ʼಸಿಎಂ ಆಗುವ ವಿಚಾರ ಯಾರಿಗೂ ಗೊತ್ತಾಬಾರದೆಂದು ವಿದೇಶದಲ್ಲಿ ರಾಹುಲ್ ಭೇಟಿ ಮಾಡಿದ ಡಿಕೆಶಿʼ
ಹುಬ್ಬಳ್ಳಿ, ಸೆಪ್ಟೆಂಬರ್ 11: ಮುಖ್ಯಮಂತ್ರಿ ಆಗುವ ವಿಚಾರ ಯಾರಿಗೂ ಗೊತ್ತಾಗಬಾರದೆಂದು ವಿದೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ ಬುಧವಾರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವ ಕಾರಣದಿಂದ ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅಮೇರಿಕಾದಲ್ಲಿ ರಾಹುಲ್ ಗಾಂಧಿಗೆ ಡಿಕೆಶಿ ಭೇಟಿಯಾಗಿದ್ದಾರೆ. ಇಲ್ಲಿ ಮಾತನಾಡಿದ್ರೆ ವಿಷಯ ಹೊರಗೆ ಬರುತ್ತದೆ. ವಿದೇಶದಲ್ಲಿಯಾದ್ರೆ ಯಾರಿಗೂ ಗೊತ್ತಾಗಲ್ಲ ಅನ್ನೋ ಲೆಕ್ಕಾಚಾರ ಅವರದು. ಅಲ್ಲಿಯ ಭಾರತೀಯರಿಂದ ಗೊತ್ತಾಗುತ್ತೆ ಅಂತ ಒಂದು ಫೋಟೋ ಬಿಟ್ಟಿದ್ದಾರೆ ಅಷ್ಟೇ ಎಂದರು.

ರಾಮೇಶ್ವರ ಕೆಫೆ ಸ್ಪೋಟ ಪ್ರಕರಣದ ಚಾರ್ಜ್ ಶೀಟ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿದ್ರು ಅಂತ ಎನ್.ಐ.ಎ ಚಾರ್ಜ್ ಶೀಟ್ ನಲ್ಲಿ ಬಂದಿದೆ. ಕೆಲವು ಮಂತ್ರಿಗಳು ಇದನ್ನ ಸುಳ್ಳು ಅಂತಾರೆ. ಭಯೋತ್ಪಾದಕರನ್ನು ಬೆಂಬಲಿಸಿ ಮಾತನಾಡುವ ಪ್ರವೃತ್ತಿ ಕಾಂಗ್ರೆಸ್ ನಾಯಕರದ್ದು. ಗಡಿ ರಾಜ್ಯದಲ್ಲಿನ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿರುವುದರಿಂದ ಯಾವುದೇ ರೀತಿಯ ಅನಾಹುತ ನಡೆದಿಲ್ಲ. ಕರ್ನಾಟಕದಲ್ಲಿ ಕುಕ್ಕರ್, ಬಾಂಬ್ ಬ್ಲಾಸ್ಟ್ ಆದಾಗ ನಮ್ಮ ಸಹೋದರ ಅಂತಾರೆ. ವಿ ಆರ್ ಮೈ ಬ್ರದರ್ಸ್ ಅಂತಾರೆ. ರಾಮೇಶ್ವರ ಕೆಫೆ ಘಟನೆ ಆದಾಗ ಸಿಲೆಂಡರ್ ಬ್ಲಾಸ್ಟ್ ಅಂತಾರೆ. ಓಟ್ ಬ್ಯಾಂಕ್ ಗಾಗಿ ಭಯೋತ್ಪಾದನೆಗೆ ಬೆಂಬಲ ನೀಡ್ತಾ ಇದ್ದಾರೆ ಎಂದು ಕಿಡಿ ಕಾರಿದರು.
ವಾಲ್ಮೀಕಿ ಹಗರಣದ ದೋಷರೋಪ ಪಟ್ಟಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ದೋಷರೋಪ ಪಟ್ಟಿಯಲ್ಲಿ ನಾಗೇಂದ್ರರ ಪಾತ್ರದ ಕುರಿತು ವಿವರಿಸಲಾಗಿದೆ. ನ್ಯಾಯಾಲಯ ಸರಿಯಾದ ಕ್ರಮ ಕೈಗೊಳ್ಳುತ್ತದೆ. ಭ್ರಷ್ಟಾಚಾರದಲ್ಲಿದವರಿಗೆ ಶಿಕ್ಷೆ ಆಗುತ್ತದೆ ಎಂದು ಅವರು ಹೇಳಿದರು.
ಇನ್ನೂ ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ದೊಡ್ಡ ಯಡವಟ್ಟು ಮಾಡಿದೆ. ಸಿಎಂ ಸಿದ್ಧರಾಮಯ್ಯನವರೇ ನಾಗೇಂದ್ರ ಅವರ ಹಾಗೂ ಇನ್ನಿತರ ಶಾಸಕರನ್ನು ಮರೆಮಾಚುವ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯು ಕೂಡ ಸರ್ಕಾರದ ಅಡಿಯಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುವುದೇ ಅರ್ಥವಾಗದಂತ ಸ್ಥಿತಿಯನ್ನು ತಲುಪಿದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ತೀವ್ರ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಹೇಳಿದ್ದರು ಕ್ಲೀನ್ ಚೀಟ್ ಆಗುತ್ತೇ ಅಂತ. ಆದರೇ ಈಗ ವಾಲ್ಮೀಕಿ ಹಗರಣದ ಚಾರ್ಜ್ ಶೀಟ್ ನಲ್ಲಿ ನಾಗೇಂದ್ರ ಅವರು ಹಾಗೂ ನಿಗಮದ ಅಧ್ಯಕ್ಷರು ಸಮಬಾಳು ಸಮಪಾಲು ತೆಗೆದುಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣದಲ್ಲಿ ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಸಂಪೂರ್ಣ ಭಾಗಿಯಾಗಿದೆ. ಈ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗುತ್ತದೆ. ಸಿಎಂ ಸಿದ್ಧರಾಮಯ್ಯನವರು, ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಕ್ಲೀನ್ ಹ್ಯಾಂಡ್ ಎಂದು ಹೇಳಿಕೊಂಡವರ ಬಂಡವಾಳ ಕೂಡ ಬಯಲಾಗುತ್ತದೆ ಎಂದರು.
ಬಿಜೆಪಿ ಹಗರಣದ ತನಿಖೆಗೆ ಐದು ಜನರ ತಂಡ ರಚನೆಯ ಬಗ್ಗೆ ಮಾತನಾಡಿದ ಅವರು, ಐದು ಜನರಲ್ಲ ಐವತ್ತು ಜನರನ್ನು ಮಾಡಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಒಂದು ವರ್ಷ ಏನು ಮಾಡ್ತಿದ್ದೀರಿ..? ನಿಮ್ಮ ಪಾದದ ಬುಡಕ್ಕೆ ನೀರು ಬಂದಾಗ ಮತ್ತೊಬ್ಬರ ಪಾದದ ಬುಡಕ್ಕೆ ನೀರು ಹಾಕುವ ಕಾರ್ಯಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ದೇಶದ್ರೋಹಿ ಘಟನೆಗಳು ನಡೆಯುತ್ತವೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸದೃಢ ನಾಯಕತ್ವ ಇರುವ ಕಾರಣಕ್ಕೆ ಈಗ ದೇಶ ಭದ್ರವಾಗಿದೆ ಎಂದು ಅವರು ಹೇಳಿದರು.












Click it and Unblock the Notifications