Yatnal vs BYV: ಬಿಜೆಪಿ ಬಣ ರಾಜಕೀಯ ಸದ್ದಡಗಿಸಲು ಅಮಿತ್ ಶಾಗೆ ದೂರು, ಯತ್ನಾಳ್ ಉಚ್ಛಾಟನೆ ಬೇಡ
ಬೆಂಗಳೂರು, ಡಿಸೆಂಬರ್ 01: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಧ್ಯೆ ಬಣ ರಾಜಕೀಯ ತಿಕ್ಕಾಟ ಜೋರಾಗಿದೆ. ಹೇಳಿಕೆ,ಆರೋಪಗಳ ಮಧ್ಯೆ ಈ ವಿಚಾರ ಇದೀಗ ದೆಹಲಿ ಕೇಂದ್ರ ನಾಯಕರ ಅಂಗಳಕ್ಕೆ ತಲುಪಿದೆ. ಬಣ ರಾಜಕೀಯ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶನಿವಾರವಷ್ಟೇ ಅಮಿತ್ ಶಾ ಗೆ ದೂರು ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಈರಣ್ಣ ಕಡಾಡಿ, ಜಗದೀಶ್ ಶೆಟ್ಟರ್, ಬಿವೈ ರಾಘವೇಂದ್ರ ಸೇರಿದಂತೆ ವಿವಿಧ ಬಿಜೆಪಿ ಸಂಸದರು ಅಮಿತ್ ಶಾ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ. ಬಣ ರಾಜಕೀಯ, ನಾಯಕರ ಮಧ್ಯದ ಅಸಮಾಧಾನ ಕುರಿತು ಚರ್ಚಿಸಿದ್ದಾರೆ. ಅಮಿತ್ ಶಾ ಅವರು ತಾವು ಈ ಜಗಳದಲ್ಲಿ ಮಧ್ಯ ಪ್ರವೇಶಿಸುವಂತೆ ಅವರು ದೂರಿನಲ್ಲಿ ಕೋರಿದ್ದಾರೆ.

ತಪ್ಪು ಸಂದೇಶ ರವಾನಿಸುವುದು ಬೇಡ: ಜೋಶಿ ಮನವಿ
ವಿಜಯೇಂದ್ರ ಹಾಗೂ ಯತ್ನಾಳ್ ಅವರ ಮಧ್ಯೆ ಜಗಳದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ. ಬಿಜೆಪಿ ಕಾರ್ಯಕರ್ತರಿಗೆ, ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಈಗಾಗಲೇ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಈ ಬಣ ಜಗಳ ಮುಂದುವರಿದರೆ, ಮುಂದಿನ ದಿನಗಳಲ್ಲಿ ಎದುರಾಗಲಿರುವ ಗ್ರಾಮ, ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಪಕ್ಷಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇರುತ್ತದೆ ಎಂದು ಪ್ರಹ್ಲಾದ್ ಜೋಶಿಯವರು ಮನದಟ್ಟು ಮಾಡಿದ್ದಾರೆ.
ಈ ಕಾರಣದಿಂದ ನೀವು ಈ ಉಭಯ ನಾಯಕರ ಬೀದಿ ಜಗಳದ ಮಧ್ಯೆ ಪ್ರವೇಶಿಸಬೇಕು. ಬಣರಾಜಕೀಯಕ್ಕೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕುರಿತು ಶಾಸಕ ಯತ್ನಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದು ಸರಿಯಲ್ಲ. ಉಚ್ಚಾಟನೆ ಮಾಡುವುದು ಬೇಡ ಎಂದು ಜೋಶಿಯವರು ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ.
ಯತ್ನಾಳ್ ಹಿಂದುಪರವಾಗಿರುವ ಹಾಗೂ ಲಿಂಗಾಯತ ಪ್ರಮುಖ ನಾಯಕರು. ವಿಜಯಪುರ ಸೇರಿದಂತೆ ಪಂಚಮಸಾಲಿ ಒಳಗೊಂಡು ಲಿಂಗಾಯತರೇ ಹೆಚ್ಚಿರುವ ಉತ್ತರ ಕರ್ನಾಟಕ ಭಾಗದಲ್ಲಿ ಶಾಸಕರನ್ನು ಉಚ್ಚಾಟನೆ ಮಾಡಿದರೆ ತಪ್ಪು ಸಂದೇಶ ರವಾನಿಸಿದದಂತೆ ಆಗುವ ಸಾಧ್ಯತೆ ಇದೆ.
ಆದ್ದರಿಂದ ತಾವು ವಿಜಯೇಂದ್ರ ಹಾಗೂ ಯತ್ನಾಳ್ ಅವರನ್ನು ಒಂದೇ ವೇದಿಕೆಗೆ ಕರೆತಂದು ಸಂಧಾನ ಮಾಡಬೇಕು ಎಂದು ಪ್ರಹ್ಲಾದ್ ಜೋಶಿಯವರು ಮನವಿ ಮಾಡಿದ್ದಾರೆ.












Click it and Unblock the Notifications