ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕ್ರಾಂತಿ: ಅಶೋಕ್ ಸಿಡಿಸಿದ ಹೊಸ ಬಾಂಬ್ ಏನು?
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಇದೇ ವರ್ಷ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಮಾತು ಆರಂಭದಿಂದಲೂ ಕೇಳಿಬರುತ್ತಿದೆ. ಇನ್ನು ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆ ಎಂದು ರಾಜಕೀಯ ನಾಯಕರೇ ಭವಿಷ್ಯ ನುಡಿಯುತ್ತಿದ್ದಾರೆ. ವಿರೋಧ ಪಕ್ಷದ ಬಿಜೆಪಿ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದು, ಆಗಸ್ಟ್-ಸೆಪ್ಟೆಂಬರ್ ಕ್ರಾಂತಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ರಾಷ್ಟ್ರೀಯ ಸಂಪತ್ತಿನಲ್ಲಿ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದರಲ್ಲ? ನಿಮ್ಮ ಕಾಂಗ್ರೆಸ್ ಪಕ್ಷದ ಪ್ರಕಾರ ಜಾತ್ಯತೀತತೆ ಅಂದರೆ ಅದೇನಾ? ಎಂದು ಟೀಕಿಸಿದ್ದಾರೆ. ಬಡತನ ಎಂದರೆ ಆಹಾರ, ಹಣ ಅಥವಾ ವಸ್ತುವಿನ ಕೊರತೆ ಅಲ್ಲ, ಅದು ಒಂದು ಮನಸ್ಥಿತಿ" ಎಂದು ನಿಮ್ಮ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರು ಬಡತನವನ್ನ ವ್ಯಾಖ್ಯಾನ ಮಾಡಿದ್ದರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಪ್ರಕಾರ ಸಮಾಜವಾದ ಅಂದರೆ ಇದೇನಾ? ಎಂದು ಗುಡುಗಿದ್ದಾರೆ.

ಆರ್‌ಎಸ್ಎಸ್‌ನಂತಹ ಒಂದು ಅಪ್ಪಟ ರಾಷ್ಟ್ರೀಯವಾದಿ, ನಿಸ್ವಾರ್ಥ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆಯಾಗಲಿ, ವಿಶ್ವಾಸಾರ್ಹತೆಯಾಗಲಿ ನಿಮಗೆ ಇಲ್ಲ. ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಬಂದೀಖಾನೆ ಮಾಡಿದ ಕಾಂಗ್ರೆಸ್ ಪಕ್ಷದಿಂದ ಆರ್‌ಎಸ್ಎಸ್ ಅಥವಾ ಬಿಜೆಪಿ ಸಂವಿಧಾನದ ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್‌ನ ನಿಂದಿಸಿದರೆ ಕುರ್ಚಿ ಉಳಿಯಲ್ಲ
ಆರ್‌ಎಸ್ಎಸ್ ಅನ್ನು ಬೈದರೆ, ನಿಂದಿಸಿದರೆ ಹಾಗೂ ಟೀಕೆ ಮಾಡಿದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಿ, ಇನ್ನೊಂದಷ್ಟು ದಿನ ಕುರ್ಚಿಗೆ ಅಂಟಿಕೊಂಡಿರಬಹುದು ಎನ್ನುವ ಭ್ರಮೆಯಿಂದ ಈ ಕೂಡಲೇ ಹೊರಗೆ ಬನ್ನಿ. ಆಗಸ್ಟ್-ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಈಗಾಗಲೇ ನಿಮ್ಮ ಪಕ್ಷದ ಶಾಸಕರೇ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಏನು ಹೇಳಿದ್ರು?
ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕಿತ್ತುಹಾಕಬೇಕೆಂದು ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಿರುವ ಸಂಗತಿ. ಆಡಳಿತಾರೂಢ ಬಿಜೆಪಿಯ ಹೈಕಮಾಂಡ್‌ನಿಂದಲೇ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಡಬೇಕು ಎಂದು 140 ಕೋಟಿ ಜನರ ಪರವಾಗಿ ನಾನು ಪ್ರಧಾನಿ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದರು.
ನಮ್ಮ ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್ ಮತ್ತು ಅದರ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನ ಭಾರತೀಯ ಜನತಾ ಪಕ್ಷ ಇಲ್ಲಿವರೆಗೆ ತಿರಸ್ಕರಿಸಿಲ್ಲ. ಇದರ ಬದಲು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಒಂದೆಡೆ ಆರ್‌ಎಸ್‌ಎಸ್ ನಾಯಕರು ಮತ್ತು ಇನ್ನೊಂದೆಡೆ ಬಿಜೆಪಿಯ ಕೆಳಹಂತದ ನಾಯಕರು ಸಂವಿಧಾನ ಬದಲಾವಣೆಯ ಕೂಗು ಹಾಕುತ್ತಾ ಟೆಸ್ಟ್ ಡೋಸ್ ಕೊಡುತ್ತಾ ಜನರ ನಾಡಿ ಮಿಡಿತ ಪರೀಕ್ಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಬಿಜೆಪಿಯ ಈ ಕಳ್ಳಾಟವನ್ನ ದೇಶದ ಪ್ರಜ್ಞಾವಂತ ಜನ ಅರ್ಥಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಅಶೋಕ್ ತಿರುಗೇಟು ನೀಡಿದ್ದಾರೆ.












Click it and Unblock the Notifications