ವೈರಲ್ ಆಗ್ತಿದೆ ಪ್ರೇತ ಮದುವೆಗೆ ವರ ಬೇಕಾಗಿದೆ ಎನ್ನುವ ಜಾಹೀರಾತು; ಏನಿದು ಪ್ರೇತ ಮದುವೆ ತಿಳಿಯಿರಿ
ಸಾಮಾನ್ಯವಾಗಿ ವಧು-ವರರ ಅನ್ವೇಷಣೆ ಬಗ್ಗೆ ಜಾಹೀರಾತುಗಳನ್ನು ನೋಡುತ್ತೇವೆ. ವಯಸ್ಸಾದವರು ಕೂಡ ಮರು ಮದುವೆಗೆ ಜಾಹೀರಾತು ನೀಡಿ ಸಂಗಾತಿಗೆ ಹುಡುಕಾಟ ನಡೆಸುತ್ತಾರೆ. ಆದರೆ ಪ್ರೇತ ಮದುವೆಗೆ ವರ ಬೇಕಿದೆ ಎನ್ನುವ ಜಾಹೀರಾತು ಈಗ ಸಖತ್ ಸದ್ದು ಮಾಡುತ್ತಿದೆ.
ಹೌದು ದಿನಪತ್ರಿಕೆಯೊಂದರಲ್ಲಿ ಪ್ರೇತ ಮದುವೆಗೆ ವರ ಬೇಕಿದೆ ಎನ್ನುವ ಜಾಹೀರಾತು ಪ್ರಕಟವಾಗಿದ್ದು, ಸದ್ಯ ವೈರಲ್ ಆಗುತ್ತಿದೆ. "ಬಂಗೇರ ಬದಿಯ 30 ವರ್ಷಗಳ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷಗಳ ಹಿಂದೆ ತೀರಿಹೋದ ಗಂಡಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ, ದಯವಿಟ್ಟು ಸಂಪರ್ಕಿಸಿ" ಎಂದು ಜಾಹೀರಾತು ನೀಡಿದ್ದಾರೆ.

ಏನಿದು ಪ್ರೇತ ಮದುವೆ?
ಪ್ರೇತ ಮದುವೆ ಎನ್ನುವುದು ಕರಾವಳಿ ಭಾಗದಲ್ಲಿ ತುಳುವರು ಆಚರಿಸುವ ವಿಶಿಷ್ಟ ಸಂಪ್ರದಾಯವಾಗಿದೆ. ಮದುವೆಗೂ ಮೊದಲೇ ಯಾರಾದರೂ ಯುವಕ, ಯುವತಿ ಸಾವನ್ನಪ್ಪಿದ್ದರೆ, ಅವರ ಕುಟುಂಬದಲ್ಲಿ ಮದುವೆಗೆ ಬಂದ ಯುವಕ-ಯುವತಿಯರಿಗೆ ತೊಂದರೆ ಕೊಡುತ್ತದೆ, ಅನೇಕರಿಗೆ ಮದುವೆ ಆಗದಿರುವ ಪ್ರೇತಗಳೇ ಕಾರಣ ಎನ್ನುವ ನಂಬಿಕೆ ಇದೆ.
ಆದ್ದರಿಂದ ಆ ಪ್ರೇತಗಳನ್ನು ಸಂತೃಪ್ತಿಪಡಿಸಲು ಮದುವೆ ಮಾಡಿಸಲು ಆ ಕುಟುಂಬದವರು ಮುಂದಾಗುತ್ತಾರೆ. ಇದರಿಂದ ತಮ್ಮ ಕುಟುಂಬಕ್ಕಾಗಲಿ ಮುಂದಿನ ಪೀಳಿಗೆಗಾಲಿ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದು ಉದ್ದೇಶವಾಗಿದೆ. ಪ್ರೇತಗಳಿಗೆ ಮದುವೆ ಮಾಡಿಸಿದ ನಂತರ ಮನೆಯವರಿಗೆ ನೀಡುವ ತೊಂದರೆ ನಿಲ್ಲುತ್ತದೆ ಎಂದು ಅವರು ನಂಬುತ್ತಾರೆ.
