ಪ್ರಜ್ವಲ್ ರೇವಣ್ಣ ವಿಚಾರಣೆ: ಸಹಾಯಕ್ಕಾಗಿ ಎಸ್ಐಟಿಯಿಂದ ಆಪಲ್ ಮೊರೆ
ಬೆಂಗಳೂರು, ಜೂನ್ 03: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಆದರೆ ಕೆಲವು ತಾಂತ್ರಿಕ ಅಂಶಗಳ ತನಿಖೆಗೆ ಹಿನ್ನಡೆ ಆಗುತ್ತಿದ್ದು, ಇದಕ್ಕಾಗಿ ಎಸ್‌ಐಟಿ ಸಿಐಡಿ ಪೊಲೀಸರ ಮೂಲಕ ಆಪಲ್ ಸಂಸ್ಥೆ ಮೊರೆ ಹೋಗಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿ ಅದರ ವಿಡಿಯೋ ಮಾಡಿಕೊಂಡಿದ್ದಾರೆ ಎಂಬುದು ಪ್ರಮುಖ ಆರೋಪ. ಆದರೆ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾದ ಫೋನ್ ಕಳೆದು ಹೋಗಿದೆ.

ಮೇ 31ರಂದು ಪ್ರಜ್ವಲ್ ರೇವಣ್ಣ ಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಅವರ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಫೋನ್ ಆಪಲ್ ಕಂಪನಿಗೆ ಸೇರಿದ್ದು, ಆದರೆ ಇದು ಅವರ ಹೊಸ ಫೋನ್. ಹಳೆಯ ಪೋನ್ ಕಳೆದು ಹೋಗಿದೆ ಎಂದು ಅವರು ಹೇಳುತ್ತಿದ್ದಾರೆ.
ಕಳೆದು ಹೋಗಿರುವ ಫೋನ್: ಎಸ್‌ಐಟಿ ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಹೊಸ ಪೋನ್‌ನಲ್ಲಿ 2024ರ ಲೋಕಸಭೆ ಚುನಾವಣೆಯ ಪ್ರಚಾರದ ಚಿತ್ರ, ವಿಡಿಯೋಗಳು ಸಿಕ್ಕಿವೆ. ಆದರೆ ಲೈಂಗಿಕ ದೌರ್ಜನ್ಯ ನಡೆಸಿದ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ.
ಹಳೆಯ ಫೋನ್ ಸಿಗುವುದು ಎಸ್‌ಐಟಿ ತನಿಖೆಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ಕಳುವಾಗಿರುವ ಹಳೆಯ ಫೋನ್ ಹುಡುಕಾಟಕ್ಕೆ ಎಸ್‌ಐಟಿ ಸಿಐಡಿ ತಾಂತ್ರಿಕ ತಂಡದ ಮೂಲಕ ಆಪಲ್ ಸಂಸ್ಥೆ ಮೊರೆ ಹೋಗಿದೆ. ಫೋನ್ ಬಗ್ಗೆ ಆಪಲ್ ಸಂಸ್ಥೆ ಮಾಹಿತಿ ಹಂಚಿಕೊಂಡರೆ ತನಿಖೆ ಚುರುಕಾಗಲಿದೆ.
ಕೋರ್ಟ್ ಪ್ರಜ್ವಲ್ ರೇವಣ್ಣರನ್ನು ಜೂನ್ 6ರ ತನಕ ಎಸ್ಐಟಿ ವಶಕ್ಕೆ ನೀಡಿದೆ. ಎಸ್‌ಐಟಿ ಇನ್ನೂ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಹೊಳೆನರಸೀಪುರ ನಿವಾಸಕ್ಕೆ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವುದು ಬಾಕಿ ಇದೆ.
ಮತ್ತೊಂದು ಕಡೆ ಎಸ್‌ಐಟಿ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳುತ್ತಿದೆ. ಇದರ ನಡುವೆಯೇ ಅವರ ಹಳೆಯ ಫೋನ್ ಪತ್ತೆಯಾಗದಿರುವುದು ಎಸ್‌ಐಟಿ ತನಿಖೆಗೆ ಹಿನ್ನಡೆ ಉಂಟು ಮಾಡಿದೆ. ತಾಂತ್ರಿಕ ಅಂಶಗಳ ತನಿಖೆಗೆ ಎಸ್‌ಐಟಿಗೆ ಸಹಕಾರ ಅತ್ಯಗತ್ಯವಾಗಿದೆ.
ಪ್ರಜ್ವಲ್ ರೇವಣ್ಣ ತಮ್ಮ ಹಳೆಯ ಫೋನ್ ತುಂಬಾ ಹಿಂದೆಯೇ ಕಳೆದು ಹೋಗಿದೆ. ಅದರ ಬಗ್ಗೆ ದೂರು ಸಹ ದಾಖಲಿಸಲಾಗಿದೆ. ಆದರೆ ಇನ್ನೂ ಫೋನ್ ಪತ್ತೆಯಾಗಿಲ್ಲ ಎಂದು ಎಸ್‌ಐಟಿ ವಿಚಾರಣೆ ವೇಳೆ ಹೇಳಿದ್ದಾರೆ. ಫೋನ್ ಸಿಕ್ಕಿದರೆ ವಿಡಿಯೋಗಳನ್ನು ಅವರು ಮಾಡಿಕೊಂಡ ಉದ್ದೇಶಗಳೇನು? ಎಂದು ತನಿಖೆ ನಡೆಸಲು ಎಸ್ಐಟಿಗೆ ಸಹಕಾರಿಯಾಗಲಿದೆ.
ಪ್ರಜ್ವಲ್ ರೇವಣ್ಣ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲು ಎಸ್ಐಟಿ ಸಿದ್ಧತೆ ನಡೆಸಿದೆ. ಆದರೆ ಜೂನ್ 4ರ ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹಾಸನ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೂ ಪ್ರಜ್ವಲ್ ರೇವಣ್ಣ ಅಭ್ಯರ್ಥಿ.
ಚುನಾವಣೆಯಲ್ಲಿ ಅವರು ಜಯಗಳಿಸಿದರೆ ಅವರನ್ನು ನೋಡಲು ಮಹಜರು ವೇಳೆ ಸಾಕಷ್ಟು ಜನರು, ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಆದ್ದರಿಂದ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸ್ಥಳ ಮಹಜರು ನಡೆಸುವ ನಿರೀಕ್ಷೆ ಇದೆ.
ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿ ಜೂನ್ 6ಕ್ಕೆ ಅಂತ್ಯಗೊಳ್ಳಲಿದೆ. ಬಳಿಕ ಎಸ್ಐಟಿ ಅವರನ್ನು ಪುನಃ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆಯುವ ನಿರೀಕ್ಷೆ ಇದೆ. ಇನ್ನೂ ಭವಾನಿ ರೇವಣ್ಣಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟವನ್ನು ಮುಂದುವರೆಸಿದ್ದಾರೆ.












Click it and Unblock the Notifications