ದ್ವೇಷದ ವಿಡಿಯೋ ಟ್ವೀಟ್: ಜೆಪಿ ನಡ್ಡಾಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು, ಜೂನ್ 22: ದ್ವೇಷ ಉತ್ತೇಜಿಸುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡದ್ದ ಆರೋಪ ಪ್ರಕರಣದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಹಾಗೂ ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್‌ ಮಾಳವಿಯಾಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ಆದರೆ, ಪ್ರಕರಣದ ತನಿಖೆ ಮುಂದುವರೆಸಲು ಪೊಲೀಸರಿಗೆ ಅನುಮತಿ ನೀಡಿರುವ ಹೈಕೋರ್ಟ್, ಅರ್ಜಿದಾರರನ್ನು ತನಿಖೆ/ ವಿಚಾರಣೆಗೆ ಕರೆಸಬಾರದು ಹಾಗೂ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ನಿರ್ದೇಶನ ನೀಡಿದೆ.

Posting Of Hate Video HC Given Relief To JP Nadda And Amit Malaviya

ಇದೇ ವಿಚಾರದ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗಳಲ್ಲೂ ಪ್ರಕರಣ ದಾಖಲಾಗಿದ್ದವು. ಅವುಗಳಲ್ಲಿಈಗಾಗಲೇ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಕಲಬುರಗಿ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ವಿಚಾರಣೆಗೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಈ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಪ್ರಕರಣದ ಮೂಲ ದೂರುದಾರರಾದ ಕಲಬುರಗಿಯ ಪ್ರವೀಣ್‌ ಕುಮಾರ್‌ ಪಾಟೀಲ್‌ಗೆ ನೋಟಿಸ್‌ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿಅರ್ಜಿದಾರರ ಪಾತ್ರವೇನೂ ಇಲ್ಲ. ಒಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮೊತ್ತೊಬ್ಬರು ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಎನ್ನುವ ಕಾರಣಕ್ಕೆ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಪಕ್ಷದ ಪ್ರತಿಯೊಂದು ರಾಜ್ಯ ಘಟಕಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ರಾಷ್ಟ್ರೀಯ ನಾಯಕರ ಪಾತ್ರವಿರುವುದಿಲ್ಲ. ಅಲ್ಲದೆ, ರಾಜ್ಯ ಘಟಕಗಳ ಪೋಸ್ಟ್‌ಗಳಿಗೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಹೊಣೆ ಮಾಡುವುದು ಸರಿಯಲ್ಲ ಮತ್ತು ಅವರು ವಾಸ್ತವವಾಗಿ ಪ್ರತಿ ರಾಜ್ಯಗಳ ಘಟಕದ ಪೋಸ್ಟ್‌ ಮೇಲೆ ನಿಗಾ ವಹಿಸಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಎಸ್‌ಪಿಪಿ ವಾದ ಮಂಡಿಸಿ, "ಪೋಸ್ಟ್‌ ಮಾಡಿದ್ದ ವಿಡಿಯೋ ತುಣುಕು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ನ್ಯಾಯಾಲಯ ಯಾವುದೇ ಕಾರಣಕ್ಕೂ ತನಿಖೆಗೆ ತಡೆ ನೀಡಬಾರದು. ಆದರೆ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ" ಎಂದರು.

ಅದನ್ನು ದಾಖಲಿಸಿಕೊಂಡ ನ್ಯಾಯಾಲಯ, ತನಿಖೆ ಮುಂದುವರಿಸಲು ಪೊಲೀಸರಿಗೆ ಅನುಮತಿ ನೀಡಿ, ಅರ್ಜಿದಾರರಿಗೆ ತನಿಖಾಧಿಕಾರಿ ಮುಂದೆ ಖುದ್ದು ಹಾಜರಿಗೆ ವಿನಾಯಿತಿ ನೀಡಿತು. ಆದರೆ ಎಫ್‌ಐಆರ್‌ ರದ್ದು ಕೋರಿ ಜೆ. ಪಿ. ನಡ್ಡಾ ಮತ್ತು ಅಮಿತ್‌ ಮಾಳವಿಯಾ ಸಲ್ಲಿಸಿದ್ದ ಮನವಿಗೆ ಯಾವುದೇ ಆದೇಶ ಹೊರಡಿಸಿಲ್ಲ.

ಏನಿದು ಪ್ರಕರಣ?: ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿ ಪಡೆದು ಅದನ್ನು ಮುಸ್ಲಿಮರಿಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿಡಿಯೋವನ್ನು ಆ ಪಕ್ಷದ ಮುಖಂಡರೊಬ್ಬರು ವೈರಲ್‌ ಮಾಡಿದ್ದರು. ಅದನ್ನು ಆಧರಿಸಿ ಬಿಜೆಪಿ ಕರ್ನಾಟಕ ಒಂದು ಕೋಮಿನ ಬಗ್ಗೆ ದ್ವೇಷ ಭಾವನೆ ಬಿತ್ತುವಂತಹ ಸಂಭಾಷಣೆಯುಳ್ಳ ಒಂದು ಅನಿಮೇಟೆಡ್‌ ವಿಡಿಯೋ ಸಿದ್ಧಪಡಿಸಿತ್ತು.

ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿತ್ತು. ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಆ ವಿಡಿಯೋ ಧರ್ಮ-ಧರ್ಮಗಳ ನಡುವೆ ವೈಷಮ್ಯದ ಭಾವನೆ ಮೂಡಿಸುವಂತಿದೆ ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿಯ ಪ್ರವೀಣ್‌ ಕುಮಾರ್‌ ಪಾಟೀಲ್‌ ಅಲ್ಲಿನ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ವಿಡಿಯೋ ಧರ್ಮಗಳ ನಡುವೆ ದ್ವೇಷ ಮೂಡಿಸುವಂತಿದೆ. ಹಾಗಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟೀಯ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 505(2) ಮತ್ತು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125ರಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದರು.

ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದರು. ಪ್ರಕರಣ ಕುರಿತು ತಮ್ಮ ವಿರುದ್ಧ ಎಫ್‌ಐಆರ್‌ ರದ್ದು ಕೋರಿ ಜೆ. ಪಿ. ನಡ್ಡಾ ಮತ್ತು ಅಮಿತ್‌ ಮಾಳವಿಯಾ ಹೈಕೋರ್ಟ್‌ ಮೊರೆ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+