Property Tax: ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: 2025ರ ಹಣಕಾಸು ವರ್ಷದಿಂದ ತೆರಿಗೆ ರಿಯಾಯಿತಿ
ಬೆಂಗಳೂರು, ಫೆಬ್ರವರಿ 23: ರಾಜ್ಯ ಸರ್ಕಾರ ಜನರ ಆಸ್ತಿಗಳ ದಾಖಲಾತಿಯನ್ನು ಡಿಜಿಟಲೀಕರಣ ಮಾಡುತ್ತಿದೆ. ಈಗಾಗಲೇ ಲಕ್ಷ ಲಕ್ಷ ಖಾತಾಗಳು 'ಇ'ಸ್ವರೂಪ ಪಡೆದುಕೊಂಡಿವೆ. ಇ-ಖಾತೆ ಉತ್ತೇಜಿಸುವ ಉದ್ದೇಶದಿಂದ ಬಿಬಿಎಂಪಿ ಸೇರಿದಂತೆ ರಾಜ್ಯ ಸರ್ಕಾರವು ಇ-ಖಾತಾ ಹೊಂದಿರುವ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ. ಆಸ್ತಿ ತೆರಿಗೆ ಪಾವತಿಯಲ್ಲಿ ಒಂದಷ್ಟು ರಿಯಾಯಿತಿ ಘೋಷಣೆ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇ-ಖಾತಾವನ್ನು ಸರ್ಕಾರ ಉತ್ತೇಜಿಸುತ್ತಿದೆ. ಕೈ ಬರಹ ದಾಖಲೆಗಳು ಇದೀಗ ಡಿಜಿಟಲ್ ದಾಖಲೆಗಳಾಗುತ್ತಿವೆ. ಡಿಜಿಟಲೀಕರಣ ಜೊತೆಗೆ ಆಸ್ತಿ ಮಾಲೀಕರಿಗೆ ವಿತರಣೆ ಕಾರ್ಯವು ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ, ಜನರು ಹೆಚ್ಚು ಹೆಚ್ಚು ನೋಂದಣಿ ಮಾಡಿಕೊಳ್ಳಬೇಕು, ಸಮರ್ಪಕವಾಗಿ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂಬ ಕಾರಣಕ್ಕೆ ರಿಯಾಯಿತಿ ನೀಡಲು ನಿರ್ಧರಿಸಿದೆ.

ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ನೀಡಲು ಮುಂದಾಗಿದೆ. ಈ ನಿರ್ಧಾರವನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಒಪ್ಪಿದ್ದಾರೆ. ಅವರು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ರಿಯಾಯಿತಿ ನೀಡಲು ಸಜ್ಜಾಗಿರುವ ಸರ್ಕಾರ, ಮುಂದಿನ ಹಣಕಾಸು ವರ್ಷದಿಂದ ಈ ರಿಯಾಯಿತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.
ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 144 (8)ರ ಅಡಿಯಲ್ಲಿ ಆರಂಭಿಕ ತೆರಿಗೆದಾರರಿಗೆ (ಮುಂಗಡ ತೆರಿಗೆದಾರರು) ಶೇ.5 ರಷ್ಟು ರಿಯಾಯಿತಿ ಕೊಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಇದೇ ಜನವರಿ ವರೆಗೆ ₹4,370 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ್ದು, ಈ ಬಾರಿ ಶೇಕಡಾ 83 ಪ್ರಗತಿಯಾಗಿದೆ.
ಕರ್ನಾಟಕ ಕಂದಾಯ ಇಲಾಖೆಯು ಭೂ/ಆಸ್ತಿ ವಹಿವಾಟುಗಳ ದಾಖಲೆಯನ್ನು ಡಿಜಿಟಲೀಕರಣಗೊಳಿಸಲು, 2024ರ ಅಕ್ಟೋಬರ್ ಇ-ಖಾತಾ ಆರಂಭಿಸಿತು. ಅಂದಿನಿಂದ ಹಂತ ಹಂತವಾಗಿ ಕೈ ಬರಹ ದಾಖಲೆ ಪತ್ರಗಳು ಟಿಜಿಟಲೀಕರಣಗೊಂಡವು. ಇದರಿಂದ ಆಸ್ತಿ ಪತ್ರಗಳನ್ನು ನೀವಿದ್ದ ಸ್ಥಳದಲ್ಲಿಯೇ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್‌ಗಳಲ್ಲಿ ಪಡೆಯಬಹುದಾಗಿದೆ. ಕಂದಾಯ ಕಚೇರಿಗಳಲ್ಲಿ ನಿಲ್ಲುವುದು, ಸಮಯ, ಉಳಿತಾಯವಾಗುತ್ತಿದೆ. ಇ-ಖಾತಾದಿಂದ ಆಸ್ತಿ ಲೆಕ್ಕಪತ್ರಗಳು, ದಾಖಲೆಗಳ ವಿತರಣೆ, ನೋಂದಣಿ ಸರಳವಾಗಿದೆ.

