Darshan Thoogudeepa: ಅಂಜನಾದ್ರಿ ಬೆಟ್ಟದಲ್ಲಿ ಅಪ್ಪು- ಡಿ ಬಾಸ್ ಫ್ಯಾನ್ಸ್ ಜೈಕಾರ: ಕೌಂಟರ್ ಕೊಟ್ಟು ಹಂಗಾಮ
ಗಂಗಾವತಿ ಡಿಸೆಂಬರ್ 13: ಅಂಜನಾದ್ರಿ ಬೆಟ್ಟದಲ್ಲಿ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ಹೈ ಡ್ರಾಮವೇ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಂಜನಾದ್ರಿ ಬೆಟ್ಟದಲ್ಲಿ ದರ್ಶನಕ್ಕಾಗಿ ತೆರಳಿದ್ದ ಯುವಕರ ಎರಡು ಗುಂಪುಗಳಲ್ಲಿ ಒಂದು ಗುಂಪು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಪರ ಜೈಕಾರ ಕೂಗಿದರೆ ಇದಕ್ಕೆ ಕೌಂಟರ್ ಕೊಡುವಂತೆ ಮತ್ತೊಂದು ಗುಂಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪರ ಜೈಕಾರ ಹಾಕಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಂದು ಐತಿಹಾಸಿಕ ಹನುಮಮಾಲಾ ವಿಸರ್ಜನೆ ನಡೆಯುತ್ತಿದೆ. ಇದಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗಿನ ಜಾವ ಏಕಕಾಲಕ್ಕೆ ಮಾಲಾಧಾರಿಗಳು ಆಗಮಿಸಿದ್ದು, 575 ಮೆಟ್ಟಿಲು ಹತ್ತಿ ಆಂಜನೇಯ ಸ್ವಾಮಿ ದರ್ಶನದ ಬಳಿಕ ಹನುಮಮಾಲೆಯನ್ನು ವಿಸರ್ಜನೆ ಮಾಡಿದರು. ಬೆಟ್ಟದ ಮುಂಭಾಗದಲ್ಲಿ ಭಕ್ತರ ಆಗಮನದಿಂದ ನೂಕು ನುಗ್ಗಲು ಉಂಟಾಗುತ್ತಿರುವ ದೃಶ್ಯಗಳು ಬೆಳಗ್ಗೆ ಕಂಡು ಬಂದಿವೆ. ಇದರ ನಿಯಂತ್ರಣಕ್ಕಾಗಿ ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸ ಪಡುತ್ತಿರುವುದು ಕೂಡ ಸಾಮಾನ್ಯವಾಗಿತ್ತು.

ಈ ವೇಳೆ ಹನುಮನಮಾಲೆ ಧರಿಸಿದ ಭಕ್ತರ ಗುಂಪೊಂದು ಡಿ-ಬಾಸ್ ಫೋಟೋ ಹಿಡಿದು ಜೈಕಾರ ಕೂಗಿದ್ದಾರೆ. ಇದಕ್ಕೆ ಕೌಂಟರ್ ಎಂಬಂತೆ ಮತ್ತೊಂದು ಭಕ್ತರ ಗುಂಪು ಅಪ್ಪು ಫೋಟೋ ಹಿಡಿದು ಜೈಕಾರ ಕೂಗಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟ್ಟಕ್ಕೆ ಬರುವುದು ದೇವರ ದರ್ಶನಕ್ಕಾಗಿ. ಕಿಡಿಗೇಡಿಗಳು ಕಿಡಿ ಹೊತ್ತಿಸುವಂತಹ ಕೆಲಸಕ್ಕಾಗಿ ದೇವಸ್ಥಾನಗಳನ್ನು ಬಿಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು. ದೇವರ ದರ್ಶನಕ್ಕಾಗಿ ಬಂದವರು ಅಷ್ಟು ಮಾತ್ರ ಮಾಡಿಕೊಂಡು ಹೋಗುವುದು ಸೂಕ್ತ. ನಟ ಪರ ಜೈಕಾರ ಕೂಗುವ ಸ್ಥಳ ಇದಲ್ಲ. ಧಾರ್ಮಿಕ ಸ್ಥಳದಲ್ಲಿ ದೇವರನ್ನು ನೆನೆಯಲು, ದೇವರಿಗೆ ಜೈಕಾರ ಹಾಕಲು ಮಾತ್ರ ಅನುಮತಿಸಬೇಕು ಎಂದು ಕೆಲ ಭಕ್ತರು ಒತ್ತಾಯಿಸಿದ್ದಾರೆ.
ಹನುಮನಮಾಲೆ ಧರಿಸಿದ ಭಕ್ತರ ಕೈಯಲ್ಲಿ ದೇವರ ಫೋಟೋ ಇರುವ ಬದಲಿಗೆ ಸಿನಿಮಾ ನಟರ ಫೋಟೋ ಇರುವುದು ಮಾತ್ರವಲ್ಲದೆ ಪುಣ್ಯ ಕ್ಷೇತ್ರಗಳಲ್ಲಿ ನಟರಿಗೆ ಜೈಕಾರ ಕೂಗುವುದು ಎಷ್ಟು ಸರಿ ಎಂದು ಸ್ಥಳೀಯರು ಕಿಡಿಗೇಡಿಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇಂತವರು ಭಕ್ತರ ವೇಷ ಧರಿಸಿ ಧಾರ್ಮಿಕ ಸ್ಥಳಗಳಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಾರೆ. ಇವರನ್ನು ಮಾರ್ಗಮಧ್ಯ ತಡೆದು ವಾಪಸ್ ಕಳುಹಿಸಬೇಕು ಎಂದು ಸ್ಥಳೀಯರು ದೇವಸ್ಥಾನ ಮಂಡಳಿಗೆ ಹಾಗೂ ಪೊಲೀಸರಿಗೆ ಒತ್ತಾಯಿಸಿದರು.
ತುಂಗಭದ್ರಾ ನದಿಯ ಸಮೀಪದಲ್ಲಿಯೇ ಅಂಜನಾದ್ರಿ ಬೆಟ್ಟ ಇರುವುದರಿಂದ ಸಾವಿರಾರು ಭಕ್ತರು ಗುರುವಾರ ರಾತ್ರಿಯೇ ಇಲ್ಲಿಗೆ ಬಂದು ನದಿಯಲ್ಲಿ ಸ್ನಾನ ಮಾಡಿ ಸೂರ್ಯೋದಯಕ್ಕೂ ಮೊದಲು ಆಂಜನೇಯನ ಮೂರ್ತಿಯ ದರ್ಶನ ಪಡೆದುಕೊಂಡರು. ಬಳಿಕ ಬೆಟ್ಟದ ಮೇಲಿಂದ ಸೊಗಸಾಗಿ ಕಾಣುವ ಸೂರ್ಯೋದಯದ ಸೊಬಗನ್ನೂ ಕಣ್ತುಂಬಿಕೊಂಡಿದ್ದು ಕಂಡು ಬಂತು. ರಾಮಾಯಣ ಕಾಲದ ಪೌರಾಣಿಕ ಇತಿಹಾಸವನ್ನು ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಳಿರು, ತೋರಣ, ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಧ್ವಜಗಳಿಂದ ಸಿಂಗಾರಗೊಂಡಿದೆ. ಇಂತಹ ಸ್ಥಳದಲ್ಲಿ ಕಿಡಿಗೇಡಿಗಳು ಕಿಡಿ ಹಚ್ಚುವ ಕೆಲಸ ಮಾಡಿದ್ದು ಕಂಡು ಬಂದಿದೆ.












Click it and Unblock the Notifications