'ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರತಾಪ್ ಸಿಂಹ ಸೂಕ್ತ ವ್ಯಕ್ತಿ'
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಜೋರಾಗಿದ್ದರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಹಲವು ತಿಂಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನಾಯಕತ್ವ ನಮಗೆ ಬೇಡ ಎಂದು ಹಲವರು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಹೈಕಮಾಂಡ್ ಚುನಾವಣೆ ಹೊಸ ಅಧ್ಯಕ್ಷರನ್ನು ನೇಮಿಸಬಹುದು ಅಥವಾ ವಿಜಯೇಂದ್ರ ಅವರನ್ನೇ ಮುಂದುವರಿಸಬಹುದು ಎಂಬ ದ್ವಂದ್ವ ನಿಲುವು ಕಮಲ ಪಾಳಯದಲ್ಲಿದೆ. ಈ ಕುರ್ಚಿಗೆ ಬಿಜೆಪಿಯಲ್ಲೇ ಹಲವರು ಪೈಪೋಟಿ ಬಿದ್ದಿದ್ದಾರೆ. ಆದರೆ ಈ ಕುರ್ಚಿಗೆ ಈಗ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಅದು ಬೇರೆ ಯಾರೂ ಅಲ್ಲ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ.
ಕೊಡಗು-ಮೈಸೂರು ಸಂಸದರಾಗಿ ಪಾರ್ಲಿಮೆಂಟ್‌ನಲ್ಲಿ ಮಿಂಚಿದ್ದ ಪ್ರತಾಪ್ ಸಿಂಹ ಅವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆದರೂ ಅವರ ಪಕ್ಷದ ಚಟುವಟಿಕೆಗಳಲ್ಲಿ ಇತ್ತೀಚೆಗೆ ಫುಲ್ ಆಕ್ಟೀವ್ ಆಗಿದ್ದಾರೆ. ತಮ್ಮ ಹೇಳಿಕೆಗಳ ಮೂಲಕ ಆಗಾಗ ಮುನ್ನೆಲೆಗೂ ಬರುತ್ತಿದ್ದಾರೆ. ಈಗ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂಬ ಸಲಹೆ ಕೇಳಿಬಂದಿದೆ. ಅದೂ ಕೂಡ ಎದುರಾಳಿ ಕಾಂಗ್ರೆಸ್ ಪಕ್ಷದಿಂದ ಅನ್ನೋದು ಅಚ್ಚರಿ ವಿಷಯ.

ಹೌದು ಪ್ರತಾಪ್ ಸಿಂಹ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಲಹೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಪ್ರಿಯಾಂಕ್ ಹಾಗೂ ಪ್ರತಾಪ್ ಸಿಂಹ ಅವರ ನಡುವೆ ಆರ್‌ಎಸ್‌ಎಸ್ ಕುರಿತು ವಾಕ್ಸಮರ ಮುಂದುವರಿದಿದೆ. ಈ ವಿಚಾರವಾಗಿ ಮಾತು ಮುಂದುವರಿಸಿರುವ ಪ್ರಿಯಾಂಕ್ ಖರ್ಗೆ ಅವರು ಪ್ರತಾಪ್ ಸಿಂಹ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಸಲಹೆ ನೀಡಿದ್ದಾರೆ.
ವಿಜಯೇಂದ್ರ ಹಠಾವೋ ಬಣದ ಕೈ ಮೇಲಾಗುತ್ತಿದೆ
ಬಿಜೆಪಿಯಲ್ಲಿ ವಿಜಯೇಂದ್ರ ಹಠಾವೋ ಬಣದ ಕೈ ಮೇಲಾಗುತ್ತಿರುವಂತಿದೆ. ನಿರ್ಲಕ್ಷಿಸಲ್ಪಟ್ಟಿದ್ದ ವಿಜಯೇಂದ್ರ ವಿರೋಧಿ ಬಣದ ಪ್ರತಾಪ್ ಸಿಂಹ ಎಂಬ ಔಟ್ ಡೇಟೆಡ್ ಅರೆಬರೆ ರಾಜಕಾರಿಣಿಗೆ ಬಿಜೆಪಿ ಐಟಿ ಸೆಲ್ ಮನ್ನಣೆ ನೀಡುತ್ತಿರುವುದು ನೋಡಿದರೆ ವಿಜಯೇಂದ್ರ ಅವರ ಕುರ್ಚಿ ಕಸಿಯಲು ಬಿಜೆಪಿ ಐಟಿ ಸೆಲ್ ಮುಂದೆ ನಿಂತಿರುವಂತಿದೆ. ಬಿವೈ ವಿಜಯೇಂದ್ರ ಅವರೇ, ಇದು ಐಟಿ ಸೆಲ್ ನೌಕರರಿಗೆ ವೇತನ ಏರಿಕೆ ಮಾಡದಿದ್ದಕ್ಕೆ ಉಂಟಾದ ಅಸಹನೆಯ ಪರಿಣಾಮವೇ? ಅಥವಾ ನಿಮ್ಮ ಶತ್ರುಗಳು ನಿಮ್ಮ ಐಟಿ ಸೆಲ್‌ನಲ್ಲೇ ಕುಳಿತಿದ್ದಾರೆಯೇ? ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.
ದೇಶದ್ರೋಹಿಗಳಿಗೆ ಪಾಸ್ ನೀಡಿ ಪಾರ್ಲಿಮೆಂಟ್‌ಗೆ ಬಾಂಬ್ ಹಾಕಲು ನೆರವಾಗಿದ್ದ ದೇಶ ವಿರೋಧಿ ಸಿಂಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಾಗಬಲ್ಲ. ಬಿಜೆಪಿಯ, ಆರ್‌ಎಸ್‌ಎಸ್ ಇತಿಹಾಸ ಮತ್ತು ಸಿದ್ಧಾಂತ ದೇಶದ ವಿರುದ್ಧವೇ ಇರುವುದರಿಂದ ಈ ವ್ಯಕ್ತಿ ಹೆಚ್ಚು ಅರ್ಹ. ಈ ಪ್ರತಾಪ್ ಸಿಂಹನಲ್ಲಿ ಸಾಮರ್ಥ್ಯ, ಅರ್ಹತೆ, ಸಾಧನೆ, ಪ್ರತಿಭೆ ಇದೆ ಎಂದು ನೀವು ಪರಿಗಣಿಸಿದ್ದರೆ ಅವರನ್ನೇ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿಬಿಡಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.












Click it and Unblock the Notifications