ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ರುದ್ರಗೌಡ ಪಾಟೀಲ್?
ಕಲಬುರಗಿ, ಏಪ್ರಿಲ್ 04; ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ದಿನಾಂಕ ಘೋಷಣೆಯಾಗಿದೆ. ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಯಾರು ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ? ಎಂಬ ಲೆಕ್ಕಾಚಾರ ಶುರುವಾಗಿದೆ. ಜೈಲಿನಿಂದಲೇ ಒಬ್ಬರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆ ಇದೆ.
ರುದ್ರಗೌಡ ಪಾಟೀಲ್. ಕರ್ನಾಟಕದ ಬಹು ಜನರಿಗೆ ಈ ಹೆಸರು ಚಿರಪರಿಚಿತ. ರಾಜ್ಯದಲ್ಲಿಯೇ ಸಂಚಲನಕ್ಕೆ ಕಾರಣವಾಗಿರುವ ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್. ಸದ್ಯ ಜೈಲಿನಲ್ಲಿದ್ದಾರೆ. ಆದರೆ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಯಾವ ಪಕ್ಷದಿಂದ ಎಂಬ ಕುತೂಹಲ ಎಲ್ಲರಿಗೂ ಇದೆ.

ಕಲಬುರಗಿ ಮೂಲದ ರುದ್ರಗೌಡ ಪಾಟೀಲ್ 2023ರ ವಿಧಾನಸಭೆ ಚುನಾವಣೆ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು. ತನ್ನದೇ ಆದ ಯುವಕರ ಪಡೆ ಕಟ್ಟಿಕೊಂಡಿದ್ದರು, ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದು ಆನ್‌ಲೈನ್ ಪ್ರಚಾರ ಆರಂಭಿಸಿದ್ದರು. ಅಲ್ಲದೇ ಸಮಾಜ ಸೇವೆ ಮೂಲಕ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿದ್ದರು.
ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಸದ್ಯ ಸಿಐಡಿ ನಡೆಸುತ್ತಿದೆ. ಈ ಹಗರಣ ಬೆಳಕಿಗೆ ಬಂದ ಬಳಿಕ ಪರಾರಿಯಾಗಿದ್ದ ರುದ್ರಗೌಡ ಪಾಟೀಲ್‌ರನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದರು. ಆದರೆ ತುಮಕೂರಿನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಿಐಡಿ ಅವರನ್ನು ಪುನಃ ಬಂಧಿಸಿದ್ದು ಸದ್ಯ ಜೈಲಿನಲ್ಲಿದ್ದಾರೆ.

ಅಫಜಲಪುರದಿಂದ ಕಣಕ್ಕೆ?; ರುದ್ರಗೌಡ ಪಾಟೀಲ್ ಕಲಬುರಗಿ ಜಿಲ್ಲೆಯ ಅಫಜಲಪುರದಿಂದ ಕಣಕ್ಕಿಳಿಯಲು ಬಯಸಿದ್ದರು. ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಸುದ್ದಿಯೂ ಇತ್ತು. ಆದರೆ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಹಗರಣದ ಕಿಂಗ್‌ಪಿನ್‌ಗೆ ಹೇಗೆ ಟಿಕೆಟ್ ನೀಡಲಿದೆ?.
ರುದ್ರಗೌಡ ಪಾಟೀಲ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಏಪ್ರಿಲ್ 10ರಂದು ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅಫಜಲಪುರಕ್ಕೆ ಭೇಟಿ ನೀಡಲಿದ್ದಾರೆ. ಅಂದು ರುದ್ರಗೌಡ ಪಾಟೀಲ್ ಸಹೋದರ ಮತ್ತು ಅವರ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ರುದ್ರಗೌಡ ಪಾಟೀಲ್‌ಗೆ ಅಫಜಲಪುರದ ಟಿಕೆಟ್ ನೀಡಲಿದೆಯೇ? ಎಂಬುದು ಪ್ರಶ್ನೆಯಾಗಿದೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ್ದ ರುದ್ರಗೌಡ ಪಾಟೀಲ್ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಈ ವರ್ಷದ ಜನವರಿಯಲ್ಲಿ ಅವರು ಮತ್ತೆ ಜೈಲು ಸೇರಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ. ಈ ಸಂಬಂಧ ಕಲಬುರಗಿಯಲ್ಲಿರುವ ಅವರ ಮನೆ ಮೇಲೆ ಇಡಿ ದಾಳಿಯನ್ನು ನಡೆಸಿತ್ತು.
ರುದ್ರಗೌಡ ಪಾಟೀಲ್ ಅವರ ಸಹೋದರ ಮಹಾಂತೇಶ್ ಪಾಟೀಲ್ ಸೇರಿದಂತೆ ಹಲವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ದಾಳಿ ಮಾಡಿದ್ದರು. ಇಡಿ ದಾಳಿ ನಡೆದ ಮರುದಿನವೇ ತುಮಕೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಬಂಧಿಸಲು ಸಿಐಡಿ ಪೊಲೀಸರು ಆಗಮಿಸಿದ್ದರು. ಆಗ ಅವರನ್ನು ತಳ್ಳಿ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದರು. ಈ ಕುರಿತು ಪೊಲೀಸರು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಬಳಿಕ ರುದ್ರಗೌಡ ಪಾಟೀಲ್ ಕಲಬುರಗಿ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಜನವರಿಯಲ್ಲಿ ಅವರು ಮತ್ತೆ ಜೈಲು ಸೇರಿದ್ದಾರೆ. ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದ ಅವರಿಗೆ ಪಿಎಸ್‌ಐ ನೇಮಕಾತಿ ಹಗರಣ ಉರುಳಾಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅವರಿಗೆ ಟಿಕೆಟ್ ನೀಡಲಿದೆಯೇ?. ಜೈಲಿನಿಂದಲೇ ಅವರು ಚುನಾವಣಾ ಕಣಕ್ಕಿಳಿಯಲಿದ್ದಾರೆಯೇ? ಎಂಬುದು ಕುತೂಹಲದ ಸಂಗತಿಯಾಗಿದೆ.
ಅಫಜಲಪುರ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಎಂ. ವೈ. ಪಾಟೀಲ್. 2018ರ ಚುನಾವಣೆಯಲ್ಲಿ ಅವರು 71,735 ಮತಗಳನ್ನು ಪಡೆದು 61,141 ಮತಗಳನ್ನು ಪಡೆದ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ಸೋಲಿಸಿದ್ದರು.












Click it and Unblock the Notifications