Karnataka Rains : ಮೈಸೂರು ಮತ್ತು ಚಾಮರಾಜನಗರದಲ್ಲಿ ಬೇಸರದೊಂದಿಗೆ ಸಂತೋಷ ತಂದ ಮುಂಗಾರು ಪೂರ್ವ ಮಳೆ
ಮೈಸೂರು ಏಪ್ರಿಲ್ 4: ಮೈಸೂರು ಮತ್ತು ಚಾಮರಾಜನಗರ ಅವಳಿ ಜಿಲ್ಲೆಗಳಲ್ಲಿ ಈ ವಾರ ಸುರಿದ ಮುಂಗಾರು ಪೂರ್ವ ಮಳೆ ಬೇಸರ ಮತ್ತು ಸಂತೋಷ ಎರಡನ್ನೂ ತಂದಿದೆ. ಅಕಾಲಿಕ ಮಳೆ ಬೆಳೆದು ನಿಂತಿದ್ದ ಹಲವಾರು ಬೆಳೆಗಳಿಗೆ ನೀರೆರಿದ್ದರೂ, ಬಿರುಗಾಳಿ ಸಹಿತ ಮಳೆಯಿಂದಾಗಿ ಬಾಳೆ, ತೋಟದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಆದರೆ ಹಲವೆಡೆಯಾದ ತುಂತುರು ಮಳೆ ಅರಣ್ಯವಾಸಿಗಳಿಗೆ ನೆಮ್ಮದಿಯನ್ನು ತಂದಿದೆ. ಏಕೆಂದರೆ ಇದು ಕಾಡ್ಗಿಚ್ಚನ್ನು ನಿಭಾಯಿಸಲು ಸಹಾಯ ಮಾಡಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಗುರುವಾರ ಜಿಲ್ಲೆಯಾದ್ಯಂತ 4.5 ಮಿಲಿಮೀಟರ್ ಮಳೆ ದಾಖಲಾಗಿದ್ದು, ಕೆಲ ವಾರಗಳಿಂದ ಬಿಸಿಲಿನ ತಾಪದಿಂದ ತತ್ತರಿಸಿದ್ದು ಜನರಿಗೆ ನಿನ್ನೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರಿನಲ್ಲಿ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮಳೆಯಾಗಿದ್ದು, ಯಳಂದೂರಿನಲ್ಲಿ ಅತಿ ಹೆಚ್ಚು ಅಂದರೆ 16.8 ಮಿಲಿಮೀಟರ್ ಮಳೆ ದಾಖಲಾಗಿದೆ. ಕಳೆದ ವಾರ ಸುರಿದ ಮಳೆಗೆ ಚಾಮರಾಜನಗರದ ಹನೂರು, ಕೊಳ್ಳೇಗಾಲ, ಮರಿಯಾಲ, ಮರಿಯಾಲಹುಂಡಿ, ಕದಳ್ಳಿ ಗ್ರಾಮಗಳಲ್ಲಿ ಬಾಳೆ, ತೆಂಗು ಬೆಳೆಗಳು ನೆಲಕಚ್ಚಿರುವ ಘಟನೆಗಳು ವರದಿಯಾಗಿದ್ದವು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ನಗರ ಮತ್ತು ಜಿಲ್ಲೆಯ ಹಲವೆಡೆ ಕಳೆದ ವಾರ ಬಿರುಗಾಳಿ ಸಹಿತ ಸಾಧಾರಣ ಚದುರಿದ ಮಳೆಯಾಗಿತ್ತು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ತಾಂತ್ರಿಕ ಅಧಿಕಾರಿ ಮೈಸೂರು ನಾಗೇಂದ್ರಪ್ಪ ಮಾತನಾಡಿ, ಜಿಲ್ಲೆಯ ಖುಷ್ಕಿ ಭೂಮಿಯಲ್ಲಿ ಪೂರ್ವ ಖಾರಿಫ್ ಬೆಳೆಗಳನ್ನು ಬಿತ್ತಲು, ರೈತರು ತಮ್ಮ ಭೂಮಿಯನ್ನು ಸಿದ್ಧಪಡಿಸಲು ಮುಂಗಾರು ಮಳೆ ಸಹಕಾರಿಯಾಗಿದೆ. ಇದರ ಬೆನ್ನಲ್ಲೇ ಖಾರಿಫ್ ಪೂರ್ವ ಹಂಗಾಮಿಗೆ ಜಿಲ್ಲೆಯಾದ್ಯಂತ ಹರಡಿರುವ ಎಲ್ಲಾ 75 ಕೃಷಿ ಸಂಪರ್ಕ ಕೇಂದ್ರಗಳಿಂದ ಬೀಜ ಪೂರೈಕೆಯ ಬೇಡಿಕೆಯ ವರದಿಗಳನ್ನು ಇಲಾಖೆ ಸ್ವೀಕರಿಸಿದೆ.

