ಕೊವಿಡ್-19 ಚಿಕಿತ್ಸೆ: ಮಾಜಿ ಸಚಿವರಿಂದ ಆಘಾತಕಾರಿ ವಿಷಯ ಬಹಿರಂಗ!
ಬೆಂಗಳೂರು, ಜೂ. 26: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ಕೊಡುವುದು ಸವಾಲಾಗುತ್ತಿದೆ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಕೊಡುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಲಾಗಿದೆ. ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಬೇಕು ಎಂದು ಸೂಚಿಸಿದೆ. ಚಿಕಿತ್ಸೆಗೆ ಇಂತಿಷ್ಟು ಎಂದು ದರವನ್ನು ನಿಗದಿ ಮಾಡಿದೆ.
''ಖಾಸಗಿ ಆಸ್ಪತ್ರೆಗಳ ಫೀವರ್ ಕ್ಲಿನಿಕ್ ಸರ್ಕಾರವೇ ನಡೆಸಲಿ''
ಅದರೊಂದಿಗೆ ನಿನ್ನೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿ ಮಾಡಿದ್ದ ದರಕ್ಕೆ ಒಪ್ಪಿಗೆ ಪಡೆಯಲಾಗಿದೆ. ಇನ್ನೇನು ಸ್ವಲ್ಪ ಆತಂಕ ಕಡಿಮೆಯಾಯ್ತು. ಸಾಧ್ಯವಾದಷ್ಟು ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ದೊರೆಯಲಿದೆ ಎಂದು ಕೊಳ್ಳುತ್ತಿರುವಾಗಲೇ ಅಘಾತಕಾರಿ ಸುದ್ದಿ ಬಂದಿದೆ.
ಬೆಂಗಳೂರು ಲಾಕ್ಡೌನ್ ಕುರಿತು ಯಡಿಯೂರಪ್ಪ ಅಚ್ಚರಿ ಹೇಳಿಕೆ

ಖಾಸಗಿ ಆಸ್ಪತ್ರೆಗಳು ಒಪ್ಪಿಲ್ಲ
ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಒಪ್ಪಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಯಡಿಯುರಪ್ಪ ಅವರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ಪರಿಸ್ಥಿತಿ ಆಘಾತಕಾರಿ ಹಂತ ತಲುಪುತ್ತಿದೆ. ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಜೊತೆಗೆ ಸರ್ಕಾರ ಹೇಳಿದಂತೆ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಒಪ್ಪಿಲ್ಲ ಎಂದು ಎಚ್.ಕೆ. ಪಾಟೀಲ್ ಎಚ್ಚರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಭರ್ತಿ
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳೆಲ್ಲವೂ ಭರ್ತಿಯಾಗಿವೆ ಎಂಬ ಮಾಹಿತಿ ಇದೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಇದೇ ಸನ್ನಿವೇಶ ಎದುರಾಗಿದೆ. ಈಗ ಲಭ್ಯವಿರುವ ಹಾಸಿಗೆಗಳಿಗಿಂತ 10 ಪಟ್ಟು ಹೆಚ್ಚಿಗೆ ಹಾಸಿಗೆಗಳನ್ನು ಸಿದ್ದಪಡಿಸಿಕೊಳ್ಳುವ ಅನಿವಾರ್ಯತೆ ಇದೆ. ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಪತ್ರದಲ್ಲಿ ಎಚ್‌ಕೆ ಪಾಟೀಲ್ ಸೂಚಿಸಿದ್ದಾರೆ. ಜೊತೆಗೆ ಸಧ್ಯದ ಸಂಕಷ್ಟಕ್ಕೆ ಮತ್ತೊಂದು ಕಾರಣವನ್ನೂ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ದರ ನಿಗದಿಗೆ ಒಪ್ಪಿಲ್ಲ
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆಸರ್ಕಾರ ಚಿಕಿತ್ಸಾ ದರ ನಿಗದಿ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಗಳು ಆ ದರಗಳನ್ನು ಒಪ್ಪಿಕೊಂಡಿರುವುದಿಲ್ಲ. ಇಂಥ ತುರ್ತು, ಅನಿವಾರ್ಯ, ಗಂಭೀರ ಪರಿಸ್ಥಿತಿಯ ಸಂದರ್ಭದಲ್ಲಿ ಸಂಘರ್ಷಕ್ಕೆ ಕಾಲವಲ್ಲ. ತಕ್ಷಣವೇ ಭಾರತೀಯ ವೈದ್ಯ ಸಂಘ (IMA) ಜೊತೆಗೆ ಸಭೆ ಏರ್ಪಡಿಸಿ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳನ್ನು ಕರೆದು ತಕ್ಷಣವೇ ಬಗೆಹರಿಸಿ ಬಿಡಬೇಕು. ಇಲ್ಲದಿದ್ದರೆ ಗಂಡಾಂತರಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಸುಗ್ರೀವಾಜ್ಞೆ ಹೊರಡಿಸಿ
ರಾಜ್ಯಾದ್ಯಂತ ಲಭ್ಯವಿರುವ 5 Star ಮತ್ತು 3 Star ಆಸ್ಪತ್ರೆಗಳು ಹಾಗೂ ಹೋಟೆಲ್‍ಗಳನ್ನು ಸರ್ಕಾರ ಆದೇಶ ಅಥವಾ ಸುಗ್ರೀವಾಜ್ಞೆಯ ಮೂಲಕ ತಕ್ಷಣವೇ ತನ್ನ ವಶಕ್ಕೆ ತೆಗೆದುಕೊಳ್ಳಬೇಕು. ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಕೋವಿಡ್-19 ಚಿಕಿತ್ಸಾ ಕೇಂದ್ರ ಅಥವಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕು.
