ಪ್ರಜಾವಾಣಿ ಪತ್ರಿಕೆಯ ಕಟ್ಟಾಳು ಎಂ.ಬಿ.ಸಿಂಗ್ ಕಣ್ಮರೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: 'ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ಪತ್ರಕರ್ತ ಎಂ.ಬಿ.ಸಿಂಗ್(91) ಅವರು ಮಂಗಳವಾರ ರಾತ್ರಿ ಸಹಕಾರನಗರದಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.

ಕನ್ನದ ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಸ್ಮರಣೀಯವಾದದ್ದು.ಹೊಸ ಬರಹಗಾರರನ್ನು ಪ್ರೋತ್ಸಾಹಿಸಿದವರು, ಬರೆಯುವಂತೆ ಉತ್ತೇಜಿಸಿದವರು ಎಂ.ಬಿ.ಸಿಂಗ್. 1925, ಮೇ 24ರಂದು ಮೈಸೂರಿನಲ್ಲಿ ಜನಿಸಿದವರು. ಅವರ ತಂದೆ ಮದನ ಸಿಂಗ್, ತಾಯಿ ವಸಂತಾ ಬಾಯಿ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮಂಡ್ಯದಲ್ಲೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಪಡೆದಿದ್ದರು. ಅವರು ಓದುವಾಗಲೇ ಮಾತೃಭೂಮಿ ಪತ್ರಿಕೆ ವರದಿಗಾರರಾಗಿ, ಏಜೆಂಟರಾಗಿ ಕೆಲಸ ಮಾಡಿದ್ದರು.[ಪತ್ರಿಕೋದ್ಯಮದ ಕಟ್ಟಾಳು ಎಂ.ಬಿ. ಸಿಂಗ್ ಅವರಿಗೆ ಅಭಿನಂದನೆ]

MB Singh

ಆ ನಂತರ ವಾರ್ತಾ, ಚಿತ್ರಗುಪ್ತ ಹಾಗೂ ವಿಶ್ವ ಕರ್ನಾಟಕದಲ್ಲಿ ಕೆಲ ವರ್ಷ ದುಡಿದಿದ್ದರು. 1953ರಲ್ಲಿ ಉಪಸಂಪಾದಕ/ವರದಿಗಾರರಾಗಿ ಪ್ರಜಾವಾಣಿ ಸೇರಿದ್ದರು. ಆ ನಂತರ ಅದೇ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾಗಿದ್ದರು. ಸಿಂಗ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಟೀಎಸ್ಸಾರ್ ಪ್ರಶಸ್ತಿಗಳು ಸಂದಿದ್ದವು.

'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿಯವರನ್ನು ಒನ್ ಇಂಡಿಯಾ ಸಂಪರ್ಕಿಸಿದಾಗ ಎಂ.ಬಿ.ಸಿಂಗ್ ಅವರನ್ನು ನೆನಪಿಸಿಕೊಂಡರು. ಎಂ.ಬಿ.ಸಿಂಗ್ ಒಳ್ಳೆ ನಾಯಕರಾಗಿದ್ದರು. ಒಳ್ಳೆ ಪ್ಲಾನರ್ ಆಗಿದ್ದರು. ನಾನು ಸುಧಾದಿಂದ ಪ್ರಜಾವಾಣಿಗೆ ಬರುವುದಕ್ಕೆ ಅವರೇ ಕಾರಣರು. ಸುಧಾದಲ್ಲಿ ತುಂಬ ಒಳ್ಳೆ ಕವರ್ ಸ್ಟೋರಿಗಳನ್ನು ಮಾಡಿಸಿದವರು ಸಿಂಗ್.

ಗುಣಗ್ರಾಹಿ ವ್ಯಕ್ತಿತ್ವ ಅವರದು. ಯಾರು, ಯಾವ ಕೆಲಸವನ್ನು ಮಾಡಬಲ್ಲರು ಎಂಬುದನ್ನು ಚೆನ್ನಾಗಿ ನಿರ್ಧರಿಸುತ್ತಿದ್ದರು. ಕಡಿಮೆ ಜನರಿಂದ ಹೆಚ್ಚು ಕೆಲಸ ಮಾಡಿಸುವ ಸಾಮರ್ಥ್ಯ ಅವರಲ್ಲಿತ್ತು. ನನಗೆ ಬೆಳಗಾವಿಗೆ ಟ್ರಾನ್ಸ್ ಫರ್ ಆಯಿತು ಆದ್ದರಿಂದ ತುಂಬ ಕಾಲ ಅವರ ಹತ್ತಿರದಲ್ಲಿ ಕೆಲಸ ಮಾಡುವುದಕ್ಕೆ ಆಗಲಿಲ್ಲ ಎಂದು ಹೇಳಿದರು.

'ಪ್ರಜಾವಾಣಿ ಕಚೇರಿಗೆ ನಾನು ಬೆಳಿಗ್ಗೆ ಒಂಬತ್ತಕ್ಕೇ ಹೋಗುತ್ತಿದ್ದೆ. ಕಸ ಗುಡಿಸಿ, ಹಳೆಯ ಪೇಪರುಗಳನ್ನು ಯಾರೂ ಹೊರಗೆ ಹಾಕದೇ ಇದ್ದರೆ ನಾನೇ ಆ ಕೆಲಸವನ್ನು ಮಾಡುತ್ತಿದ್ದೆ. ಎಂದೂ ಗಡಿಯಾರ ನೋಡಿ ಕೆಲಸ ಮಾಡಲೇ ಇಲ್ಲ. ಲೇಖಕರನ್ನು ಖುದ್ದು ಹುಡುಕಿಕೊಂಡು ಹೋಗುತ್ತಿದ್ದೆ. ಬರೆಯುವಂತೆ ಓಲೈಸಲು ಸಾಕಷ್ಟು ಹೆಣಗಾಡಿದ್ದೂ ಇದೆ. ಇವನ್ನೆಲ್ಲಾ ನೋಡಿದ ಸಹೋದ್ಯೋಗಿಗಳು ತಂತಾನೇ ಪ್ರೀತಿಯಿಂದ ಕೆಲಸ ಮಾಡತೊಡಗಿದರು. ನಾನು ಒತ್ತಡ ಹೇರಿ ಕೆಲಸ ಮಾಡಿಸಲಿಲ್ಲ. ಕೆಲಸದ ಬಗ್ಗೆ ಪ್ರೀತಿ ಮೂಡಿಸಿದೆನಷ್ಟೆ.'-ಇದು ಎಂ.ಬಿ.ಸಿಂಗ್ ಅವರೇ ಹೇಳಿಕೊಂಡಿದ್ದ ಮಾತು.

ಸಣ್ಣ ಪತ್ರಿಕೆಗಳ ಕಷ್ಟ-ಸುಖ, ಅಳಿವು-ಉಳಿವು ಮತ್ತು ಅದರ ಏಳಿಗೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು, ಸಮಗ್ರ ಅಧ್ಯಯನ ನಡೆಸಿ ವರದಿಯೊಂದನ್ನು ತಯಾರಿಸಲು ಸರಕಾರ ಸಮಿತಿಯೊಂದನ್ನು ರಚಿಸಿತ್ತು. ಅದರ ನೇತೃತ್ವ ವಹಿಸಿದ್ದವರು ಎಂ.ಬಿ.ಸಿಂಗ್. ಆ ಸಮಿತಿಯ ವರದಿ 'ಸಿಂಗ್ ವರದಿ' ಎಂದೇ ಹೆಸರಾಗಿತ್ತು.

ಸಿಂಗ್ ಅವರಿಗೆ 90 ವರ್ಷ ತುಂಬಿದ ಸಂದರ್ಭದಲ್ಲಿ 'ಎಂ.ಬಿ.ಸಿಂಗ್: ಕನ್ನಡ ಪತ್ರಿಕೋದ್ಯಮ ಕಟ್ಟಾಳು' ಎಂಬ ಅಭಿನಂದನಾ ಗ್ರಂಥ ಹೊರತರಲಾಗಿತ್ತು.ಎಂ.ಬಿ.ಸಿಂಗ್ ಅವರ ನಿಧನಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸಂತಾಪ ಸೂಚಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Editor of Kannada News Paper "Prajavani" M B Singh dies at 91. Also served as Editor of Sudha (weekly), Mayura ( Monthly ) Singh, was a recipient of Karnataka Rjyotsava Award, Media Academy award. His passion for Print, adopting to modernization of printing technology and concern for small news papers shall be remembered for long time to come. RIP M B Singh
Please Wait while comments are loading...