ಪ್ರೇತಗಳ ಮದುವೆಗೆ ಕೂಡ ಅದೇ ಪ್ರಾಯದ ಹುಡುಗ, ಹುಡುಗಿ ಬೇಕಾಗುತ್ತದೆ. ಅದಕ್ಕೇ ವಿಶೇಷವಾದ ಹುಡುಕಾಟ ನಡೆಸಲಾಗುತ್ತದೆ.
ಸಂಪ್ರದಾಯದಂತೆ ನಡೆಯುತ್ತದೆ ಮದುವೆ?
ಪ್ರೇತಗಳ ಮದುವೆ ಎಂದಾಕ್ಷಣ ಅದೇನೂ ಸುಮ್ಮನೆ ಆಗುವುದಿಲ್ಲ, ಸಂಪ್ರದಾಯದ ಪ್ರಕಾರವೇ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಬೇಕಾಗುತ್ತದೆ. ಪ್ರೇತಗಳ ಮದುವೆ ಮಾಡಿಸಲು ಆಷಾಢದ ಒಂದು ದಿನ ಮದುವೆ ಫಿಕ್ಸ್ ಮಾಡಲಾಗುತ್ತದೆ. ಮದುವೆ ದಿನ ಗೊತ್ತುಮಾಡಿದ ಬಳಿಕ ಬಂಧು-ಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಜೀವಂತ ಇರುವವರಿಗೆ ಮದುವೆ ಮಾಡಿಸಿದಂತೆ ಶಾಸ್ತ್ರೋಕ್ತವಾಗಿಯೇ ಮದುವೆ ನಡೆಯುತ್ತದೆ.
ಆದರೆ ಈ ಮದುವೆಯಲ್ಲಿ ಹೋಮ ಹವನ ಮಾಡುವುದಿಲ್ಲ, ಮಂತ್ರ ಹೇಳಲು ಪೂಜಾರಿಗಳು ಇರುವುದಿಲ್ಲ. ಬದಲಾಗಿ ಎರಡು ಕುರ್ಚಿ, ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಶಾಸ್ತ್ರ ನೆರವೇರಿಸಲಾಗುತ್ತದೆ. ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂವು ಮತ್ತು ಹುಡುಗನಿಗೆ ಪಂಚೆ, ಶಲ್ಯ ಎಲ್ಲವನ್ನೂ ತಂದು ಮದುವೆ ಮಾಡಲಾಗುತ್ತದೆ. ಮದುವೆ ಬಳಿಕ ಅತಿಥಿಗಳಿಗೆ ಊಟ ಕೂಡ ಹಾಕಲಾಗುತ್ತದೆ. ಪ್ರೇತಗಳಿಗೆ ಮದುವೆ ಮಾಡಿಸಿದ ಎರಡೂ ಕುಟುಂಬಗಳು ಕೂಡ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತವೆ.
ಪ್ರೇತ ಮದುವೆ ಬಗ್ಗೆ ಪ್ರತಿಭಾ ಕುಡ್ತಡ್ಕ ಮಾಹಿತಿ
ಇನ್ನು ಪ್ರೇತ ಮದುವೆ ಬಗ್ಗೆ ಪ್ರತಿಭಾ ಕುಡ್ತಡ್ಕ (Prathibha Kudthadka) ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.
