Anwar Manippady: ಅನ್ವರ್ ಮಾಣಿಪ್ಪಾಡಿಗೆ ಉಲ್ಟಾ ಹೊಡೆಯಲು ಎಷ್ಟು ಆಫರ್ ಬಂದಿದೆ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಕ್ಫ್ ಆಸ್ತಿ ಕಬಳಿಕೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಇದೀಗ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ವಿಜಯೇಂದ್ರ ಮೇಲಿನ ಆರೋಪ ಸುಳ್ಳು ಎಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
"ವಿಜಯೇಂದ್ರ ಮೇಲಿನ ಆರೋಪ ಸುಳ್ಳು" ಎನ್ನುತ್ತಿರುವ ಅನ್ವರ್ ಮಾಣಿಪ್ಪಾಡಿಯವರು ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಎಂದು ಪ್ರಿಯಾಂಕ್ ಕೇಳಿದ್ದಾರೆ. ಈ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೆಸರನ್ನ ಮೊದಲೇ ಬಾರಿಗೆ ಪ್ರಸ್ತಾಪಿಸಿದ್ದೇ ಅನ್ವರ್ ಮಣಿಪ್ಪಾಡಿಯವರು. ವಕ್ಫ್ ವರದಿಯನ್ನು ಮುಚ್ಚಿ ಹಾಕಲು ವಿಜಯೇಂದ್ರ ಕೋಟಿ ಕೋಟಿ ಆಮಿಷವೊಡ್ಡಿದ್ದಾರೆ ಎಂದು ಪ್ರತಿ ಮಾಧ್ಯಮಗಳಲ್ಲೂ ಘಂಟಾಘೋಷವಾಗಿ ಹೇಳಿದ್ದ ಮಾಣಿಪ್ಪಾಡಿಯವರು ಈಗ ವಿಜಯೇಂದ್ರರ ರಕ್ಷಣೆಗಾಗಿ ಮಾತು ಬದಲಿಸಲು ಎಷ್ಟು 'ಆಫರ್' ಬಂದಿದೆ? ಎಂದು ಕೇಳಿದ್ದಾರೆ.

ಕಾಂಗ್ರೆಸ್ ನಾಯಕರ ಹೆಸರನ್ನು ಬಹಿರಂಗಪಡಿಸುವ ಬದಲು ಅವರು ವಿಜಯೇಂದ್ರ ಅವರ ಹೆಸರನ್ನು ಮಾತ್ರ ಏಕೆ ಹೇಳಿದರು? ಮಾಣಿಪ್ಪಾಡಿಯವರ ವಕ್ಫ್ ವರದಿಯನ್ನು ಮುಚ್ಚಿ ಹಾಕುವ ಪ್ರಯತ್ನದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದರು. ಆ ಪತ್ರವನ್ನು ಈಗ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಮಾಣಿಪ್ಪಾಡಿಯವರ ಮತ್ತು ಬಿಜೆಪಿ ಗೆಳೆಯರ ನೆನಪುಗಳನ್ನು ರಿಫ್ರೆಶ್ ಮಾಡಲು ದಯವಿಟ್ಟು ವೀಡಿಯೊಗಳು ಮತ್ತು ಪತ್ರಿಕಾ ಲೇಖನಗಳನ್ನು ಅತ್ಯಂತ ಗಮನ ಕೊಟ್ಟು ನೋಡಲಿ. ಬಿಜೆಪಿ ಪಕ್ಷ, ಅವರ ಮಾಜಿ ಮುಖ್ಯಮಂತ್ರಿಗಳ ಹಾಗೂ ಅವರ ಅಧ್ಯಕ್ಷರ ಮರ್ಯಾದೆ ಉಳಿಸಲು, ನಿನ್ನೆ ಇಡೀ ರಾತ್ರಿ ಮಾಣಿಪ್ಪಾಡಿಯವರ ಕೈ ಕಾಲು ಹಿಡಿದು ಗೋಳಾಡಿರಬಹುದೇ? ಎಂದು ವ್ಯಂಗ್ಯವಾಡಿದ್ದಾರೆ. ಸತ್ಯಕ್ಕಾಗಿ ಹಾಗೂ ಸಮುದಾಯಕ್ಕಾಗಿ ಹುತಾತ್ಮರಾಗಲು ಸಿದ್ಧನಿದ್ದೇನೆ ಎಂದಿದ್ದ ಮಾಣಿಪ್ಪಾಡಿಯವರಿಗೆ ಈಗ ಏನಾಯಿತು? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.

ವಕ್ಫ್ ಆಸ್ತಿ ಕಬಳಿಕೆ ಮುಚ್ಚಿ ಹಾಕಲು ಬಿ.ವೈ.ವಿಜಯೇಂದ್ರ ಅವರು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಆರೋಪ ಮಾಡಿದ್ದರು. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಇಂದು ಯೂಟರ್ನ್ ಹೊಡೆದಿರುವ ಮಾಣಿಪ್ಪಾಡಿ ಅವರು ವಿಜಯೇಂದ್ರ ಮೇಲಿನ ಆರೋಪಗಳು ಸುಳ್ಳು ಎಂದಿದ್ದಾರೆ. ಬದಲಾಗಿ ಕಾಂಗ್ರೆಸ್‌ನಿಂದಲೇ ಕೋಟಿ ಕೋಟಿ ಆಫರ್ ಬಂದಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.
ವಿಜಯೇಂದ್ರ ಅವರು ನನಗೆ ಯಾವುದೇ ಲಂಚದ ಆಮಿಷ ನೀಡಿಲ್ಲ. 2012ರಲ್ಲಿ ವಿಜಯೇಂದ್ರ ಯಾರೆಂದೇ ನನಗೆ ಗೊತ್ತಿರ್ಲಿಲ್ಲ. ಆದರೆ ಆಗ ಕಾಂಗ್ರೆಸ್‌ನವರೇ ಲಂಚ ನೀಡುವುದಾಗಿ ಆಫರ್ ನೀಡಿದ್ದರು. ಆದರೆ ವರದಿ ಜಾರಿ ಮಾಡುವ ಕುರಿತು ಬಿಜೆಪಿ ವಿರುದ್ಧ ಮಾತನಾಡಿ, ಪ್ರಧಾನಿಗಳಿಗೆ ಪತ್ರ ಬರೆದಿದ್ದು ಕೂಡ ನಿಜ. ಸಿಬಿಐ ತನಿಖೆ ಮಾಡುವಂತೆಯೂ ಒತ್ತಾಯಿಸಿದ್ದೆ. ಆದರೆ ಬಿಜೆಪಿಯವರು ನನಗೆ ಯಾವುದೇ ಆಫರ್ ನೀಡಿಲ್ಲ. ನಾನೇನಾದ್ರೂ ವರದಿಯನ್ನು ಸಿಬಿಐಗೆ ಕೊಟ್ಟರೆ ಕಾಂಗ್ರೆಸ್‌ನವರ ಬುಡಕ್ಕೆ ಬರುತ್ತದೆ ಎಂದು ಯೂಟರ್ನ್ ಹೊಡೆದಿದ್ದಾರೆ.












Click it and Unblock the Notifications