ಕಲಬುರ್ಗಿ ಹತ್ಯೆ: ರಾಜ್ಯ ಪೊಲೀಸರ ಹಿನ್ನಡೆಗೆ ಕಾರಣ ಏನಿರಬಹುದು?
ಇಡೀ ದೇಶ ಬೆಚ್ಚಿಬೀಳಿಸಿದ ಡಾ. ಕಲಬುರ್ಗಿ ಹಂತಕರು ಯಾರು? ಇವರ ಕೊಲೆ ಯಾತಕ್ಕಾಗಿ ಆಗಿರಬಹುದು? ಕೊಲೆಗಾರನ ಸೆರೆಹಿಡಿಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗುತ್ತಾರಾ? ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಅವರನ್ನು ಕೊಂದವರೇ ಕಲಬುರ್ಗಿ ಅವರನ್ನೂ ಸಾಯಿಸಿದ್ದಾರಾ? ಕೊಲೆ ಬೇರೆ ಯಾವುದಾದರೂ ಕಾರಣಕ್ಕೆ ನಡೆದಿರಬಹುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ತಿಂಗಳ ಮೇಲೆ 15 ದಿನವಾಯಿತು.. ಉತ್ತರ ಸಿಗುತ್ತಿಲ್ಲ..
ಅಪರಾಧಿಗಳನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಎಂದು ಸರಕಾರ ಘೋಷಣೆ ಮಾಡಿದಾಗಲೇ ಜನಸಾಮಾನ್ಯರಲ್ಲಿ ಮೊದಲು ಕಾಡುವ ಪ್ರಶ್ನೆಯೆಂದರೆ ಎಲ್ಲೋ ಪೊಲೀಸ್ ಇಲಾಖೆ ಹಿನ್ನಡೆ ಅನುಭವಿಸುತ್ತಿದೆಯೇ ಎನ್ನುವುದು.
ಭಾನುವಾರ ಬೆಳಗ್ಗೆ(ಆಗಸ್ಟ್ 30) ಹಂಪಿ ವಿವಿಯ ಮಾಜಿ ಕುಲಪತಿ, ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಹತ್ಯೆಯ ಸುದ್ದಿ ರಾಜ್ಯದೆಲ್ಲಡೆ ತಲ್ಲಣ ಮೂಡಿಸಿತ್ತು. ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು. ಪಲ್ಸರ್ ಬೈಕಿನಲ್ಲಿ ಬಂದಿದ್ದ ಪಾತಕಿಗಳು ದೇಶಕ್ಕೆ ತುಂಬಲಾರದ ನಷ್ಟ ಮಾಡಿ ಹೋಗಿದ್ದರು. (ರುದ್ರ ಪಾಟೀಲ್ ಗಾಗಿ ಹುಡುಕಾಟ)
ಘಟನೆ ನಡೆದ ಕೂಡಲೇ ತೀವ್ರಗತಿಯಲ್ಲಿ ಕಾರ್ಯಪ್ರವತ್ತರಾಗಿದ್ದ ರಾಜ್ಯ ಪೊಲೀಸರು, ಆರೋಪಿಗಳ ಪತ್ತೆಗೆ ಭಾರೀ ಬಲೆಯನ್ನೇ ಬೀಸಿದ್ದರು. ಘಟನೆ ನಡೆದ ಕೆಲವೇ ದಿನಗಳಲ್ಲಿ ಕೇಸನ್ನು ಸರಕಾರ ಸಿಐಡಿಗೂ ವರ್ಗಾಯಿಸಿತ್ತು. ಆದರೆ, ಘಟನೆ ನಡೆದು ನಲವತ್ತೈದು ದಿನವಾದರೂ ಹಂತಕರ ಬಂಧನವಾಗಿಲ್ಲ, ಸ್ಪಷ್ಟ ಸುಳಿವೂ ಇಲ್ಲಾ.. ಏನಾಗುತ್ತಿದೆ ಗೃಹ ಸಚಿವರೇ?
ಒಂದು ಕಾಲದಲ್ಲಿ ಅತ್ಯಂತ ಜಟಿಲವಾದ ಪ್ರಕರಣಗಳನ್ನು ಭೇದಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆಗೆ ಇಂದು ದೇಶದಲ್ಲಿ ಅದೇ ಹೆಮ್ಮೆಯ ಸ್ಥಾನಮಾನವಿದೆಯೇ? ಹತ್ತು ಹಲವಾರು ಅಪವಾದದ ನಡುವೆಯೂ ಹಲವಾರು ಕ್ಲಿಷ್ಟ ಕೇಸುಗಳನ್ನು ನಮ್ಮ ಪೊಲೀಸರು ದಾರಿಗೆಳೆದಿದ್ದದ್ದು ನಿಜವಾಗಿದ್ದರೂ, ಕಲ್ಬುರ್ಗಿ ಹತ್ಯೆ ಕೇಸಿನಲ್ಲಿ ವೈಫಲ್ಯ/ ಮುಜುಗರ ಅನುಭವಿಸುತ್ತಿರಲು ಕಾರಣ ಏನಿರಬಹುದು?
ಹಂತಕರು ಅಷ್ಟು ವೃತ್ತಿಪರತೆಯಿಂದ ಕೆಲಸ ಮಾಡಿ ಮುಗಿಸಿದ್ದಾರಾ ಅಥವಾ ಅಪರಾಧಿಗಳನ್ನು ವ್ಯವಸ್ಥಿತವಾಗಿ ರಕ್ಷಿಸುವ ಕೆಲಸ ಯಾರಿಂದಾದರೂ ನಡೆಯುತ್ತಿದೆಯಾ ಅಥವಾ ನಮ್ಮ ವ್ಯವಸ್ಥೆಯಲ್ಲಿ ಏನಾದರೂ ಲೋಪದೋಷವಿದೆಯೋ? (ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ)
ಕಲಬುರ್ಗಿ ಅವರ ಸಾವು ವೈಚಾರಿಕ ಹಿನ್ನೆಲೆಯಲ್ಲಿ ಆಗಿದೆ ಎಂಬ ಒತ್ತಡದ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಸಿಐಡಿಗೆ ಎರಡೇ ದಿನಗಳಲ್ಲಿ ಸರಕಾರ ವಹಿಸಿತ್ತು. ಪೊಲೀಸರು ಕರ್ನಾಟಕ, ಮಹಾರಾಷ್ಟ್ರ ಜಾಲಾಡಿದರೂ ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಮುಂದೆ ಓದಿ..

