ಈ ಕಾರಣಕ್ಕೆ ಬೆಳಗಾವಿ ಅಧಿವೇಶನ ಒಂದು ವಾರ ವಿಸ್ತರಿಸಿ: ಸಭಾಧ್ಯಕ್ಷರಿಗೆ ಆರ್.ಅಶೋಕ್ ಪತ್ರ
Belagavi Winter Session 2025: ಕರ್ನಾಟಕ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ 2025 ಡಿಸೆಂಬರ್ 08 ರಿಂದ 19ರವರೆಗೆ ನಡೆಯಲಿದೆ. ಇದರಲ್ಲಿ ಸದ್ಯ ಎಂಟು ಕಳೆದಿದೆ. ಕಾರಣಾಂತರಗಳಿಂದ 10 ದಿನಗಳ ಅಧಿವೇಶನದಲ್ಲಿ 2 ದಿನದ ಅಧಿವೇಶನದ ಸಮಯವು ಮೊಟುಕುಗೊಂಡಿರುತ್ತದೆ. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದು ಅಧಿವೇಶನ ವಿಸ್ತರಣೆ ಬಗ್ಗೆ ಮನವಿ ಮಾಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ಕೋರಿ ಆರ್.ಅಶೋಕ್ ಅವರು ಪತ್ರ ಮುಖೇನ ಕೋರಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದಸ್ಯರು ಪ್ರಸ್ತಾಪ ಮಾಡಿರುವ ಹಲವು ಗಂಭೀರ ವಿಷಯಗಳಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್ನೂ ಉತ್ತರ ನೀಡಬೇಕಿದೆ. ಇದರ ಜೊತೆಗೆ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುದಾನ ಬಳಕೆಯ ಕಳಪೆ ಸಾಧನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಸದಸ್ಯರುಗಳಿಗೆ ಇನ್ನೂ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ.

ಈ ನಿಟ್ಟಿನಲ್ಲಿ ನನ್ನ ಮನವಿಯನ್ನು ಪರಿಗಣಿಸಿ, ಸಭಾಧ್ಯಕ್ಷರು ವಿಧಾನಮಂಡಲದ ಅಧಿವೇಶನವನ್ನು ಒಂದು ವಾರಗಳ ವಿಸ್ತರಣೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾಗಿರುವ ಬಳಷ್ಟು ವಿಷಯಗಳು ಬಾಕಿ ಇವೆ. ಮುಂದಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಅಧಿವೇಶನ ವಿಸ್ತರಣೆಗೆ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಸದ್ಯ ಈ ಬಗ್ಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ಪತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡುವ ನಿರೀಕ್ಷೆ ಇದೆ.
47 ಇಲಾಖೆಗೆ ಅನುದಾನ ಹಂಚಿಕೆ, ವೆಚ್ಚ ಆಗಿದ್ದೆಷ್ಟು?
ಪ್ರಸಕ್ತ 2025-26 ನೇ ಆರ್ಥಿಕ ಸಾಲಿನ 8.5 ತಿಂಗಳು ಕಳೆದು ಕೇವಲ 3.5 ತಿಂಗಳು ಬಾಕಿ ಇದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಸರ್ಕಾರದ 47 ಇಲಾಖೆಗಳಿಗೆ ಬರೋಬ್ಬರಿ 4.09 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದ್ದಾರೆ. ಆ ಹಣದಲ್ಲಿಈವರೆಗೂ ಕೇವಲ 2.06 ಲಕ್ಷ ಕೋಟಿ ಅನುದಾನ ವೆಚ್ಚವಾಗಿದೆ. ಇದು ಕರ್ನಾಟಕ ರಾಜ್ಯ ಸರ್ಕಾರ ಕಾರ್ಯವೈಖರಿಗೆ ಈ ಅಂಕಿ-ಅಂಶ ಕನ್ನಡಿ ಹಿಡಿದಿದೆ ಎಂದು ಆರ್.ಅಶೋಕ್ ಅವರು ಟ್ವಿಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇಲಾಖೆಗಳ ಸಾಧನೆ ತೀರಾ ಕಳಪೆ
ವಿಶೇಷವಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಹಾಗೂ ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಇಲಾಖೆಗಳ ಸಾಧನೆ ತೀರಾ ಕಳಪೆಯಾಗಿದೆ. ಐಟಿ - ಬಿಟಿ ಇಲಾಖೆಯಲ್ಲಿ ಕೇವಲ ಶೇಕಡಾ 20ರಷ್ಟು, ಕಾರ್ಮಿಕ ಇಲಾಖೆಯಲ್ಲಿ ಕೇವಲ ಶೇಕಡಾ 29ರಷ್ಟು ಮತ್ತು ಆರ್ ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇಕಡಾ 30ರಷ್ಟು ಅನುದಾನ ವೆಚ್ಚವಾಗಲಿದೆ. ಅನವಶ್ಯಕ ಹೇಳಿಕೆಗಳು, ಕ್ಷುಲ್ಲಕ ರಾಜಕೀಯ, ಕುಚೋದ್ಯದಲ್ಲೇ ಕಾಲಹರಣ ಮಾಡುವ ಈ ಇಬ್ಬರೂ ಸಚಿವರು, ಇನ್ನಾದರೂ ತಮ್ಮ ಇಲಾಖೆಗಳ ಕರ್ತವ್ಯ ನಿರ್ವಹಣೆ ಬಗ್ಗೆ ಗಮನಹರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications