ರಾಜ್ಯ ರಾಜಕೀಯದಲ್ಲೀಗ ‘ಅಧಿಕಾರ’ಕ್ಕಾಗಿ ಹೋರಾಟ! ಯಾರಿಗೆ ಯಾರು ಶತ್ರು?

ಬೆಂಗಳೂರು, ಫೆಬ್ರವರಿ 17: ರಾಜಕೀಯದಲ್ಲಿ ಅಧಿಕಾರ ಎನ್ನುವುದೇ ಹಾಗೆ, ಅದು ಒಮ್ಮೆ ಸಿಕ್ಕಿತೆಂದರೆ ಅದನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಾರೆ ವಿನಃ ತಮ್ಮ ಅವಧಿ ಮುಗಿಯುತ್ತಿದ್ದಂತೆಯೇ ಬಿಟ್ಟು ಕೊಟ್ಟು ತೆಪ್ಪಗೆ ಕುಳಿತುಕೊಳ್ಳುವುದಕ್ಕೆ ಯಾರೂ ತಯಾರಿಲ್ಲ. ಅದರಲ್ಲೂ ಆಡಳಿತದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷದ ನಾಯಕರು ತಮಗೆ ಸಿಕ್ಕ ಅಧಿಕಾರವನ್ನು ಬೇರೆಯವರಿಗೆ ಸುಲಭವಾಗಿ ಬಿಟ್ಟು ಕೊಡುತ್ತಾರಾ? ಖಂಡಿತಾ ಇಲ್ಲ. ಬದಲಿಗೆ ಅದನ್ನು ಇನ್ನಷ್ಟು ದಿನ ಉಳಿಸಿಕೊಳ್ಳುವುದು ಹೇಗೆ ಎಂಬುದರತ್ತ ಚಿಂತನೆ ಮಾಡುತ್ತಾರೆ ಮತ್ತು ಅದಕ್ಕಾಗಿ ಹೊಸದಾದ ತಂತ್ರ ಹೂಡುತ್ತಾರೆ. ಕೊನೆಯ ತನಕವೂ ಅಧಿಕಾರ ಉಳಿಸಿಕೊಳ್ಳಲು ಹೋರಾಟ ಮಾಡುತ್ತಲೇ ಇರುತ್ತಾರೆ.

ಇವತ್ತಿನ ಕರ್ನಾಟಕದ ರಾಜಕೀಯದಲ್ಲಿ ಆಗುತ್ತಿರುವುದು ಕೂಡ ಅದೇನೇ..ಅಧಿಕಾರ ಸಿಕ್ಕವರು ಅದನ್ನು ಬೇರೆಯವರಿಗೆ ಹಸ್ತಾಂತರಿಸಲು ತಯಾರಿಲ್ಲ. ಹೀಗಾಗಿ ಅಧಿಕಾರಕ್ಕಾಗಿ ಹಪಾಹಪಿಸುವವರು ಅಧಿಕಾರ ಹಿಡಿದಿರುವಾತ ಬಿಟ್ಟುಕೊಡದೆ ಹೋದರೂ ಪರ್ವಾಗಿಲ್ಲ ಬಲತ್ಕಾರವಾಗಿ ಕಿತ್ತುಕೊಳ್ಳುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಅಧಿಕಾರದ ಅಮಲು ಮದ್ಯದ ಅಮಲಿಗಿಂತಲೂ ಡೇಂಜರ್ ಎಂಬುದು ಗೊತ್ತಾಗುತ್ತಿದೆ. ಈ ಅಧಿಕಾರದ ಅಮಲಿನಲ್ಲಿ ತೇಲುತ್ತಿರುವವರ ನಡುವೆ ಜನ ಸಾಮಾನ್ಯರ ಬದುಕು ನಾಯಿಪಾಡಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

Power Struggles in Karnataka Politics A Closer Look

2013ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ವೇಳೆ ಸಿದ್ದರಾಮಯ್ಯ ಅವರು ಇದು ನನ್ನ ಕೊನೆಯ ಚುನಾವಣೆ. ಇನ್ನು ಮುಂದೆ ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದಿದ್ದರು. ಆದರೆ ಐದು ವರ್ಷ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯಲಿಲ್ಲ. ಬದಲಿಗೆ ತಮ್ಮದೇ ನೇತೃತ್ವದಲ್ಲಿ 2018ರಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿದರು. ಆದರೆ ಅವತ್ತು ಕಾಂಗ್ರೆಸ್ ಗೆಲುವು ಸಾಧಿಸಲು ಆಗಲಿಲ್ಲ. ಬದಲಿಗೆ ಅತಂತ್ರ ಸ್ಥಿತಿ ಎದುರಾಯಿತು.

ಅವತ್ತು ಸಿಎಂ ಆಗುವ ಶಪಥ ಮಾಡಿದ್ದ ಬಿಎಸ್‌ವೈ

ಈ ವೇಳೆ ಚುನಾವಣೆಯಲ್ಲಿ ದ್ವೇಷಿಸುತ್ತಾ ಬಂದಿದ್ದ ಜೆಡಿಎಸ್ ನಾಯಕರ ಮನೆಗೆ ಹೋಗಿ ಅವರ ಸಹಕಾರದಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂತು. ಆದರೆ ಹೆಚ್ಚಿನ ಸ್ಥಾನ ಪಡೆದಿದ್ದರೂ ಸರ್ಕಾರ ರಚನೆ ಸಾಧ್ಯವಾಗಲಿಲ್ಲವಲ್ಲ ಎಂದು ಮೈಕೈ ಪರಚಿಕೊಳ್ಳುತ್ತಿದ್ದ ಬಿಜೆಪಿ ನಾಯಕರು ಹೇಗಾದರು ಮಾಡಿ ಸಮ್ಮಿಶ್ರ ಸರ್ಕಾರವನ್ನು ಕೆಡವಲೇ ಬೇಕೆಂದು ಹಠಕ್ಕೆ ಬಿದ್ದಿದ್ದರು. ಅದರಲ್ಲೂ ಇಳಿವಯಸ್ಸಿನಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರು ಏನೇ ಆಗಲಿ ತಾನು ಮುಖ್ಯಮಂತ್ರಿ ಆಗಲೇ ಬೇಕೆಂದು ಶಪಥ ಮಾಡಿದ್ದರು.

Power Struggles in Karnataka Politics A Closer Look

2018ರಿಂದ 2019ರ ವೇಳೆಗೆ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಾಕಷ್ಟು ಅಸಮಾಧಾನಗಳು, ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದವು. ಸಿದ್ದರಾಮಯ್ಯ ಅವರು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದರೆ ಕೇವಲ ಶಾಸಕರಾಗಿ ಉಳಿದು ಬಿಟ್ಟಿದ್ದರು. ಸಮ್ಮಿಶ್ರ ಸರ್ಕಾರದ ರಚನೆಯಲ್ಲಾಗಲೀ, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದಾಗಲೀ ಯಾವುದೂ ಅವರಿಗೆ ಇಷ್ಟವಿರಲಿಲ್ಲ. ಇನ್ನೊಂದು ಕಡೆ ಕಾಂಗ್ರೆಸ್ ನಲ್ಲಿದ್ದ ಕೆಲವೊಂದು ಸಚಿವರು, ಶಾಸಕರಿಗೂ ಅತೃಪ್ತಿ, ಅಧಿಕಾರದ ಬಯಕೆ ಎಲ್ಲವೂ ಇತ್ತು. ಇದನ್ನು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಬಳಸಿಕೊಂಡರು. ಪರಿಣಾಮ ಆಪರೇಷನ್ ಕಮಲ ನಡೆದು ಸಮ್ಮಿಶ್ರ ಸರ್ಕಾರಕ್ಕೆ ಮುಳುಗು ನೀರು ತಂದು ತಾವು ಮುಖ್ಯಮಂತ್ರಿಯಾದರು.

ನಿವೃತ್ತಿಯ ಹೇಳಿಕೆ ರಾಜಕೀಯ ತಂತ್ರನಾ?

ಅಧಿಕಾರ ಬಯಕೆ ಇಲ್ಲದೆ ಹೋಗಿದ್ದರೆ, ಬಹುಶಃ ಅವತ್ತು ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುತ್ತಿರಲಿಲ್ಲ. ಆದರೆ ಹಠಕ್ಕೆ ಬಿದ್ದು ಸಿಎಂ ಆದ ಅವರಿಗೆ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿಲ್ಲದ ವಿಚಾರವೇನಲ್ಲ. ಅಧಿಕಾರವನ್ನು ಕಣ್ಣೀರು ಹಾಕುತ್ತಲೇ 2021ರಲ್ಲಿ ಬಿಟ್ಟುಕೊಟ್ಟ ಆ ದೃಶ್ಯಗಳು ಇವತ್ತಿಗೂ ಎಲ್ಲರ ಕಣ್ಮುಂದೆಯೇ ಇದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೋರಾಟ ಮಾಡಿಕೊಂಡು ಬಂದ ನಾಯಕರು ಅಧಿಕಾರ ಸಿಕ್ಕಿದ ತಕ್ಷಣವೇ ಬದಲಾಗಿ ಹೋಗಿ ಬಿಡುತ್ತಾರೆ. ಅಷ್ಟೇ ಅಲ್ಲದೆ ಎಂದೆಂದಿಗೂ ಅಧಿಕಾರದಲ್ಲಿ ಇರುತ್ತೇವೆ ಎಂಬ ಭ್ರಮೆ ಅವರಲ್ಲಿ ಮನೆ ಮಾಡಿ ಬಿಡುತ್ತದೆ. ಹೀಗಾಗಿ ಕರ್ತವ್ಯ ಮರೆತು ಕೇವಲ ಅಧಿಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಅಷ್ಟಕ್ಕೆ ಸೀಮಿತರಾಗಿ ಬಿಡುತ್ತಾರೆ.