ಪಾನ್ಸರೆ ಮತ್ತು ದಾಬೋಲ್ಕರ್
ಕಲಬುರ್ಗಿ ಅವರ ಹತ್ಯೆಯಾದ ಮೇಲೆ 15 ದಿನ ನಿರಂತರವಾಗಿ ಅವರ ಅವರ ಮನೆಗೆ ಎಡತಾಕಿದ ಸಿಐಡಿ ಅಧಿಕಾರಿಗಳು, ಆರೋಪಿಯ ಸುಳಿವಿಗಾಗಿ ಮಹಾರಾಷ್ಟ್ರದತ್ತ ಮುಖ ಮಾಡಿದ್ದರು. ಕಾರಣ.. ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಮತ್ತು ದಾಬೋಲ್ಕರ್ ಕೊಲೆ ಪ್ರಕರಣದ ರೂಪದಲ್ಲೇ ಕಲಬುರ್ಗಿಯವರ ಹತ್ಯೆ ನಡೆದಿದೆ ಎನ್ನುವ ಕಾರಣಕ್ಕಾಗಿ.

ರುದ್ರ ಪಾಟೀಲ್
ರಾಜ್ಯ ಪೊಲೀಸರು ಪ್ರಮುಖವಾಗಿ ಮಹಾರಾಷ್ಟ್ರ ಕಡೆಗೆ ಗಮನ ಹರಿಸುತ್ತಿದ್ದದ್ದು, ಪಾನ್ಸರೆ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಮೀರ ಗಾಯಕ್ವಾಡನ ಕೈವಾಡ ಇರಬಹುದು ಎನ್ನುವ ಸಿಐಡಿ ಅಧಿಕಾರಿಗಳ ಅನುಮಾನದಿಂದಾಗಿ. ಸಮೀರ್ ಗಾಯಕ್ವಾಡ್ ಸಾಂಗ್ಲಿಯ ರುದ್ರ ಪಾಟೀಲನ ಹೆಸರು ಬಾಯಿ ಬಿಟ್ಟಿದ್ದರಿಂದ ಆತನ ಮೇಲೂ ಸಂಶಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, 20 ದಿನಗಳಿಂದ ಎಸ್‍ಐಟಿ ಸಹಯೋಗದಲ್ಲಿ ರುದ್ರ ಪಾಟೀಲ್ ಬೆನ್ನು ಬಿದ್ದಿದ್ದಾರೆ. ಅಲ್ಲಿದ್ದಾನೆ.. ಇಲ್ಲಿದ್ದಾನೆ ಊಹೂಂ.. ಪಾಟೀಲನ ಸುಳಿವೂ ಪತ್ತೆಯಾಗುತ್ತಿಲ್ಲ.