ಈವರೆಗೆ 14 ಲಕ್ಷ ಕರಡು ಖಾತಾಗಳನ್ನು ಡೌನ್‌ಲೋಡ್ ಮಾಡಲಾಗಿದೆ. 1 ಲಕ್ಷಕ್ಕೂ ಹೆಚ್ಚು ಇ-ಖಾತಾಗಳನ್ನು ಮಾಲೀಕರಿಗೆ ನೀಡಲಾಗಿದೆ. ಇದರಕ್ಕೆ ವೇಗ ನೀಡಲು ಬಿಬಿಎಂಪಿ ಮತ್ತು ಸರ್ಕಾರ ಅಭಿಯಾನ ಆರಂಭಿಸಿದೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಹೊಸ ಆಪ್, ವೆಬ್‌ಸೈಟ್ ಮೂಲಕ ಇ-ಖಾತೆ ವಿತರಣೆ ಮಾಡುತ್ತಿದೆ.
ಇ-ಖಾತೆ ಮತ್ತಷ್ಟು ಉತ್ತೇಜಿಸಲು 2025ರ ಜೂನ್ ಅಥವಾ ಜುಲೈ 31 ರ ಮೊದಲು ಇ-ಖಾತಾವನ್ನು ಪಡೆಯುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ಶೇಕಡಾ 5% ರಿಯಾಯಿತಿ ನೀಡಲು ಮುಂದಾಗಿದೆ. ಇದರ ಜಾರಿ ದಿನಾಂಕ ಶೀಘ್ರವೇ ಅಧಿಕೃತಗೊಳ್ಳಲಿದೆ.
ಹೊಸ ಖಾತಾ ಪಡೆಯಲು ಹೀಗೆ ಮಾಡಿ
ಹೊಸ ಖಾತಾ ಪಡೆಯಲು ಆಸ್ತಿ ಮಾಲೀಕರು ನೋಂದಣಿಯಾದ ದಿನಾಂಕದಿಂದ ಹೊಸ ಖಾತಾ ಪಡೆಯುವ ದಿನಾಂಕದವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ಬಿಬಿಎಂಪಿ (https://bbmp.karnataka.gov.in/newkhata.) ವೆಬ್‌ಸೈಟ್‌ನಲ್ಲಿ ಇಲ್ಲಿಯವರೆಗೆ ಖಾತಾ ಬೇಕೆಂದು 10,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಿಂದ ಪಾಲಿಕೆ ಆದಾಯವು ಹೆಚ್ಚುತ್ತಿದೆ.
ಸದ್ಯ ಬಿಬಿಎಂಪಿಯು ಕರಡು ಖಾತಾಗಳನ್ನು ಮನೆ ಮನೆಗೆ ಭೇಟಿ ನೀಡಿ ವಿತರಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಿದೆ. ಮಾಲೀಕರು ಆಸ್ತಿ ಪತ್ರ ವಿವರ ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬೇಕಿದೆ. ಮನೆ ಮನೆಗೆ ಭೇಟಿ ನೀಡಿ 23 ಲಕ್ಷ ಖಾತಾ ವಿತರಣೆ ಗುರಿ ಹಾಕಿಕೊಂಡಿದೆ. ಇದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿದೆ..












Click it and Unblock the Notifications