2023ರ ಚುನಾವಣೆ ವೇಳೆ ಮತ್ತೊಮ್ಮೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಮತ್ತೆ ಚುನಾವಣಾ ರಾಜಕೀಯದಿಂದ ದೂರವಾಗುವ ಇಂಗಿತ ವ್ಯಕ್ತಪಡಿಸಿದ್ದರು. ಬಹುಶಃ ಇದು ಅವರು ಮಾಡಿದ ರಾಜಕೀಯ ತಂತ್ರವೋ ಗೊತ್ತಿಲ್ಲ. ಆದರೆ ಈಗ ಮತ್ತೆ ರಾಜಕೀಯದಲ್ಲಿ ಮುಂದುವರೆಯುವ ರೀತಿಯ ಮಾತುಗಳನ್ನು ಆಡುತ್ತಿರುವುದು ಕೂಡ ಅಧಿಕಾರ ಉಳಿಸಿಕೊಳ್ಳುವಲ್ಲಿ ಮಾಡುತ್ತಿರುವ ತಂತ್ರದ ಒಂದು ಭಾಗನಾ? ಅದು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಸಿದ್ದರಾಮಯ್ಯ ಅವರು ಸಿಎಂ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಸುಲಭವಾಗಿ ಹಸ್ತಾಂತರ ಮಾಡಿ ಬಿಡುತ್ತಾರೆ ಎನ್ನುವುದು ಕಷ್ಟವೇ.

ನಿಜವಾದ ವಿರೋಧಿಗಳು ವಿರೋಧಪಕ್ಷಗಳಲ್ಲಿಲ್ಲ

ಎರಡೂವರೆ ವರ್ಷಗಳ ಬಳಿಕ ಸಿಎಂ ಸ್ಥಾನ ಹಸ್ತಾಂತರವಾಗುತ್ತದೆ ಎಂಬುದು ಈಗ ಚರ್ಚೆಯಲ್ಲಿರುವ ವಿಚಾರ ಆದರೆ ಅದು ನಿಜನಾ? ಇಂತಹದೊಂದು ಒಪ್ಪಂದ ಆಗಿದೆ ಎನ್ನುವುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಇದರ ನಡುವೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಮುಖ್ಯಮಂತ್ರಿಗಳಾಗಬೇಕು ಎನ್ನುವುದು ಅವರ ಬೆಂಬಲಿಗ ಸಚಿವರು ಮಾಡುತ್ತಿರುವ ಒತ್ತಾಯ. ಸಿದ್ದರಾಮಯ್ಯ ಅವರ ಬಳಿ ಅಧಿಕಾರ ಉಳಿಯಬೇಕಾದರೆ ಡಿ.ಕೆ.ಶಿವಕುಮಾರ್ ಅವರ ಬಳಿಯಿರುವ ಕೆಪಿಸಿಸಿ ಪಟ್ಟವನ್ನು ಕಸಿದುಕೊಳ್ಳಬೇಕು ಆಗ ಅವರ ಪ್ರಾಬಲ್ಯ ಕುಗ್ಗುತ್ತದೆ ಎನ್ನುವುದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಓಡಾಡುತ್ತಿರುವ ಕೆಲವು ಸಚಿವರ ಆಲೋಚನೆಯಾಗಿದೆ.

ಸದ್ಯ ಕಾಂಗ್ರೆಸ್‌ನಲ್ಲಿ ಪ್ರಬಲ ಎರಡು ಹುದ್ದೆಗಳಿಗೆ ಹೋರಾಟ ಶುರುವಾಗಿದ್ದರೆ, ಅತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಿತ್ತಾಟ ಆರಂಭವಾಗಿ ಬಹಳ ಸಮಯವೇ ಆಗಿದೆ. ಒಂದೆಡೆ ಅಧಿಕಾರದಲ್ಲಿದ್ದವರು ಅದನ್ನು ಉಳಿಸಿಕೊಳ್ಳುವತ್ತ ನಿರತರಾಗಿದ್ದರೆ, ಆ ಸ್ಥಾನಗಳಿಗೆ ಟವಲ್ ಹಾಕಿ ಹೋರಾಟಕ್ಕೆ ಇಳಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಿಜ ಹೇಳಬೇಕೆಂದರೆ ರಾಜಕೀಯ ನಾಯಕರು ದಿನ ಬೆಳಗಾದರೆ ವಿರೋಧ ಪಕ್ಷದ ನಾಯಕರ ಕಡೆಗೆ ಬೆರಳು ತೋರಿಸಿ ಆರೋಪ ಮಾಡುತ್ತಿರುತ್ತಾರೆ. ಆದರೆ ವಿರೋಧಿಗಳು ಅಲ್ಲಿಲ್ಲ ಮಗ್ಗುಲಲ್ಲೇ ಇದ್ದಾರೆ ಎನ್ನುವುದು ಈಗಿನ ರಾಜಕೀಯ ಬೆಳವಣಿಗೆಯಿಂದ ಗೊತ್ತಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+