ಹಿಂದೂ ಮುಖಂಡರ ವಿಚಾರಣೆ
ಈ ಒಂದೇ ಆಯಾಮದಲ್ಲಿ ವಿಚಾರಣೆ ನಡೆಸದೇ, ಸಿಐಡಿ ಅರೆಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದಲ್ಲಿ ಪ್ರಣವಾನಂದ ಸ್ವಾಮೀಜಿ ಅವರನ್ನು ವಶಕ್ಕೆ ತೆಗೆದುಕೊಂಡು, ರಾಣೆಬೆನ್ನೂರು ಪೊಲೀಸ್ ಭವನಕ್ಕೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದೂ ಆಗಿದೆ. ಈ ಹಿಂದೆ ಸ್ವಾಮೀಜಿ ಕಲಬುರ್ಗಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಪ್ರಣವಾನಂದ ಶ್ರೀಗಳನ್ನು ವಶಕ್ಕೆ ಪಡೆದು ಗಂಟೆಗಟ್ಟಲೆ ವಿಚಾರಣೆ ನಡೆಸಿದ್ದೂ ಆಗಿದೆ. ಇದರ ಜೊತೆಗೆ ಹಲವು ಹಿಂದೂ ಪರ ಸಂಘಟನೆಗಳ ನಾಯಕರು, ಧಾರ್ಮಿಕ ಮುಖಂಡರನ್ನೂ ಖಾಕಿ ಪಡೆ ವಿಚಾರಿಸಿದ್ದಾಗಿದೆ.

ಆಸ್ತಿ ಸಂಬಂಧ ಕಲಹ?
ಪೊಲೀಸರು, ಕಲಬುರ್ಗಿಯವರ ಕುಟುಂಬದಲ್ಲಿ ಇರಬಹುದಾದ ಆಸ್ತಿ ಸಂಬಂಧಿತ ಕಲಹ ಏನಾದರೂ ಇದೆಯಾ ಎನ್ನುವುದನ್ನೂ ಕೂಡಾ ಇನ್ನೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನುವುದು ಆಫ್ ದಿ ರೆಕಾರ್ಡ್ ವರದಿ. ಅವರ ಸ್ನೇಹಿತರು ಮತ್ತು ಕುಟುಂಬಿಕರು ನೀಡುವ ಮಾಹಿತಿಯ ಪ್ರಕಾರ ಕಲಬುರ್ಗಿಯವರ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ, ಕಲಬುರ್ಗಿ ಮತ್ತು ಅವರ ಏಳು ಜನ ಸಹೋದರರಿಗೆ ಸಂಬಂಧಿಸಿದ ಸುಮಾರು 70 ಎಕರೆ ಕೃಷಿ ಭೂಮಿ ವಿಜಯಪುರದಲ್ಲಿದೆ. ಈ ಆಸ್ತಿಯನ್ನು ಕಲಬುರ್ಗಿ ಸಹೋದರರು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಏನೂ ತಕರಾರಿಲ್ಲ.

ಪೊಲೀಸ್ ತನಿಖೆಗೆ ಸ್ವಾಗತ
ಇನ್ನೊಂದು ಇರಬಹುದಾದ ಆಸ್ತಿ ವಿಚಾರದ ವ್ಯಾಜ್ಯವೆಂದರೆ ಕಲಬುರ್ಗಿಯವರ ಮಗಳು ಪೂರ್ಣಿಮಾಗೆ ಸಂಬಂಧಿಸಿದ್ದು. ಇಂಜಿನೀಯರ್ ಪದವೀಧರರಾಗಿರುವ ಪೂರ್ಣಿಮಾ ಅವರ ಪತಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಪೂರ್ಣಿಮಾ ಮತ್ತು ಆಕೆಯ ಪತಿಯ ಮನೆಯ ಕಡೆಯವರಿಗೆ ಆಸ್ತಿ ವಿಚಾರದಲ್ಲಿ ಕೊಂಚ ಮನಸ್ತಾಪಗಳಿದ್ದವು ಎನ್ನುವ ಸುದ್ದಿಯಿದೆ. ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸಲಿ ಅದಕ್ಕೆ ನಮ್ಮ ಸ್ವಾಗತವಿದೆ. ಆಸ್ತಿಗೆ ಸಂಬಂಧಪಟ್ಟ ಯಾವ ವಿವಾದವೂ ಕಲಬುರ್ಗಿಯವರ ಹತ್ಯೆಗೂ ಸಂಬಂಧವಿರಲು ಸಾಧ್ಯವೇ ಇಲ್ಲ ಎನ್ನುವುದು ಅವರ ಮಕ್ಕಳ ಖಚಿತ ಮಾತು.

