ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಮತ್ತೆ ಅನ್ಯಾಯ, ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಕರವೇ ಎಚ್ಚರಿಕೆ
ಬೆಂಗಳೂರು: ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂಬ ಬೇಡಿಕೆಯನ್ನು ಮತ್ತೆ ಕೈಬಿಟ್ಟಿರುವ ರೈಲ್ವೇ ಇಲಾಖೆಯ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಕೇವಲ ಭಾಷಾ ಅನ್ಯಾಯವಲ್ಲ, ಕನ್ನಡಿಗರ ಸ್ವಾಭಿಮಾನ ಮತ್ತು ಹಕ್ಕುಗಳ ಮೇಲಿನ ನೇರ ದಾಳಿ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಿಂದೆಯೇ ರೈಲ್ವೇ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ನಡೆಸುವಂತೆ ಒತ್ತಾಯಿಸಿ ಕರವೇ ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿತ್ತು. ಆ ಹೋರಾಟಗಳ ಫಲವಾಗಿ ಕನ್ನಡದಲ್ಲೂ ಪರೀಕ್ಷೆ ನಡೆಸುವ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಹೊರಗಿಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರೈಲ್ವೇ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಕನ್ನಡದಲ್ಲಿ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕೆಂದು ಗಟ್ಟಿಯಾಗಿ ಒತ್ತಾಯಿಸಿದ್ದೇವೆ. ರೈಲ್ವೇ ಸಚಿವ ವಿ.ಸೋಮಣ್ಣ ಅವರೂ ಕೂಡ ಕನ್ನಡದಲ್ಲಿ ಪರೀಕ್ಷೆ ನಡೆಸಲು ಸೂಚಿಸಿದ್ದರು. ಆದರೂ ಇಷ್ಟರಲ್ಲೇ ಮತ್ತೆ ಕನ್ನಡವನ್ನು ಕೈಬಿಟ್ಟು ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಟೀಕಿಸಿದ್ದಾರೆ.
ಬೇರೆ ಭಾಷೆ ಕಲಿತು ಪರೀಕ್ಷೆ ಬರೆಯುವುದು ಬೇಡ
"ರೈಲ್ವೇಯ ಯಾವುದೇ ಪರೀಕ್ಷೆಯಾಗಲಿ, ಅದು ಕನ್ನಡದಲ್ಲೂ ಕಡ್ಡಾಯವಾಗಿ ನಡೆಯಬೇಕು. ಕನ್ನಡಿಗರು ಇನ್ನೊಂದು ಭಾಷೆ ಕಲಿತು ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆಯನ್ನು ಕರವೇ ಎಂದಿಗೂ ಒಪ್ಪುವುದಿಲ್ಲ" ಎಂದು ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಈ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ, ರಾಜ್ಯಾದ್ಯಂತ ತೀವ್ರ ಹೋರಾಟಗಳನ್ನು ಆಯೋಜಿಸಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.
ರೈಲ್ವೇ ಕಚೇರಿಗಳ ಮುಂದೆ ಧರಣಿ, ಬಂದ್, ರಸ್ತೆ ತಡೆ ಸೇರಿದಂತೆ ಹೋರಾಟದ ತೀವ್ರ ಸ್ವರೂಪಗಳನ್ನು ಕೈಗೊಳ್ಳಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ. "ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಕರವೇ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವುದು ದೊಡ್ಡ ಅಡ್ಡಿಯಾಗುತ್ತದೆ. ವಿಷಯ ತಿಳಿದಿದ್ದರೂ ಭಾಷಾ ಅಡಚಣೆಯಿಂದ ಅಂಕ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಗ್ರಾಮೀಣ ಪ್ರದೇಶ, ಸರ್ಕಾರಿ ಶಾಲೆಗಳಿಂದ ಬಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಭಾಷೆಯೇ ದೊಡ್ಡ ಅಡೆತಡೆಯಾಗುತ್ತದೆ. ಇದು ಸಾಮಾಜಿಕ-ಆರ್ಥಿಕ ಹಿಂದುಳಿದ ವರ್ಗಗಳನ್ನು ವ್ಯವಸ್ಥಿತವಾಗಿ ಹೊರಗುಳಿಸುವಂತಾಗುತ್ತದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಪರೀಕ್ಷೆ ಬರೆಯುವಾಗ ಭಾಷೆಯ ಭಯ ಅಭ್ಯರ್ಥಿಗಳ ಮೇಲೆ ಹೆಚ್ಚುವರಿ ಮಾನಸಿಕ ಒತ್ತಡ ತರುತ್ತದೆ. ಇದು ಆತ್ಮವಿಶ್ವಾಸ ಕುಗ್ಗಿಸಿ, ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಲದೆ ಉದ್ಯೋಗ ಅವಕಾಶಗಳಲ್ಲಿ ರಾಜ್ಯದ ಪಾಲು ಕಡಿಮೆಯಾಗುವ ಭೀತಿ ಕೂಡ ಇದೆ. ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ, ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ರಾಜ್ಯದ ಪಾಲು ಕುಸಿಯುವ ಆತಂಕವೂ ಇದೆ.












Click it and Unblock the Notifications