ಇಂಥ ಕಠಿಣ ಸಂದರ್ಭಗಳಲ್ಲಿ ರಾಜ್ಯದ ನಾಗರೀಕರ ಆರೋಗ್ಯದ ಹಿತದೃಷ್ಠಿಯಿಂದ ಕಾಳಜಿಪೂರ್ವಕ, ಮಾನವೀಯ ಅನುಕಂಪದ, ಸಮರ್ಪಕ, ಸಮಗ್ರ, ಸಮಯೋಚಿತ ಮತ್ತು ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸಲು ಅತ್ಯಂತ ಗಂಭೀರವಾದ ಕ್ರಮಗಳ ಬಗ್ಗೆ ಆಲೋಚನೆ ನಡೆಯಬೇಕೆ ಹೊರತು, ಕೇವಲ ಮೇಲ್ಪದರದ ಅಥವಾ ವಿಂಡೋ ಡ್ರೆಸ್ಸಿಂಗ್ ನಡೆಯಬಾರದು ಎಂದು ಮಾಜಿ ಸಚಿವ ಎಚ್‌ಕೆ ಪಾಟೀಲ್ ಅವರು ಎಚ್ಚರಿಸಿದ್ದಾರೆ.

ಮಾರ್ಚ್‌ನಲ್ಲಿಯೂ ಎಚ್ಚರಿಸಿದ್ದ ಎಚ್‌ಕೆಪಿ
ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಆರಂಭದಲ್ಲಿಯೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು. ಆಗಿನ್ನು ವಿಧಾನಸಭೆ ಬಜೆಟ್ ಅಧಿವೇಶನ ನಡದಿತ್ತು. ಹೊರ ದೇಶಗಳಿಂದ ಬಂದವರನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡುವಂತೆಯೂ, ಇಲ್ಲದೇ ಇದ್ದರೇ ಮುಂದೆ ಅತ್ಯಂತ ಧಾರುಣ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನಸಭೆಯ ಕಲಾಪದಲ್ಲಿಯೇ ಎಚ್ಚರಿಸಿದ್ದರು.
ಆಗ, ವಿದೇಶದಿಂದ ಬಂದವರ ಮಾಹಿತಿ ನಿಮಗೆ ಗೊತ್ತಿಲ್ಲ. ಸರ್ಕಾರಕ್ಕೆ ಗೊತ್ತಿರದ ಮಾಹಿತಿ ನಿಮಗಿದೆಯಾ? ಎಂದು ವಿತಂಡ ವಾದ ಮಾಡಿದ್ದರು. ಆ ಸಂದರ್ಭದಲ್ಲಿ ಸುಮಾರು 90 ಸಾವಿರ ಜನರು ವಿದೇಶಗಳ ಅತ್ಯಂತ ಹೆಚ್ಚು ಕೋರೊನಾ ಪೀಡಿತ ಪ್ರದೇಶಗಳಿಂದ ಬಂದಿದ್ದನ್ನು ದಾಖಲೆ ಸಮೇತ ಸದನದ ಮುಂದೆ ಎಚ್‌ಕೆ ಪಾಟೀಲ್ ಇಟ್ಟಿದ್ದರು. ರಾಜ್ಯ ಸರ್ಕಾರದ ಆಗಿನ ನಿರ್ಲಕ್ಷದ ಫಲಿತಾಂಶ ಈಗ ನಮ್ಮ ಎದುರಿಗಿದೆ.