ಹಿರಿಯರು ವೇಟಿಂಗ್, ಆದರೂ ಪ್ರಿಯಾಂಕ್ ಖರ್ಗೆಗೆ ಲಾಟರಿ: ಬಿಸಿಬಿಸಿ ಚರ್ಚೆ
ಬೆಂಗಳೂರು, ಮೇ 20: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆಗೆ ಎಂಟು ಮುಖಂಡರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡಾ..
ನವದೆಹಲಿಯಲ್ಲಿ ತಡರಾತ್ರಿ ಎಂಟು ನಾಯಕರಿಗೆ ಪ್ರಮಾಣ ವಚನ ಸ್ವೀಕರಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪ್ರಿಯಾಂಕ್ ಖರ್ಗೆಯವರಿಗೆ ಸಚಿವ ಸ್ಥಾನ ಖಚಿತ ಎನ್ನುವ ಲೆಕ್ಕಾಚಾರವಿದ್ದರೂ ಕೂಡಾ, ಹಿರಿಯರಿಗೆ ಮಣೆ ಹಾಕದೇ ಖರ್ಗೆ ಪುತ್ರಗೆ ಮಣೆ ಹಾಕಿರುವುದು ಕಾಂಗ್ರೆಸ್ ಪಾಳಯದಲ್ಲೂ ಅಲ್ಲಲ್ಲಿ ಬೇಸರಕ್ಕೆ ಕಾರಣವಾಗಿದೆ.

ಈಗಿರುವ ಶಾಸಕರಲ್ಲಿ ನಾನೇ ಹಿರಿಯ, ನನ್ನನ್ನು ಬಿಟ್ಟು ಎಂಟು ಜನರಿಗೆ ಸ್ಥಾನ ನೀಡಿರುವುದು ಸರಿಯಲ್ಲ ಎಂದು ದಾಖಲೆ ಸಂಖ್ಯೆಯಲ್ಲಿ ವಿಜಯ ಸಾಧಿಸಿರುವ ಹಳಿಯಾಳದ ಕಾಂಗ್ರೆಸ್ ಮುಖಂಡ, ಶಾಸಕ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕ್ ಖರ್ಗೆ ಅವರ ಎಂಟ್ರಿ ಸಾಮಾಜಿಕ ಜಾಲತಾಣದಲ್ಲೂ ಟ್ರೆಂಡಿಂಗ್ ನಲ್ಲಿದೆ. ಟ್ವಿಟ್ಟರ್ ನಲ್ಲಿ ಈ ಹ್ಯಾಷ್ ಟ್ಯಾಗ್ ಟಾಪ್ ನಲ್ಲಿದೆ. ಇಲ್ಲಿ ಪರವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಖರ್ಗೆ ಪ್ರತಿನಿಧಿಸುವ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಕೆಲವರ ವಾದವಾದರೆ, ಇಷ್ಟೆಲ್ಲಾ ಹಿರಿಯ ನಾಯಕರು ಕಾಯುತ್ತಿರಬೇಕಾದರೆ, ಯಾವ ಆಧಾರದಲ್ಲಿ ಇವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎನ್ನುವ ಪ್ರಶ್ನೆಯೂ ಕೇಳಲಾಗುತ್ತಿದೆ.
ಕುಟುಂಬ ರಾಜಕಾರಣ ಎನ್ನುವುದು ಕಾಂಗ್ರೆಸ್ಸಿನ ಭಾಗವಾಗಿದೆ, ಇಂದು ಅದು ಮತ್ತೆ ಮುಂದುವರಿಯುತ್ತಿದೆ ಎಂದು ಗಾಂಧಿ ಕುಟುಂಬದ ಜೊತೆಗೆ ಖರ್ಗೆ ಕುಟುಂಬ ಕಾಂಗ್ರೆಸ್ಸಿನಲ್ಲಿ ಆಧಿಪತ್ಯ ಸ್ಥಾಪಿಸುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.
ಪ್ರಿಯಾಂಕ್ ಖರ್ಗೆಯವರು ಮೂರು ಬಾರಿ, ಹಲವು ಸವಾಲುಗಳನ್ನು ಎದುರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ತಂದೆ ಎಐಸಿಸಿಯ ಅಧ್ಯಕ್ಷ, ಅವರ ಇಷ್ಟ ಅವರು ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲಿ. ಕೃಷ್ಣ ಭೈರೇಗೌಡ ಅವರನ್ನು ಯಾಕೆ ಇಲ್ಲಿ ಪರಿಗಣಿಸಲಿಲ್ಲ, ಇವರಿಗೂ ಮತ್ತು ಪ್ರಿಯಾಂಕ್ ಖರ್ಗೆಗೂ ಇರುವ ವ್ಯತ್ಯಾಸವಾದರೂ ಏನು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಇಂದೊಂದು ಆಂತರಿಕ ಲೋಕತಂತ್ರ ಎಂದು ಕೆಲವರು ಜರಿದರೆ, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಯು.ಟಿ.ಖಾದರ್ ಮುಂತಾದವರಿಗೆ ಸ್ಥಾನ ಕೊಡದೇ ಪ್ರಿಯಾಂಕ್ ಖರ್ಗೆಗೆ ಸ್ಥಾನ ನೀಡಿರುವುದು ಮುಂದಿನ ರಾಜಕೀಯದ ದಿಕ್ಸೂಚಿ ಎಂದು ಕೆಲವರು ಲೇವಡಿ ಮಾಡಿದ್ದಾರೆ.












Click it and Unblock the Notifications