ಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿ
ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆದಾರರಿಗೆ ಇದೊಂದು ಸಿಹಿ ಸುದ್ದಿ. ಟೆಂಡರ್ ಗಳಲ್ಲಿ ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾತಿ ನೀಡುವ ಕರ್ನಾಟಕ ಸರಕಾರದ ಪ್ರಸ್ತಾವನೆಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.
ನಾವು ದಲಿತರ ಪರ ಎನ್ನುವ, ದಲಿತ ಟ್ರಂಪ್ ಕಾರ್ಡ್ ಇಟ್ಟುಕೊಂಡು 2018ರ ಚುನಾವಣೆ ಎದುರಿಸಲು ಹೊರಟಿರುವ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಇದು ಮತ್ತಷ್ಟು ಪ್ರಯೋಜನಕಾರಿಯಾಗಲಿದೆ.

ರಾಷ್ಟ್ರಪತಿಗಳ ಸಹಿಯೊಂದಿಗೆ 50 ಲಕ್ಷವರೆಗಿನ ಗುತ್ತಿಗೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದವರು ಶೇಕಡಾ 24.1 ರಷ್ಟು ಮೀಸಲಾತಿ ಪಡೆದುಕೊಳ್ಳಲಿದ್ದಾರೆ. 'ಕರ್ನಾಟಕ ಸಾರ್ವಜನಿಕ ಪರಿಷ್ಕರಣೆ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ'ಗೆ ರಾಷ್ಟ್ರಪತಿ ಅಂಕಿತ ಬಿದ್ದಿದ್ದು, ಟೆಂಡರ್ ಇಲ್ಲದೆ ಹಿಂದುಳಿದ ಸಮುದಾಯದವರಿಗೆ ಗುತ್ತಿಗೆ ನೀಡಲು ಸಾಧ್ಯವಾಗಲಿದೆ.
ಈ ಮೂಲಕ ಟೆಂಡರುಗಳಲ್ಲಿ ಪರಿಶಿಷ್ಟ ಜಾತಿಗೆ ಶೇ. 17.15 ಮೀಸಲಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 6.95 ಮೀಸಲಾತಿ ಸಿಗಲಿದೆ.
2016ರ ಆಗಸ್ಟ್ ನಲ್ಲಿ ಈ ತಿದ್ದುಪಡಿ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರು. ಇದು ಸಂವಿಧಾನ ವಿರೋಧಿ ಎಂದು ಅವರು ಹೇಳಿದ್ದರು. ಶಿಕ್ಷಣ, ಉದ್ಯೋಗ ಮತ್ತು ಚುನಾವಣೆಯಲ್ಲಿ ಮಾತ್ರ ಮೀಸಲಾತಿ ನೀಡಲು ಅವಕಾಶವಿದೆ ಎಂದು ಹೇಳಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಬಳಿಗೆ ಕಳುಹಿಸಿದ್ದರು. ಇದೀಗ ರಾಷ್ಟ್ರಪತಿಗಳು ಸಹಿ ಹಾಕಿರುವುದರಿಂದ ಕಾಯ್ದೆ ಜಾರಿಗೆ ಬರಲಿದೆ.
ರಾಷ್ಟ್ರಪತಿಗಳ ಬಳಿಗೆ ಕಡತ ಕಳುಹಿಸಿದರೂ ಜೂನ್ 17ರವರೆಗೆ ಇದು ಧೂಳು ತಿನ್ನುತ್ತಿತ್ತು. ಆದರೆ ಬೆಂಗಳೂರು ಮೆಟ್ರೋ ಉದ್ಘಾಟನೆಗೆ ಬಂದಿದ್ದ ರಾಷ್ಟ್ರಪತಿಗಳ ಗಮನಕ್ಕೆ ಸಿದ್ದರಾಮಯ್ಯ ಈ ಕಡತವನ್ನು ತಂದಿದ್ದರು. ಹೀಗಾಗಿ ಇದೀಗ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.
ಅತ್ತ ಸಾಲಮನ್ನಾ, ಇದೀಗ ದಲಿತರಿಗೆ ಮೀಸಲಾತಿ; ಕಾಂಗ್ರೆಸಿಗೆ ಚುನಾವಣಾ ಪ್ರಚಾರಕ್ಕೆ ಬೇಕಾದ ಭರ್ಜರಿ ಸರಕು ಸಿಕ್ಕಿದಂತಾಗಿದೆ.












Click it and Unblock the Notifications