ಬಹುಷಃ ಇದು ನಮಗೆ ತುಳುವರಿಗೆ ಮಾತ್ರ ಅರ್ಥ ಆಗುವ ಒಂದು ಜಾಹೀರಾತು. ಬೇರೆ ಯಾವುದೇ ಜನಾಂಗ/ ಪ್ರದೇಶದಲ್ಲಿ ಇಂಥದ್ದೊಂದು ಇದೆಯಾ ಗೊತ್ತಿಲ್ಲ, ಆದರೆ ನಮ್ಮಲ್ಲಿದೆ. ಮನೆಯ ಮಗಳ ಮದುವೆಗೆ ನೂರಾರು ವಿಘ್ನಗಳು, ಕೈಗೆ ಬಂದದ್ದು ಬಾಯಿಗೆ ಬರ್ತಾ ಇಲ್ಲ. ಏನು ಕಾರಣ ಅಂತ ಪ್ರಶ್ನೆ ಇಟ್ಟಾಗ ಕುಟುಂಬದಲ್ಲಿ ಅವಿವಾಹಿತರಾಗಿ ತೀರಿಕೊಂಡ ಪೂರ್ವಜರ ಚರಿತ್ರೆ ತೆರೆಯಲಾಗುತ್ತದೆ.
ಓ... 30 ವರ್ಷಗಳ ಹಿಂದೆ ಸಣ್ಣ ಅಜ್ಜಿಯ ದೊಡ್ಡ ಮಗಳ ಐದನೇ ಹೆಣ್ಣುಮಗುವೊಂದು ವಿವಾಹಿತಳಾಗುವ ಮೊದಲೇ ಅಪಮೃತ್ಯುವಿಗೆ ಈಡಾಗಿದ್ದ ಕತೆ ಯಾರೋ ಒಬ್ಬರಿಗೆ ಆಗ ನೆನಪಾಗ್ತದೆ. ಮತ್ತೆ ಕೇಳ್ಳಿಕ್ಕೆ ಉಂಟಾ? ಇದು ಅದೇ ಕುಲೆ (ಪ್ರೇತ)ಯ ಉಪದ್ರ ಅಂತಾಯ್ತು. ಸರಿ ಇದಕ್ಕೀಗ ಪಿರಿ ಎಂತದ್ದು?
ತನಗೂ ಒಂದು ಮದುವೆ ಮಾಡಿಸ್ತಾರೆ ಎಂಬ ಆಸೆಯಲ್ಲಿ ಅಲೆಯುತ್ತಿರುವ ಅವಳ ಕುಲೆಗೆ ಇವರು ನನ್ನನ್ನು ಮರ್ತೇ ಬಿಟ್ಟಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಅದಕ್ಕೇ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಕಲ್ಲು ಹಾಕ್ತಾ ಇದ್ದಾಳೆ. ಹೀಗೇ ಬಿಟ್ರೆ ಇನ್ನು ಕುಟುಂಬದ ಯಾವ ಹೆಣ್ಣಿಗೂ ಮದುವೆ ಡೌಟು. ಮೊದಲು ಅವಳಿಗೊಂದು ಮದುವೆ ಮಾಡಿ ಅಂಥ ಫರ್ಮಾನು ಆಗ್ತದೆ.
ಆಗ ಶುರು ಆಗ್ತದೆ ಈ ಹುಡುಕಾಟ. ಸತ್ತವಳಿಗೆ ಜೀವಂತ ಗಂಡ ಆಗ್ತದಾ? ಸತ್ತವನೇ ಆಗ್ಬೇಕು, ಜಾತಿಯವ ಆಗ್ಬೇಕು, ಸ್ವಂತ ಬರಿಯವ ಆಗಕೂಡದು, ಸಮಪ್ರಾಯದವ ಆಗ್ಬೇಕು...
ತುಳುನಾಡಿನ ಇನ್ಯಾವುದೋ ಮೂಲೆಯಲ್ಲಿ ಇಂಥದ್ದೇ ಸಮಸ್ಯೆಯ ಕುಟುಂಬವೊಂದು ಗಂಡಿನ ಹುಡುಕಾಟದಲ್ಲಿರ್ತದೆ. ಅವರು ಪರಸ್ಪರ ಕಂಡು ಮುಟ್ಟಿದರೆ ಆಯಿತು. ಮುಂದಕ್ಕೆ ಕುಲೆತ ಮದಿಮೆ.
ಮದುವೆ ಅಂದರೆ ಮದುವೆಯೇ. ಏನೋ ಬಾಯಿ ಮಾತಲ್ಲಿ ಮುಗಿಸುವಂಥದ್ದಲ್ಲ.
