ಕೈ ಪಾಳಯದಲ್ಲಿ ಅಸಮಾಧಾನದ ಕಿಚ್ಚು: ಶೀಘ್ರದಲ್ಲೇ 30 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ!?
ಬೆಂಗಳೂರು, ಆಗಸ್ಟ್ 16: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಂದ ಸರ್ಕಾರ ರಚಿಸಿರು ಸಿದ್ದರಾಮಯ್ಯ ಸರ್ಕಾರಕ್ಕೆ ಸ್ವಪಕ್ಷದ ನಾಯಕರಿಂದಲೇ ಅಸಮಾಧಾನಗಳು ಹೆಚ್ಚಾಗಿದ್ದು, ಶಾಸಕರನ್ನು ಸಮಾಧಾನಪಡಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಹೌದು, ಸಚಿವ ಸಂಪುರ ರಚನೆ ಸಂದರ್ಭದಲ್ಲಿ ಹಲವು ಜನ ಶಾಸಕರು ಸಚಿವ ಸ್ಥಾನಕ್ಕಾಗಿ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದು, ಕೆಲ ನಾಯಕರು ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅಸಮಾಧಾನ ಹೊರಹಾಕಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ಶಾಸಕರು ಮತ್ತು ಕಾರ್ಯಕರ್ತರ ಬೇಡಿಕೆಯಂತೆ ರಾಜ್ಯದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಕೈ ಪಡೆ ಮುಂದಾಗಿದ್ದು, ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಈಗಾಗಲೇ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಶೀಘ್ರದಲ್ಲಿ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಕೆಲ ನಾಯಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದ್ದು, ರಾಜ್ಯದಲ್ಲಿನ 80ಕ್ಕೂ ಹೆಚ್ಚಿನ ನಿಗಮ-ಮಂಡಳಿಗಳ ಪೈಕಿ 30 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ 15 ದಿನಗಳ ಒಳಗೆ ನೇಮಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನೂ 30 ಜನರ ಪೈಕಿ 22ರಿಂದ 25 ಮಂದಿ ವಿಧಾನಸಭೆ ಹಾಗೂ 5ರಿಂದ 7 ಮಂದಿ ವಿಧಾನಪರಿಷತ್ ಸದಸ್ಯರಾಗಿರಲಿದ್ದು, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.
ಇನ್ನೂ 15 ದಿನದಲ್ಲಿ 30 ಜನ ಶಾಸಕರ ಆಯ್ಕೆ ನಂತರ ಉಳಿದ ನಿಗಮ-ಮಂಡಳಿಗಳಿಗೆ ಕಾಂಗ್ರೆಸ್‌ನ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆಯೇ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಅಸಮಾಧಾನಗಳು ಹೆಚ್ಚಾಗಿದ್ದು, ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ಆಯ್ಕೆಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications