ಪಿಎಸ್ಐ ಹಗರಣ; ಕಳಂಕಿತರಲ್ಲದವರನ್ನು ಪರಿಗಣಿಸಲು ಸಾಧ್ಯವೇ?
ಬೆಂಗಳೂರು, ಜೂನ್ 16: ಪಿಎಸ್‌ಐ ನೇಮಕ ಅಕ್ರಮ ಹಗರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಗರಣದ ಹಿನ್ನೆಲೆಯಲ್ಲಿ ಸರ್ಕಾರಿ ಹುದ್ದೆಯ ಕನಸು ಬಿಟ್ಟಿದ್ದ ನೂರಾರು ಅಭ್ಯರ್ಥಿಗಳಲ್ಲಿ ಮತ್ತೆ ಕೆಲಸದ ಭರವಸೆ ಮೂಡಿಸುವ ಬೆಳವಣಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದೆ.
ಪರೀಕ್ಷೆಯಲ್ಲಿ ಆಯ್ಕೆಯಾದವರ ಪೈಕಿ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವವರನ್ನು ಬಿಟ್ಟು ಉಳಿದವರೆಗೆ ಒಂದು ಸಣ್ಣ ಆಬ್ಜೆಕ್ಟಿವ್ ಪರೀಕ್ಷೆ ನಡೆಸಿ ಅವರನ್ನು ಹುದ್ದೆಗೆ ಪರಿಗಣಿಸಲು ಸಾಧ್ಯವೇ? ಎಂಬ ಕುರಿತು ಸರಕಾರದಿಂದ ಸೂಚನೆ ಪಡೆಯುವಂತೆ ಹೈಕೋರ್ಟ್ ಅಡ್ವೊಕೇಟ್ ಜನರಲ್‌ಗೆ ಸೂಚನೆ ನೀಡಿದೆ.

ಮರು ಪರೀಕ್ಷೆ ನಡೆಸುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಪೀಠ ಅಡ್ವೊಕೇಟ್ ಜನರಲ್‌ಗೆ 10 ದಿನಗಳಲ್ಲಿ ಸರಕಾರದ ನಿಲುವು ತಿಳಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿತು.
ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಂತೆ 35 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಉಳಿದ ಅಭ್ಯರ್ಥಿಗಳ ಪಾತ್ರವೇನೂ ಇಲ್ಲ. ಆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ಆಯ್ಕೆಯನ್ನು ಪರಿಗಣಿಸಲು ಸಾಧ್ಯವೇ? ಆರೋಪಿಯಲ್ಲದವರ ಸಾಮರ್ಥ್ಯ ಅಳೆದು ಆಯ್ಕೆ ಮಾಡಲು ಸಾಧ್ಯವೇ? ಎಂದು ವಿಭಾಗೀಯ ಪೀಠ ಸರ್ಕಾರವನ್ನು ಪ್ರಶ್ನಿಸಿದೆ.
ತಡೆಯಾಜ್ಞೆ ವಿಸ್ತರಣೆ; ಈ ಮಧ್ಯೆ, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ (ಆರೋಪಕ್ಕೆ ಗುರಿಯಾದವರನ್ನು ಹೊರತುಪಡಿಸಿ) ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಲಯಕ್ಕೆ ಸಲ್ಲಿಸಿದರು. ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್‌ಐ) ಹುದ್ದೆಗಳಿಗೆ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಸರಕಾರಕ್ಕೆ ಹೊರಡಿಸಿದ್ದ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಅ.19ರವರೆಗೆ ವಿಸ್ತರಿಸಿದೆ.
ಅಲ್ಲದೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು ಎಂದು ಸರಕಾರಕ್ಕೆ ಸೂಚಿಸಿ 2022ರ ಸೆ.28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅ.19ರವರೆಗೂ ವಿಸ್ತರಿಸಿ ವಿಭಾಗೀಯಪೀಠ ಆದೇಶಿಸಿತು.
ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಸರಕಾರ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ 2022ರ ಜು.19ರಂದು ಕೆಎಟಿ ಆದೇಶ ಹೊರಡಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications