Prajwal Case: ದೇವೇರಾಜೇಗೌಡರಿಗೆ ಜೈಲಿನಲ್ಲಿ ಜೀವ ಭಯ: ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಮೇ 22: ಜೈಲಿನಲ್ಲಿ ವಕೀಲ ದೇವೇರಾಜೇಗೌಡರಿಗೆ ಜೀವ ಭಯ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇರಬಹುದು. ಈ ಸರ್ಕಾರದಲ್ಲಿ ಇರುವ ಬಹಳ ಜನರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎನ್ನುವ ಹಿನ್ನಲೆಯಲ್ಲಿ ನೋಡಿದರೆ ನಿಜ ಇರಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮಾಜಿ ಶಾಸಕ ಸುರೇಶ್ ಗೌಡ ಅವರು ಹೇಳಿರಬಹುದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಜ್ವಲ್ ಗೆ ಈಗಾಗಲೇ ವಾಪಸ್ ಬರುವಂತೆ ಮನವಿ ಮಾಡಿದ್ದೇನೆ. ಎಲ್ಲೇ ಇದ್ದರೂ ಬಂದು SIT ಮುಂದೆ ಹಾಜರಾಗು ಎಂದು ಸಂದೇಶ ನೀಡಿದ್ದೇನೆ ಎಂದ ಅವರು; ನನಗೆ ಪ್ರಜ್ವಲ್ ಸಂಪರ್ಕದಲ್ಲಿ ಇಲ್ಲ. ಆ ಕಾರಣಕ್ಕೆ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೇನೆ.ನಾನೂ ಕೂಡ ವಾಪಸ್ ಬರುತ್ತಾನೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ದೇವೇಗೌಡರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗೌರವ ಎನ್ನುವುದು ಇದ್ದರೆ ವಾಪಸ್ ಬಾ.. ಎಂದು ಹೇಳಿದ್ದೇನೆ. ಈ ಕೂಡಲೇ ವಾಪಸ್ ಬಾ.. ಎಂದು ಮತ್ತೆ ಮನವಿ ಮಾಡುತ್ತೇನೆ ಎಂದರು.

ಶಿವರಾಮೇಗೌಡ, ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ನಡುವಿನ ಮೊಬೈಲ್ ಸಂಭಾಷಣೆಗಿಂತ ಬೇರೆ ಸಾಕ್ಷ್ಯ ಬೇಕಾ? ಎಂದು ಪೆನ್ ಡ್ರೈವ್ ಕೇಸ್ ನಲ್ಲಿ ಸಾಕ್ಷ್ಯ ಕೇಳಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. ಡಿ.ಕೆ.ಶಿವಕುಮಾರ್ ಅವರೇ ಅರ್ಧ ನಿಮಿಷ ಮಾತಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತನಾಡಿರುವುದೇ ಸಾಲದೇ? ಆದರೆ, ಸಿಎಂ ಅವರು ಸಾಕ್ಷ್ಯ ಕೊಡಿ, ಸಾಕ್ಷ್ಯ ಕೊಡಿ ಎಂದು ಕೇಳುತ್ತಿದ್ದಾರೆ. SIT ತಂಡ 7-8 ಜನರನ್ನು ಬಂಧನ ಮಾಡಿ ಕರೆದುಕೊಂಡು ಬಂದಿದ್ದಾರೆ. ಯಾವ ಸಾಕ್ಷ್ಯಗಳ ಆಧಾರದಲ್ಲಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅವರಿಗೂ ಪ್ರಕರಣಕ್ಕೂ ಏನು ಸಂಬಂಧ? ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೇ ಇದೆ, ಇದೆಲ್ಲವನ್ನೂ ಡಿ.ಕೆ.ಶಿವಕುಮಾರ್ ಅವರೇ ಮಾಡಿರುವುದು ಎಂದು ನೇರ ಆರೋಪ ಮಾಡಿದರು.
ಅವರೇ ಮೊಬೈಲ್ ಸಂಭಾಷಣೆಯಲ್ಲಿ ಇನ್ನು ಏನೇನು ಮಾಹಿತಿ, ಸಾಕ್ಷ್ಯ ಇದೆ ತೆಗೆದುಕೊಂಡು ಬಾ.. ಎಂದು ದೇವರಾಜೇ ಗೌಡನಿಗೆ ಹೇಳಿದ್ದಾರೆ. ಇದಕ್ಕಿಂತ ಇನ್ನೂ ಏನು ಸಾಕ್ಷ್ಯ ಬೇಕು? ಅವರ ಜತೆ ಮಾತನಾಡುವಾಗ ಡಿಕೆಶಿ, ಪೊಲೀಸ್ ದೂರನ್ನು ಕಷ್ಟ ಪಟ್ಟು ಕೊಡಿಸಿದ್ದೇವೆ ಎನ್ನುತ್ತಾರೆ. ಸಿಎಂಗೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದರಾಮಯ್ಯ ಅವರು 6 ಪ್ರಶ್ನೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ನನ್ನು ಮುಖ್ಯಮಂತ್ರಿಗಳು ಅಪರಾಧಿ ಮಾಡಿ ಬಿಟ್ಟಿದ್ದಾರೆ. ಇನ್ನು ಪ್ರಜ್ವಲ್ ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಅಂತ ಇನ್ನು ಎಲ್ಲಿ ಸಾಬೀತಾಗಿದೆ? ತನಿಖಾ ತಂಡದವರೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ, ವಿಡಿಯೋಗಳಲ್ಲಿ ಪುರುಷನ ಮುಖವೇ ಕಾಣಲ್ಲ ಎಂದು. ಇದು ಸಿಎಂಗೆ ಗೊತ್ತಿಲ್ಲವೇ? ನೈತಿಕತೆ ಉಳಿಸಬೇಕು ಎಂದೇ ಆತನ ವಿರುದ್ಧ ಕೇಳಿ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಿದ್ದೇವೆ.
ನಾವು ಸಿದ್ದರಾಮಯ್ಯ ತರಹ ಭಂಡತನ ಮಾಡಿಲ್ಲ. ಆ ಭಂಡತನದಲ್ಲಿ ನಿಮ್ಮ ಮಗನದ್ದು ನಡೆಯಿತಲ್ಲ.. ಅಪ್ಪ..ಅಪ್ಪ.. ನಾನು ಕೊಟ್ಟಿದ್ದೇ 5 ಹೆಸರು, 6 ಹೆಸರು ಎಲ್ಲಿಂದ ಬಂತು ಹೇಳಿ ಎಂದು ಕಥೆ ಕಟ್ಟಿದಿರಲ್ಲ? ನಿಮ್ಮ ಮಗನ ಹೆಸರು ಬಂದ ಕೂಡಲೇ ಅದಕ್ಕೆ CSR ಫಂಡ್ ಎಂದು ಬಣ್ಣ ಹಚ್ಚಿದ್ದು ಗೊತ್ತಿಲ್ಲವೇ ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸಾಕ್ಷ್ಯ ನಾಶ ಯಾವ ರೀತಿ ಮಾಡಬಹುದು ಎನ್ನುವುದಕ್ಕೆ ನಿಮಗಿಂತ ಒಳ್ಳೆಯ ಉದಾಹರಣೆ ಬೇಕಾ? ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯಗಳನ್ನು ಯಾವ ರೀತಿ ತಿದ್ದಬಹುದು ಎಂದು ಸಾಬೀತು ಮಾಡಿದ್ದೀರಿ. ಈಗಲೂ ನೀವು ಮಾಡುತ್ತಿರುವುದು ಅದೇ ಕೆಲಸ. ಅಷ್ಟು ಸ್ಪಷ್ಟವಾಗಿ ಒಬ್ಬ ಡಿಸಿಎಂ ಮಾತನಾದಿರುವುದು ಕಣ್ಣ ಮುಂದೆಯೇ ಇದೆ, ಆದರೂ ಸಾಕ್ಷ್ಯ ಕೇಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಕಾರ್ತಿಕ್ ಗೌಡ, ನವೀನ್ ಗೌಡ ಸೇರಿ ಪೆನ್ ಡ್ರೈವ್ ಹಂಚಿದ ಕಿಡಿಗೇಡಿಗಳನ್ನು ಇವತ್ತಿನವರೆಗೂ ಬಂಧಿಸಿಲ್ಲ. ಎಸ್ ಐಟಿಗೆ ಹೇಳಿಕೆ ನೀಡಿದ್ದಾನೆ ಎನ್ನುತ್ತೀರಿ, ಹಾಗಾದರೆ ಅವನು ಯಾರ ವಶದಲ್ಲಿ ಇದ್ದಾನೆ. ಯಾವತ್ತೂ ಅವನು ತನಿಖಾ ತಂಡಕ್ಕೆ ಹೇಳಿಕೆ ಕೊಟ್ಟ? ಅವನನ್ನು ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿಲ್ಲ? ಇದಈಲ್ಲಿ ಏನೋ ಹುನ್ನಾರ ಇದೆ. ಮುಖ್ಯಮಂತ್ರಿ ಇದಕ್ಕೆ ಉತ್ತರ ಕೊಡಬೇಕು. ಸಿಎಂ ಅವರು ಇಷ್ಟು ಲಘುವಾಗಿ ಮಾತಾಡೋದು ಬೇಡ. ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ನುಣಿಚಿಕೊಳ್ಳುತ್ತಿದ್ದಾರೆ ಎಂದರು.












Click it and Unblock the Notifications