ಪಿಎಸ್ಐ ನೇಮಕಾತಿ ಅಕ್ರಮ: ಪಿಎಸ್ಐ ಆಗಲು ಪೇದೆ ಮಮತೇಶ್ 55 ಲಕ್ಷ ಪಾವತಿ!
ಬೆಂಗಳೂರು, ಮೇ. 04: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಮಹತ್ವದ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಪಿಎಸ್ಐ ಆಗಲು ಪೊಲೀಸ್ ಪೇದೆ ಮಮತೇಶ್ ಗೌಡ ಪೊಲೀಸ್ ಅಧಿಕಾರಿಗಳಿಗೆ ಹಣ ಕೊಟ್ಟಿರುವ ಬಗ್ಗೆ ಕಳುಹಿಸಿರುವ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಪೊಲೀಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ರಕ್ತ ಚಂದನ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಪೇದೆ ಮಮಹತೇಶ್ ಗೌಡ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. 11 ಲಕ್ಷ ರೂ. ಮೌಲ್ಯದ ರಕ್ತ ಚಂದನವನ್ನು ಟಾಟಾ ಎಸ್ ಸಮೇತ ಜಪ್ತಿ ಮಾಡವ ಸೋಗಿನಲ್ಲಿ ದರೋಡೆ ಮಾಡಿ ಅಕ್ರಮ ಎಸಗಿದ್ದ. ಪಿಎಸ್ಐ ಆಗಿ ನೇಮಕವಾಗಿರುವ ಪೊಲೀಸ್ ಪೇದೆ ಮಮತೇಶ್ ಗೌಡ ಕೂಡ ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಎಸ್ಐ ಅಕ್ರಮದಲ್ಲಿ ಸಿಕ್ಕಿಬಿದ್ದರುವ ಮಮತೇಶ್ ಗೌಡ ಪಿಎಸ್ಐ ನೇಮಕಾತಿಗಾಗಿ ಯಾರಿಗೆ ಎಷ್ಟು ಹಣ ನೀಡಿದ್ದಾನೆ ಎಂಬ ವಿವರವುಳ್ಳ ವಾಟ್ಸಪ್ ಸಂದೇಶ ವೈರಲ್ ಆಗಿದೆ.

ಏ. 24 , 2021 ರಂದು ಮಮತೇಶ್3 ಎಂಬುವರಿಗೆ ರವಾನೆಯಾಗಿರುವ ಈ ಸಂದೇಶ ಕೂಡ ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದ್ದು ಎಂಬ ಆರೋಪ ಕೇಳಿ ಬಂದಿದ್ದು, ಈ ವಾಟ್ಸಪ್ ಸಂದೇಶ ಸ್ಕ್ರೀನ್ ಶಾಟ್ ಪೊಲೀಸರ ಮೊಬೈಲ್ ನಲ್ಲಿ ಹರಿದಾಡುತ್ತಿದೆ.

ಸಂದೇಶದಲ್ಲಿ ಏನಿದೆ?
ಇನ್ಸ್‌ಪೆಕ್ಟರ್ ಶ್ರೀನಿವಾಸ್ ಸರ್, ಕೆಲಸಕ್ಕೆ ಅಂತ ಮೋಹನ್ ಅವರಿಗೆ ಪ್ರಕಾಶ್ ಮುಂದೆ ನಿಂತು ನನ್ನ ಹತ್ತಿರ 55 ಲಕ್ಷ ರೂ. ತೆಗೆದುಕೊಂಡಿದ್ದಾರೆ. ಅವರ ಸ್ವಂತಕ್ಕೆ ಐದು ಲಕ್ಷ ರೂ. ತೆಗೆದುಕೊಂಡಿದ್ದಾರೆ. ಸಕ್ರಿ ಎಸಿಪಿ 22 ಲಕ್ಷ, 50 ಸಾವಿರ ರೂ. ಕೊಡಬೇಕು. ನಾಗೇಂದ್ರ 6 ಲಕ್ಷ, ಗಂಗಾಧರ್ 3 ಲಕ್ಷ , ಅಂಬರೀಶ್ 2 ಲಕ್ಷ, ಸೀನು ರೆಡ್ಡಿ 13 ಲಕ್ಷ ರೂ., ಮಿಥುನ್ ರೆಡ್ಡಿ 7. 5 ಲಕ್ಷ ರೂ., ಸರವಣ 3 ಲಕ್ಷ , ಸರ್ಫುದ್ದೀನ್ 16 ಲಕ್ಷ ನವೀನ್ ನನಗೆ ಹಣ ಕೊಡಬೇಕು ಎಂದು ಸಂದೇಶದಲ್ಲಿ ಬರೆಯಲಾಗಿದೆ. ಈ ಸಂದೇಶ ಮಮತೇಶ್ 3 ಎಂಬ ಮೊಬೈಲ್ ಗೆ ಕಳುಹಿಸಲಾಗಿದೆ. ಕೆಲಸಕ್ಕೆ ಅಂತ ಮೋಹನ್ ಅವರಿಗೆ 55 ಲಕ್ಷ ಕೊಟ್ಟಿದ್ದೀನಿ ಎಂದು ಮಮತೇಶ್ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.

ಆದರೆ ವಾಸ್ತವದಲ್ಲಿ ಅದು ಪಿಎಸ್ಐ ಕೆಲಸವೇ? ಇಲ್ಲವೇ ರಕ್ತ ಚಂದನ ಅಕ್ರಮ ಸಾಗಣೆ ಕೇಸಲ್ಲಿ ಕೆಲಸ ಆಗಲು ಹಣ ಕೊಟ್ಟಿದ್ದೆ ಎಂಬುದರ ಬಗ್ಗೆ ವಾಟ್ಸಪ್ ಸಂದೇಶದಲ್ಲಿ ಸ್ಪಷ್ಟತೆ ಇಲ್ಲ. ಆದರೆ ಈ ವಾಟ್ಸಪ್ ಸಂದೇಶದಲ್ಲಿನ ವಹಿವಾಟಿನ ವಿವರ ಮಾತ್ರ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಗೂ ಮುನ್ನ ಈ ಸಂದೇಶ ರವಾನಿಸಿದ್ದು, ಸಿಐಡಿ ಪೊಲೀಸರು ಈ ಸಂದೇಶ ಪಡೆದು ಅದರ ಹಿನ್ನೆಲೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇನ್‌ಸ್ಪೆಕ್ಟರ್ ಶ್ರೀನಿವಾಸ್ ಯಾರು?
ಮಮತೇಶ್ ಗೌಡ ರವಾನಿಸಿದ್ದಾನೆ ಎನ್ನಲಾದ ಸಂದೇಶ ಪಿಎಸ್ಐ ನೇಮಕಾತಿ ಅಕ್ರಮದ ತನಿಖಾಧಿಕಾರಿಗಳ ನಿದ್ದೆ ಗೆಡಿಸಿದೆ. ಮಮತೇಶ್ ಉಲ್ಲೇಖಿಸಿರುವ ಶ್ರೀನಿವಾಸ್ ಯಾರು?, ಮಮತೇಶ್ ಶ್ರೀನಿವಾಸ್ ಎನ್ನುವರಿಗೆ ಕಳುಹಿಸಿರುವ ಸಂದೇಶವೇ? ಮಮತೇಶ್‌ಗೂ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಗೂ ಇರುವ ಸಂಬಂಧವೇನು ? ಈ ಕುರಿತ ಮಾಹಿತಿ ಸಂಗ್ರಹಿಸಲು ಸಿಐಡಿ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.












Click it and Unblock the Notifications