್ರಿತ ಬೆಳೆ ಬೆಳೆದ ರೈತರು ಆತಂಕದಲ್ಲಿದ್ದಾರೆ. ಇನ್ನೂ ಇದೇ ಭಾಗದಲ್ಲಿ ನೀರಾವರಿ ಹೊಂದಿರುವ ರೈತರು ತಕ್ಕ ಮಟ್ಟಿಗೆ ನಿರಾಳರಾಗಿದ್ದಾರೆ. ಏಕೆಂದರೆ ಇಲ್ಲಿನ ನದಿಗಳು ಹರಿವು ಹೆಚ್ಚಾದ ಕಾರಣ ಅವರಿಗೆ ನೀರಿನ ಆತಂಕ ದೂರವಾಗಿದೆ.
ಬೆಂಗಳೂರಿನಲ್ಲಿ ಬಿಸಿಲಿನ ದರ್ಶನ
ಇನ್ನೂ ಬೆಂಗಳೂರಿನಲ್ಲಿ ಮತ್ತೆ ಬಿಸಿಲಿನ ದರ್ಶನವಾಗುತ್ತಿದೆ. ಹಗುರ ಮಳೆ ಬರಬಹುದು ಎಂದು ಐಎಂಡಿ ತಿಳಿಸಿದೆ. ಇದರ ಹೊರತು ಇಲ್ಲಿನ ವಾತಾವರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಜೋರು ಮಳೆಯ ಬಗ್ಗೆ ಯಾವುದೇ ಎಚ್ಚರಿಕೆ ಇಲ್ಲ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.












Click it and Unblock the Notifications