Dharmasthala: ಧರ್ಮಸ್ಥಳ ಕೇಸ್‌ನ ದುರುಳರು ಯಾರೇ ಆಗಿದ್ದರೂ ಸತ್ಯ ಹೊರಬರಲಿ: ನಟ ಪ್ರಕಾಶ್ ರಾಜ್
Dharmasthala Case: ಧರ್ಮಸ್ಥಳದಲ್ಲಿ ಅಸಹಜ ಸಾವುಗಳು, ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಜ್ಯ ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ತಂಡ ರಚಿಸಿ ತನಿಖೆಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ಕೂಡ ಧ್ವನಿ ಎತ್ತಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ ಎಂದು ಆಗ್ರಹಿಸುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಧರ್ಮಸ್ಥಳ ಕೇಸ್ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಧರ್ಮಸ್ಥಳ ಕೇಸ್ ಬಗ್ಗೆ ಗಂಭೀರವಾಗಿ ಮಾತನಾಡಿರುವ ನಟ ಪ್ರಕಾಶ್ ರಾಜ್ ಅವರು ಉನ್ನತ ಅಧಿಕಾರಿಗಳ ತನಿಖಾ ತಂಡವನ್ನೇ ಆಯೋಜಿಸಿದ್ದೀರಿ. ಪ್ರಾಮಾಣಿಕ, ಪಾರದರ್ಶಕ ತನಿಖೆ ನಡೆಯಲಿ. ದುರುಳರು ಯಾರೇ ಆಗಿದ್ದರೂ ಸತ್ಯ ಹೊರಬರಲಿ ಎಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ, ನಿಮ್ಮ ಮಾತಿನ ಮೇಲೆ ಭರವಸೆ ಇದೆ. ಆದರೆ ಈ ದಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ, ಸಾಕ್ಷಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗುದುಕೊಳ್ಳಿ. ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.

ಎಸ್‌ಐಟಿ ತನಿಖೆಗೆ ಸಿಎಂ ಆದೇಶ
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬುರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿದ್ದು ಇದಕ್ಕಾಗಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಆದೇಶಿಸಲಾಗಿದೆ ಎಂದು ಸಿದ್ದರ ಎಂದಿದ್ದಾರೆ.
ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದೆ. ಅವರ ಕೋರಿಕೆಯ ಮೇರೆಗೆ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಲಾಗಿದೆ. ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು?
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ಅನುಮಾನಾಸ್ಪದ ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದ ತನಿಖೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನಡೆಸಲು ಉದ್ದೇಶಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ತನಿಖೆ ನಡೆಸಲು ನಮ್ಮ ಸರ್ಕಾರ ಎಡಿಜಿಪಿ ಪ್ರಣವ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಈ ತಂಡ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.












Click it and Unblock the Notifications