Property: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ; ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
Lokayukta Raid: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇರೆಗೆ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಾರೆ. ಹಾಗೆಯೇ ಇಂದು (ಜುಲೈ 29) ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಧಿಕಾರಿಗಳಿ ಬಿಗ್ ಶಾಕ್ ಎದುರಾಗಿದ್ದು, ಚಿತ್ರದುರ್ಗ, ಹಾಸನ, ಕೊಡಗು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರಿನಲ್ಳಿ ಬಿಬಿಎಂಪಿ, ಬಿಡಿಎ, ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಸರ್ಕಾರಿ ಇಂಜಿನಿಯರ್‌ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆ ಈ ಅಧಿಕಾರಿಗಳ ಮನೆಗೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಅಧಿಕಾರಿಗಳ ದೊಡ್ಡ ದೊಡ್ಡ ಬಂಗಲೆಗಳು, ಕೆಜಿಗಟ್ಟಲೆ ಚಿನ್ನಾಭರಣ, ಅಪಾರ ಪ್ರಮಾಣದ ಜಮೀನುಗಳ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?: ಚಿತ್ರದುರ್ಗ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ಏಕಕಾಲದ ದಾಳಿ ನಡೆಸಿದ್ದಾರೆ. ಹಿರಿಯೂರು ಟಿಹೆಚ್‌ಒ ಡಾ.ವೆಂಕಟೇಶ್ ಹಾಗೂ ಜೂ.ಇಂಜಿನಿಯರ್ ಆಂಜನೇಯ ಮೂರ್ತಿ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಎಂ.ಆಂಜನೇಯಮೂರ್ತಿ ಮನೆ, ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಎಂ.ಆಂಜನೇಯಮೂರ್ತಿ ಗೌರಿಬಿದನೂರು ತಾಲೂಕಿನ ಕಿರಿಯ ಇಂಜಿನಿಯರ್ ಆಗಿದ್ದಾರೆ. ಆಂಜನೇಯಮೂರ್ತಿ ಅವರ ಯಲಹಂಕದ ಮನೆ, ಜಕ್ಕೂರು ಕಾಂಪ್ಲೇಕ್ಸ್, ತುಮಕೂರು, ಮಧುಗಿರಿ ಸೇರಿದಂತೆ ಗೌರಿಬಿದನೂರು ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. 4 ತಂಡಗಳಾಗಿ ಲೋಕಾಯುಕ್ತ ಅಧಿಕಾರಿಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಜೆಕೆ ಆ್ಯಂಟೊಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಬೆಂಗಳೂರು, ಯಲಹಂಕ, ಗೌರಿಬಿದನೂರು ಮತ್ತು ತುಮಕೂರಿನ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಬೆಂಗಳೂರಿನಲ್ಲಿ ಮೂರು ವಾಸದ ಮನೆಗಳು ಮತ್ತು ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ದಾಖಲೆಗಳು ಪತ್ತೆ ಆಗಿವೆ. ಈ ವೇಳೆ ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ತುಮಕೂರಿನ ಲೋಕಾಯುಕ್ತ ತಂಡಗಳು ಕೂಡ ಭಾಗವಹಿಸಿವೆ ಎನ್ನುವ ಮಾಹಿತಿ ಇದೆ.
ಅಲ್ಲದೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿ ಇರುವ ಡಾ.ವೆಂಕಟೇಶ್ ಅವರ ಮನೆ ಹಾಗೂ ಆದಿವಾಲ ಗ್ರಾಮದ ಮನೆ ಮತ್ತು ಕ್ಲಿನಿಕ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಹಾಸ, ಕೊಡಗು ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: ಹಾಸನ, ಕೊಡಗು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಗಳಿಕೆ ಆರೋಪದ ಮೇಲೆ ಹಾಸನದ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಹಾಗೆಯೇ ಇದೇ ವೇಳೆ ಕೊಡಗು ಜಿಲ್ಲೆಯ ಕುಶಾಲನಗರದ ಫಾರ್ಮ್‌ಹೌಸ್ ಮೇಲೂ ದಾಳಿ ನಡೆದಿದೆ. ಆದಾಯಕ್ಕೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇರೆಯೆ ಲೋಕಾಯುಕ್ತ ಎಸ್ಪಿ ಸ್ನೇಹ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.












Click it and Unblock the Notifications