ಬೆಲೆ ಏರಿಕೆ ದುನಿಯಾದಲ್ಲಿ ಜೋರಾದ ರಾಜಕೀಯ; ಯಾರಿಗೆ ಲಾಭ?
ಬೆಂಗಳೂರು, ಏಪ್ರಿಲ್, 6: ರಾಜ್ಯದಲ್ಲೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ವಿವಿಧ ತೆರಿಗೆಗಳನ್ನು ಹೆಚ್ಚಳ ಮಾಡಲಾಗಿದೆ. ಆದ್ದರಿಂದ ದುಬಾರಿ ದುನಿಯಾದ ಹಣೆಪಟ್ಟಿಯನ್ನು ಕಾಂಗ್ರೆಸ್ ಆಡಳಿತದ ಸರ್ಕಾರ ಕಟ್ಟಿಕೊಳ್ಳಬೇಕಿದೆ. ಜನ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಆದರೆ ಸರ್ಕಾರಕ್ಕೆ ಬೆಲೆ ಏರಿಕೆ ಅನಿವಾರ್ಯವಾಗಿದೆ. ಹೀಗಾಗಿ ಏನೇ ಹೋರಾಟ ಮಾಡಿದರೂ ಬೆಲೆ ಇಳಿಕೆಯಂತೂ ಆಗುವುದಿಲ್ಲ ಎಂಬುದು ಜನಸಾಮಾನ್ಯರಿಗೂ ಗೊತ್ತಿದೆ.
ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ವಿರುದ್ಧ ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಹೋರಾಟ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದರೆ ಬೆಲೆ ಇಳಿಕೆಯ ವಾಗ್ದಾನ ಮಾಡಿದ್ದರು. ಆದರೆ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಬೆಲೆ ಏರಿಕೆ ಇಳಿಯಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಜನರು ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಆದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದನ್ನು ಜನರಿಗೆ ತಲುಪಿಸುವುದು ಮತ್ತು ಅದಕ್ಕಾಗಿ ಅನುದಾನ ಹೊಂದಿಕೆ ಮಾಡುವುದರಲ್ಲಿಯೇ ಸರ್ಕಾರ ಹೈರಾಣವಾಗಿದೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅದರ ಲಾಭ ಜನಕ್ಕೆ ಆಗುತ್ತಿದ್ದರೂ ಆಗಾಗ್ಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಪಂಚ ಗ್ಯಾರಂಟಿ ಯೋಜನೆಯಿಂದಲೇ ಆಗುತ್ತಿದೆ ಎಂಬ ಆರೋಪವನ್ನು ಸರ್ಕಾರ ಎದುರಿಸಬೇಕಾಗಿದೆ.
ಜನ ಕೂಡ ಬೆಲೆ ಏರಿಕೆ ಆದಾಗಲೆಲ್ಲ ಸರ್ಕಾರಕ್ಕೆ ಹಿಡಿಶಾಪ ಹಾಕುವುದು ಮಾಮೂಲಿಯಾಗಿದೆ. ಸದ್ಯ ಯೋಜನೆ ಕುರಿತಂತೆ ಜನರಲ್ಲಿಯೇ ದ್ವಂದ್ವ ಶುರುವಾಗಿದೆ. ಅವೈಜ್ಞಾನಿಕವಾಗಿ ಯೋಜನೆಗಳನ್ನು ಘೋಷಣೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದ್ದು, ಅದನ್ನು ಶ್ರೀಸಾಮಾನ್ಯರಿಂದ ತೆರಿಗೆ, ಬೆಲೆ ಏರಿಕೆ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಈ ಹಿಂದೆ ಭಾಗ್ಯಗಳು ಕೈಹಿಡಿಯಲಿಲ್ಲ: ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ವೇಳೆ ಭಾಗ್ಯಗಳ ಮೂಲಕ ಹಲವರಾರು ಯೋಜನೆಗಳನ್ನು ಜಾರಿ ಮಾಡಿದ್ದರು. ಆದರೆ, 2018ರ ಚುನಾವಣೆ ವೇಳೆಗೆ ಯಾವ ಭಾಗ್ಯಗಳು ಕೈಹಿಡಿಯಲಿಲ್ಲ. ಇದೀಗ ಗ್ಯಾರಂಟಿ ಯೋಜನೆಗಳನ್ನು ಮುಂದಿನ ಮೂರು ವರ್ಷಗಳ ಕಾಲ ಸರ್ಕಾರ ಮುಂದುವರೆಸಲೇ ಬೇಕಾಗಿದೆ. ಇದೀಗ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಲು ಸರ್ಕಾರ ಎಷ್ಟೊಂದು ಹೆಣಗಾಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಹಾಗಾದರೆ ಮುಂದಿನ ದಿನಗಳು ಹೇಗಿರಬಹುದು?
ರಾಜ್ಯದಲ್ಲಿ ದಿನಬೆಳಗಾದರೆ ಬೆಲೆ ಏರಿಕೆಯ ಬಗ್ಗೆಯೇ ಸುದ್ದಿ ಕೇಳಿಬರುತ್ತಿವೆ. ಇದರಿಂದ ಬಡಜನತೆಯ ಬದುಕು ಹೇಗೆ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗಷ್ಟೇ ತಲುಪಿದ್ದರೆ ಬಹುಶಃ ಸರ್ಕಾರಕ್ಕೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲವೇನೋ? ಆದರೆ ಆ ರೀತಿಯಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳು ಎಲ್ಲಿ ದಾರಿ ತಪ್ಪಿವೆ ಎಂಬುದನ್ನು ಸರಿಪಡಿಸಿಕೊಂಡು ಮುನ್ನಡೆದರೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದೇನೋ?
ಇಲ್ಲಿ ನಷ್ಟ ಮಾತ್ರ ಶ್ರೀಸಾಮಾನ್ಯನಿಗೆ: ಬೆಲೆ ಏರಿಕೆ ವಿರುದ್ಧ ಈಗಾಗಲೇ ಪ್ರತಿಪಕ್ಷ ಬಿಜೆಪಿ ಹೋರಾಟ ಮಾಡುತ್ತಿದೆ. ಸದ್ಯದಲ್ಲಿಯೇ ಲಾರಿ ಮಾಲೀಕರು ಮುಷ್ಕರ ನಡೆಸಲಿದ್ದಾರೆ. ಹೀಗೆ ಸಾಲು ಸಾಲು ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕೇಂದ್ರವೇ ಕಾರಣ ಎನ್ನುತ್ತಿದೆ. ಬೆಲೆ ಏರಿಕೆ ವಿಚಾರದಲ್ಲಿ ರಾಜಕೀಯ ಜೋರಾಗಿಯೇ ನಡೆಯುತ್ತಿದೆ. ಇಲ್ಲಿ ರಾಜಕೀಯ ಪಕ್ಷಗಳಿಗೆ ಜನರ ಹಿತಕ್ಕಿಂತ ಹೆಚ್ಚಾಗಿ ಅದನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದಷ್ಟೆ ಮುಖ್ಯವಾಗಿದೆ. ಬಹುಶಃ ಬೆಲೆ ಏರಿಕೆ ವಿಚಾರ ರಾಜಕಾರಣಿಗಳಿಗೆ ಲಾಭವೇ ಆಗಿದೆ. ಮುಂದೆಯೂ ಲಾಭವೇ ಆಗಬಹುದು ಆದರೆ ನಷ್ಟ ಮಾತ್ರ ಶ್ರೀಸಾಮಾನ್ಯನಿಗೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ.












Click it and Unblock the Notifications