ಸಂಪ್ರದಾಯ ಪ್ರಕಾರ ಗಂಡಿ ಕಡೆಯವರು ಮಾವ, ಭಾವಂದಿರನ್ನೆಲ್ಲ ಸೇರಿಸ್ಕೋಂಡೇ ಮಾತುಕತೆಗೆ ಬರ್ಬೇಕು. ಚಾ, ಸಜ್ಜಿಗೆ, ಶೀರ ತಿಂದು ಹೆಣ್ಣನ್ನು ಒಪ್ಪಿ ಹೋಗ್ಬೇಕು. ಹೆಣ್ಣಿನ ಕಡೆಯವರು ಗಂಡಿನ ಮನೆ ನೋಡುವ ಶಾಸ್ತ್ತ ಮಾಡ್ಬೇಕು. ನಿಶ್ಚಿತಾರ್ಥದ ತಾಂಬೂಲ ಕೈ ಬದಲಾಯಿಸಬೇಕು.
ಬಳಿಕ ದಿನ, ಮುಹೂರ್ತ ನಿರ್ಧರಿಸಿ, ಕರುಳುಬಳ್ಳಿಯ ಎಲ್ಲರಿಗೂ ಆಮಂತ್ರಣ ಹೋಗ್ಬೇಕು. ಕರಿಮಣಿ, ಮದುವೆ ಜವುಳಿ ಶಾಪಿಂಗ್ ಆಗ್ಬೇಕು. ದಾರೆದ ಮದಿಮೆ ಸಂಪನ್ನಗೊಳ್ಬೇಕು. ಊಟ, ಪಾಯಸ ಮೆಲ್ಲಬೇಕು. ಪ್ರಸ್ತವೂ ಆಗ್ಬೇಕು. ಆಟಿಯ ಮಾಮಿಸಿಕೆ ಆಗ್ಬೇಕು, ಆಟಿ ಕುಲ್ಲೆರೆ ಮಗಳನ್ನು ತವರಿಗೆ ಕರೆದೊಯ್ಯಬೇಕು. ವಾಪಾಸು ಬಿಡಬೇಕು.
ಜೀವಂತ ಮನುಷ್ಯರ ಬದಲು ವಧೂವರರಿಗೆ ಅಂತ ಇಡುವ ಮಣೆಯ ಮೇಲೆ ಸೀರೆ, ಕರಿಮಣಿ, ಹೂವು, ಬಳೆ, ವೇಸ್ಟಿ, ಷರ್ಟುಗಳನ್ನು ಇಡುವುದು. ಅದರ ಎದುರಿಗೆ ಎಲೆ ಹಾಕಿ ಬಡಿಸುವುದು... ಹೀಗೆ. ಬ್ರಾಹ್ಮಣ ವಟು ಮದುವೆಯಾಗದೆ ಸತ್ರೆ ಬ್ರಹ್ಮರಾಕ್ಷಸ ಆಗ್ತಾನೆ, ಅವನು ಇನ್ನೂ ಖತರ್ ನಾಕ್ ಅಂತ ನಮ್ಮಜ್ಜ ಹೇಳ್ತಿದ್ರು. ಅವನಿಗೆ ಪಿರಿ ಎಂತದು? ಹೇಗೇಂತ ನನಗೆ ಮಾಹಿತಿ ಇಲ್ಲ. ನಾನು ನೋಡಿಯೂ ಇಲ್ಲ. ಇದೆಲ್ಲ ನಮಗೆ ಹೊಸತಲ್ಲ. ಹೊಸತು ಅಂತ ಕಂಡದ್ದು ಈ ಜಾಹೀರಾತು. ಪ್ರೇತದ ಮದುವೆಯಲ್ಲೂ ಇಷ್ಟು ಇಂಪ್ರೂಮೆಂಟ್ ಆಗಿದೆ. ನನ ರಗಾಲೆ ಇಜ್ಜಿ












Click it and Unblock the Notifications