ಬೇಸರ ತಂದ ಮುಂಗಾರು ಪೂರ್ವ ಮಳೆ
ಅವಳಿ ಜಿಲ್ಲೆಯ ಹಲವೆಡೆ ಮುಂಗಾರು ಪೂರ್ವ ತುಂತುರು ಮಳೆಯಾಗುತ್ತಿದ್ದು, ಮಳೆಯಿಂದಾಗಿ ಕಾಡ್ಗಿಚ್ಚಿನ ಅನಾಹುತ ಕಡಿಮೆಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ನಗರ ಜಿಲ್ಲೆಯಲ್ಲಿ ಜಲಮೂಲಗಳು ತುಂಬಿವೆ.
ಎಂಎಂ ಹಿಲ್ಸ್, ಕಾವೇರಿ ವನ್ಯಜೀವಿ ವಿಭಾಗ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಶೇ.48 ರಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯು ಕಾಳ್ಗಿಚ್ಚಿನ ಭೀತಿಯನ್ನು ತಪ್ಪಿಸಿದ್ದಲ್ಲದೆ, ಜಲಮೂಲಗಳನ್ನು ಮರುಪೂರಣಗೊಳಿಸಲು ಸಹಾಯ ಮಾಡಿದೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯ ಉಪ ಸಂರಕ್ಷಣಾಧಿಕಾರಿ ನಂದೀಶ್ ತಿಳಿಸಿದರು.
ಈ ವರ್ಷ ಅಭಯಾರಣ್ಯದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿತ್ತು. ಕಳೆದ ಮೂರು ತಿಂಗಳಲ್ಲಿ ಸುಮಾರು 13 ಹೆಕ್ಟೇರ್ ಹುಲ್ಲುಗಾವಲು ಕಾಡ್ಗಿಚ್ಚಿನಲ್ಲಿ ನಾಶವಾಗಿದೆ. ಆದರೆ ಕಳೆದ ವಾರ ಮಧ್ಯಮದಿಂದ ವ್ಯಾಪಕವಾದ ಮಳೆಯನ್ನು ಪಡೆದ ಅರಣ್ಯ ಪ್ರದೇಶ ಜಿಂಕೆ, ಕಾಡೆಮ್ಮೆ ಮತ್ತು ಇತರ ಸಸ್ಯಾಹಾರಿಗಳಂತಹ ಜೀವಿಗಳಿಗೆ ಮೇವು ಪಡೆಯಲು ಸಹಾಯ ಮಾಡಿತು. ಏಕೆಂದರೆ ಮಳೆಯಿಂದಾಗಿ ಒಣಗಿದ ಹುಲ್ಲು ಬೆಳೆಯಲು ಪ್ರಾರಂಭಿಸುತ್ತದೆ. ಅರಣ್ಯದಲ್ಲಿರುವ ಹಲವು ಜಲಮೂಲಗಳ ಮರುಪೂರಣಕ್ಕೂ ಇದು ಸಹಕಾರಿಯಾಗಿದೆ.

ಬೆಂಗಳೂರಿನಲ್ಲೂ ಮಳೆ
ರಾಜ್ಯ ರಾಜಧಾನಿ ಬೆಂಗಳೂರು ನಗರದ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ವಿದ್ಯಾರಣ್ಯಪುರ, ನಾಗಸಂದ್ರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆ ಮತ್ತು ಬಲವಾದ ಗಾಳಿ ಬೀಸಿದೆ ಎಂದು 'ಕರ್ನಾಟಕ ವೆದರ್' ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications