Karnataka weather: ಮಲೆನಾಡು, ಹಳೆ ಮೈಸೂರು ಭಾಗದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ
ಬೆಂಗಳೂರು, ಮೇ. 21: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದಿವರೆದಿದೆ. ಬರದಿಂದ ಬೇಸತ್ತಿದ್ದ ಜನರಿಗೆ ವರುಣದೇವ ಕೃಪೆ ತೋರಿದ್ದಾನೆ. ದಕ್ಷಿಣ ಒಳನಾಡಿನ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಮುಂಗಾರು ಪೂರ್ವ ಮಳೆ ಮುಂದುವರಿದರೆ, ಉತ್ತರ ಕರ್ನಾಟಕದಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮೈಸೂರು ಭಾಗದಲ್ಲಿ ಬೆಳೆ ಹಾನಿ ಸಮಭವಿಸಿದೆ. ಹಲವೆಡೆ ರಾತ್ರೋರಾತ್ರಿ ಸುರಿದ ಧಾರಾಕಾರ ಮಳೆ ಭತ್ತ, ಬಾಳೆ, ತಂಬಾಕು, ಶುಂಠಿ ಬೆಳೆಗಳಿಗೆ ಹಾನಿಯಾಗಿದೆ. ಅರಕಲಗೂಡು ತಾಲೂಕಿನಲ್ಲಿ ಎಡೆಬಿಡದೆ ಸುರಿದ ಮಳೆಗೆ ಎಕರೆಗಟ್ಟಲೆ ಶುಂಠಿ ಬೆಳೆ ಹಾನಿಯಾಗಿದೆ.

ಹುಣಸೂರು ತಾಲೂಕಿನ ಗಾವಡಗೆರೆ ಮತ್ತು ಕೊತೇಗಲ್ ಹೋಬಳಿಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ನೀರಿನ ರಭಸಕ್ಕೆ ತಂಬಾಕು, ಬೇಳೆಕಾಳುಗಳು ನಾಶವಾಗಿವೆ. ಮಳೆಯಿಂದ ಆಗಿರುವ ಬೆಳೆ ನಷ್ಟದ ಬಗ್ಗೆ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತ ಮೊಹಮ್ಮದ್ ಹಾರಿಸ್ ಸುಮೈರ್ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಿರಿಯಾಪಟ್ಟಣ ಪಟ್ಟಣದಲ್ಲಿ ಕಳೆದ 24 ಗಂಟೆಗಳಲ್ಲಿ 120 ಮಿಮೀ ಮಳೆ ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರವೂ ಮಳೆ ಮುಂದುವರಿದಿದೆ. ಎಡೆಬಿಡದೆ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ರಸ್ತೆಗಳು ಹೊಳೆಗಳಂತೆ ಕಾಣುತ್ತಿವೆ. ಬೆಟ್ಟದ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ಜನರು ಹಲವು ಗಂಟೆಗಳ ಕಾಲ ಚೆಕ್ ಪೋಸ್ಟ್‌ನಲ್ಲಿ ಸಿಲುಕಿಕೊಂಡು ಹಿಂಸೆ ಅನುಭವಿಸಿದ್ದಾರೆ.
ಮಹದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲೂ ದಿನವಿಡೀ ತುಂತುರು ಮಳೆಯಾಗಿದೆ. ಜಿಲ್ಲೆಯ ಬೆಟ್ಟಗಳ ತಪ್ಪಲಿನಲ್ಲಿರುವ ಜಲಮೂಲಗಳಿಗೆ ಉತ್ತಮ ಒಳಹರಿವು ಬಂದಿದೆ. ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬಿಡುವು ಸಿಕ್ಕಿಲ್ಲ. ಬಿರುಗಾಳಿ ಸಹಿತ ಮಳೆಯಿಂದಾಗಿ ಕುಶಾಲನಗರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಗರಹೊಳೆ ಕಾಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ತಿತಿಮತಿಯಲ್ಲಿ ಕಳೆದ 24 ಗಂಟೆಗಳಲ್ಲಿ 60 ಮಿ.ಮೀ ಮಳೆ ದಾಖಲಾಗಿದೆ. ಸುಂಟಿಕೊಪ್ಪ, ಸೋಮವಾರಪೇಟೆ, ನಾಪೋಕ್ಲುವಿನಲ್ಲಿ ಧಾರಾಕಾರ ಮಳೆಯಾಗಿದೆ. ಚಾರ್ಮಾಡಿ ಮತ್ತು ಶಿರಾಡಿ ಘಾಟ್‌ಗಳಲ್ಲಿ ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಳೆಯ ಸಮಯದಲ್ಲಿ ಘಾಟ್‌ಗೆ ಪ್ರವೇಶಿಸದಂತೆ ವಾಹನ ಸವಾರರಿಗೆ ತಿಳಿಸಲಾಗಿದೆ. ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಹಲವೆಡೆ ಮಳೆ ವಾತಾವರಣ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಹಲವೆಡೆ ಉತ್ತಮ ಮಳೆಯಾಗಿದೆ.
ಹರೇಕಳ ಹಾಜಬ್ಬ ಕಟ್ಟಿಸಿದ್ದ ಶಾಲೆ ಕಾಂಪೌಂಡ್ ಕುಸಿತ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ನಿರ್ಮಿಸಿದ್ದ ಮಂಗಳೂರು ತಾಲೂಕಿನ ಹರೇಕಳ ಸಮೀಪದ ಪಡ್ಪು ಗ್ರಾಮದಲ್ಲಿ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಸಿದ್ದಿಕ್ ಮತ್ತು ಜಮೀಲಾ ದಂಪತಿಯ ಪುತ್ರಿ ಶಾಜಿಯಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಉಳಿಸಿದ ಹಣದಲ್ಲಿ ಶಾಲೆಯನ್ನು ನಿರ್ಮಿಸಿದ್ದಾರೆ.












Click it and Unblock the Notifications