ಪಲ್ಸರ್ ಇದ್ದವರ ವಿಚಾರಣೆ
ಪಾತಕಿಗಳು ಪಲ್ಸರ್ ಬೈಕಿನಲ್ಲಿ ಬಂದು ಕಲಬುರ್ಗಿಯವರನ್ನು ಹತ್ಯೆಗೈದಿರುವುದರಿಂದ ಆರ್ಟಿಒ ಸಹಾಯದೊಂದಿಗೆ ಪೊಲೀಸರು ಆಸುಪಾಸಿನ ಮೂರು ಜಿಲ್ಲೆಗಳಲ್ಲಿ ಪಲ್ಸರ್ ಹೊಂದಿರುವವರ ಮಾಹಿತಿಯನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದರಿಂದಲೂ ಪ್ರಯೋಜನವಾಗುತ್ತಿಲ್ಲ ಎನ್ನುವ ಮಾಹಿತಿಯಿದೆ.

ಎಡ ಮತ್ತು ಬಲಪಂಥೀಯರ ನಡುವೆ ದ್ವೇಷ
ಕೇಸಿನ ಅಪರಾಧಿ ಯಾರಿರಬಹುದು ಎನ್ನುವ ಚರ್ಚೆ ಸನಾತನ ಸಂಸ್ಥೆ, ಬಲಪಂಥೀಯರ ನಡುವೆ ಸುತ್ತಿ, ವಿನಾಕಾರಣ ಎಡ ಮತ್ತು ಬಲಪಂಥೀಯರ ನಡುವೆ ದ್ವೇಷಕ್ಕೆ ಕಾರಣವಾಗುತ್ತಿರುವ ಈ ಸಮಯದಲ್ಲಿ ಕೇಸನ್ನು ಸಿಬಿಐಗೆ ವಹಿಸಿದರೆ ಸೂಕ್ತವಲ್ಲವೇ ಎನ್ನುವ ಕೂಗೂ ಕೇಳಿಬರುತ್ತಿದೆ. (ಸಿಬಿಐ ಅನ್ನೋದು ಅದೊಂದು ನಂಬಿಕೆಯಾಗಿ ಉಳಿದಿದೆಯಾ ಎನ್ನುವುದೂ ಪ್ರಶ್ನೆಯೇ)

ಪ್ರಶಸ್ತಿ ಹಿಂದಕ್ಕೆ ನೀಡುತ್ತಿದ್ದಾರೆ
ಕಲಬುರ್ಗಿ ಹತ್ಯೆಯ ತನಿಖೆ ಸೂಕ್ತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ಕಾರಣಕ್ಕಾಗಿ ವಿಚಾರವಾದಿಗಳು, ಸಾಹಿತಿಗಳು ತಮಗೆ ದೊರಕಿರುವ ಪ್ರಶಸ್ತಿಗಳನ್ನು ಹಿಂದಕ್ಕೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳ ವಿರುದ್ಧವಾದ ಹೇಳಿಕೆಗಾಗಿ ಕಲಬುರ್ಗಿಯವರನ್ನು ಬಲಪಂಥೀಯ ಸಂಘಟನೆಯ ಹಿನ್ನೆಲೆಯವರು ಹತ್ಯೆ ಮಾಡಿರಬಹುದು ಎನ್ನುವುದು ಪೊಲೀಸರ ಬಲವಾದ ಅನುಮಾನ.

ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನಂಬಿಕೆ
ಎರಡು ವರ್ಷದ ಹಿಂದೆ ಬೆಂಗಳೂರಿನ ಕಾರ್ಪೋರೇಶನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯ (ಜ್ಯೋತಿ ಉದಯ್) ಮೇಲೆ ನಡೆದ ಮಾರಣಾಂತಿಕ ಹಲ್ಲೆ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆದರೆ ಇದುವರೆಗೂ ಪೊಲೀಸರಿಗೆ ತಪ್ಪಿತಸ್ಥನನ್ನು ಪತ್ತೆ ಹಚ್ಚಲಾಗಲಿಲ್ಲ. ಈಗ ಇಡೀ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ ಕಲಬುರ್ಗಿಯವರ ಹಂತಕರನ್ನು ಪೊಲೀಸರು ಆದಷ್ಟು ಬೇಗ ಪತ್ತೆಹಚ್ಚಿ ಸಾರ್ವಜನಿಕರಿಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿರುವ ನಂಬಿಕೆ ಮುಂದುವರಿಯುವಂತೆ ಮಾಡುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದಾರೆ.
-
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು









Click it and Unblock the Notifications