Breaking; ಪಿಎಸ್‌ಐ ನೇಮಕಾತಿ ಆಡಿಯೋ; ಪ್ರಿಯಾಂಕ್ ಖರ್ಗೆಗೆ ನೋಟಿಸ್
ಬೆಂಗಳೂರು, ಏಪ್ರಿಲ್ 25; ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಆಡಿಯೋ ವಿಚಾರ ಹಗರಣದಲ್ಲಿ ಬಹಳ ಸದ್ದು ಮಾಡುತ್ತಿದೆ.
ಸೋಮವಾರ ವಿಚಾರಣೆಗೆ ಆಗಮಿಸುವಂತೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದಂತೆ ತಮಗೆ ಸಲ್ಲಿಕೆಯಾಗಿದೆ ಎನ್ನಲಾದ ಒಂದು ಆಡಿಯೋ ರೆಕಾರ್ಡ್ ಕೆಲವು ದಿನಗಳ ಹಿಂದೆ ಖರ್ಗೆಯವರು ಬಿಡುಗಡೆ ಮಾಡಿದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಹಗರಣದ ಬಗ್ಗೆ ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ತನಿಖೆಗೆ ಆದೇಶ ನೀಡಿದ್ದೆ.
ಇಂಥ ಕೃತ್ಯಗಳಿಂದ ಬಡ ಕುಟುಂಬದಿಂದ ಬಂದಂಥಹ ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು ಮೂಲೆ ಗುಂಪಾದರೆ ಸಮಾಜಕ್ಕೆ ಆಗುವ ನಷ್ಟ ಅಪಾರ ಎಂದು ಹೇಳಿದ್ದಾರೆ.

ಮಾನ್ಯ ಶಾಸಕ ಪ್ರಿಯಾಂಕ್ ಖರ್ಗೆ ಅವರೇ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಗೆ ಸಹಾಯವಾಗುವಂತೆ ಸಿಐಡಿ ಪೊಲೀಸರಿಗೆ ತಮ್ಮ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸಿ, ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ವಿನಂತಿಸಿದ್ದೆ.
ಈಗಲಾದರೂ ಖರ್ಗೆಯವರು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು ಹಾಗೂ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು ಅಕ್ರಮದಲ್ಲಿ ಒಳಗಾಗಿದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೆ ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications