ರಾಜ್ಯದಲ್ಲಿ ಅಂತ್ಯಕ್ರಿಯೆ ಸಮಸ್ಯೆ: ಖಾಸಗಿ ಭೂಮಿ ಖರೀದಿಗೆ ಸರ್ಕಾರ ಕ್ರಮ
ಬೆಂಗಳೂರು: ಕರ್ನಾಟಕದಲ್ಲಿ ಸ್ಮಶಾನಗಳಿಗೆ ಭೂಮಿ ಕೊರತೆಯ ಸಮಸ್ಯೆ ಎದುರಾಗಿದೆ. ಸ್ಮಶಾನಕ್ಕೆ ಜಾಗ ನೀಡುವಂತೆ ಕೋರಿ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಕುರಿತು ಎಚ್ಚೆತ್ತಿರುವ ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳಿಂದ ಭೂಮಿ ಖರೀದಿಗೆ ಮುಂದಾಗಿದೆ. ಈ ಸಂಬಂಧ ಲಭ್ಯವಾಗುವ ಖಾಸಗಿ ಜಾಗಗಳನ್ನು ಸ್ಮಶಾನದ ಕೆಲಸಗಳಿಗೆ ಬಳಸುವಂತೆ ರಾಜ್ಯ ಕಂದಾಯ ಇಲಾಖೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಆರು ಸಾವಿರಕ್ಕಿಂತ ಅಧಿಕ ಇರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 29,400ಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಕಂದಾಯ ಸಚಿವರಾದ ಆರ್.ಅಶೋಕ ನೇತೃತ್ವದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದಿತ್ತು. ಹಲವು ಗ್ರಾಮಗಳಲ್ಲಿ ಸ್ಮಶಾನಕ್ಕೆ ಸ್ಥಳದ ಕೊರತೆ ಸೇರಿದಂತೆ ಕೆಲವು ವಿಚಾರಗಳ ಕುರಿತು ಚರ್ಚಿಸಲಾಗಿತ್ತು.

ರಾಜ್ಯದ ಶೇ.20ರಷ್ಟು ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ
ಸಭೆಯಲ್ಲಿ ಒಟ್ಟು 4,300ಕ್ಕೂ ಅಧಿಕ ಗ್ರಾಮಗಳಲ್ಲಿ (ರಾಜ್ಯದ ಶೇ. 20ರಷ್ಟು) ಸ್ಮಶಾನ ಭೂಮಿಯನ್ನು ಹೊಂದಿಲ್ಲ ಎಂಬುದನ್ನು ಸಚಿವರು , ಇಲಾಖೆಯ ಗಮನಕ್ಕೆ ತರಲಾಗಿತ್ತು. ಹೀಗಾಗಿಯೇ ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಮಶಾನಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಆರಂಭಿಸಿದ್ದರು. ಉತ್ತರ ಕರ್ನಾಟಕ ಹಾಗೂ ಮಲೆನಾಡು ಜಿಲ್ಲೆಗಳ ಹಳ್ಳಿಗಳಲ್ಲಿ ಜಾಗದ ಸಮಸ್ಯೆ ಹೆಚ್ಚಿದೆ ಎನ್ನಲಾಗಿದೆ.

1000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತ್ಯಕ್ರಿಯೆ ಸಮಸ್ಯೆ
ಜಾಗ ಕೊರತೆ ಇರುವ ಎಲ್ಲ ಗ್ರಾಮಗಳಲ್ಲೂ ಭೂ ಸ್ವಾಧೀನಪಡಿಸಿಕೊಳ್ಳುವುದು ಕಷ್ಟ ಸಾಧ್ಯ. ಅಧಿಕಾರಿಗಳು ಸುಮಾರು 1000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಇಲ್ಲ ಎಂದು ತಿಳಿಸಿದ್ದಾರೆ. ಜಮೀನು ಪಡೆಯಲು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ (ಕಂದಾಯ ಇಲಾಖೆ) ಸೂಚನೆಯಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರಿ ಭೂಮಿ ಇಲ್ಲದ ಗ್ರಾಮಗಳಲ್ಲಿ ಖಾಸಗಿ ಭೂಮಿ ತುರ್ತಾಗಿ ಖರೀದಿಸಿ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಲಾಗಿದೆ.

ಜನಸಂಖ್ಯೆಗೆ ತಕ್ಕಂತೆ ಭೂಮಿ ಗುರುತಿಸಿ
ಪ್ರತಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಉಪಯುಕ್ತ ಬಳಕೆಗಳಿಗಾಗಿ ಮಾರ್ಗದರ್ಶಿ ಮೌಲ್ಯ ಪಾವತಿಸಿ ಮೂರು ಬಾರಿ ಭೂಮಿ ಖರೀದಿಸಲು ಅಧಿಕಾರ ಹೊಂದಿದ್ದಾರೆ. ಜನಸಂಖ್ಯೆಗೆ ತಕ್ಕಂತೆ ಭೂಮಿಯನ್ನು ಗುರುತಿಸಿ ನಂತರ ಖರೀದಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅತ್ಯಂತ ಅವಶ್ಯಕತೆ ಇರುವ ಗ್ರಾಮಗಳಿಂದ ನಮಗೆ ಪತ್ರ ಬಂದಿದ್ದು, ಮೊದಲು ಆ ಗ್ರಾಮಗಳಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನ 1.3 ಕೋಟಿ ಜನರಿಗೆ 132 ಸ್ಮಶಾನಗಳು ಮಾತ್ರ
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸ್ಮಶಾನ ಜಾಗ ಕೊರತೆ ಇದೆ ಎನ್ನಲಾಗಿದೆ. ಬೆಂಗಳೂರಿನನ ಜನಸಂಖ್ಯೆ 1.3 ಕೋಟಿಯಷ್ಟಿದೆ. ಇಲ್ಲಿ ಕೇವಲ 132 ಸ್ಮಶಾನಗಳು ಮಾತ್ರ ಇವೆ. ಅವುಗಳಲ್ಲಿ ಹೂಳಲು ಜಾಗ ಸಮಸ್ಯೆ ಉಂಟಾಗಿದೆ. ಕೇವಲ ಕಳೆದ 20 ವರ್ಷದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಭೂಮಿ ಇಲ್ಲದ ಕೆಲವು ಪ್ರದೇಶಗಳಲ್ಲಿ ಮೃತಪಟ್ಟವರನ್ನು ಹೂಳಲು ಅಥವಾ ಅಂತ್ರ್ಯಕ್ರಿಯೆ ಮಾಡಲು ಬೇರೆ ಗ್ರಾಮ, ಸ್ಥಳಗಳಿಗೆ ಒಯ್ಯುತ್ತಾರೆ. ಇಲ್ಲಿ ಸಹ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಬೆಂಗಳೂರಿನ ಸರ್ವಜ್ಞನಗರದ ಕಥಲಿಪಾಳ್ಯದಲ್ಲಿರುವ 87 ಎಕರೆ ಪ್ರದೇಶದ ಸ್ಮಶಾನವೇ ರಾಜ್ಯದ ಅತಿದೊಡ್ಡ ಸ್ಮಶಾನ ಎನ್ನಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿದೇಶಗಳಲ್ಲಿ ಸಹ ಇಂತಹ ಸಮಸ್ಯೆ ಇದೆ. ಹೀಗಾಗಿ ಇಸ್ರೇಲ್ ದೇಶದಲ್ಲಿ ಬಹು ಅಂತಸ್ತಿನ ಭೂಗತ ಸಮಾಧಿ ಸುರಂಗಗಳನ್ನು ಹೊಂದಿದೆ. ಜರ್ಮನಿಯು ಕೆಲವು ವರ್ಷಗಳಿಗೊಮ್ಮೆ ಬಳಸಿದ ಸಮಾಧಿಗಳನ್ನೇ ಮರುಬಳಕೆ ಮಾಡುತ್ತದೇ. ಹಾಂಗ್ ಕಾಂಗ್ ಜನರು ಅಂತ್ಯಕ್ರಿಯೆಯ ನಂತರ ಚಿತಾಭಸ್ಮವನ್ನು ಮನೆಯಲ್ಲಿಯೇ ಸಂಗ್ರಹಿಟ್ಟುಕೊಳ್ಳುತ್ತಾರೆ ಎನ್ನಲಾಗಿದೆ.












Click it and Unblock the Notifications