ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಸಚಿವ ಮಧು ಬಂಗಾರಪ್ಪ - ವಿಜಯೇಂದ್ರಗೆ ಪರೋಕ್ಷ ಟಾಂಗ್ ?

ಶಿಕಾರಿಪುರದಿಂದ ರಾಜಕೀಯ 'ಶಿಕಾರಿ' ಇಂದಿನಿಂದಲೇ ಆರಂಭವಾಗಿದೆ. ಶಿಕಾರಿಯಾಡುವ ಜವಾಬ್ದಾರಿಯನ್ನು ಇಲ್ಲಿನ ಜನತೆ ತೆಗೆದುಕೊಳ್ಳಲಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷದಿಂದ ಇಲ್ಲಿ ಯಾರು ಜನಪ್ರತಿನಿಧಿಯಾಗುತ್ತಾರೋ ಅವರು ಕೇವಲ ನಾಯಕರಾಗಿರದೆ, ಜನರ ಸೇವಕರಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು ನಾಲ್ಕುವರ್ಷಗಳಾದ ನೆನಪಿನಲ್ಲಿ ಕೆಪಿಸಿಸಿ ಶಿಕಾರಿಪುರದಲ್ಲಿ ಆಯೋಜಿಸಿದ್ದʻಭಾರತ ಜೋಡೋ ಯಾತ್ರೆ- 2.0ʼ ರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವೇ ಬಂದೂಕಿನಂತೆ ಕೆಲಸ ಮಾಡಿದರೆ, ಜನರು ಗುಂಡಿನಂತೆ ಮತ ದಾಳಿ ನಡೆಸಿ, ಶಿಕಾರಿಪುರದಲ್ಲಿ ಬದಲಾವಣೆಯನ್ನು ತರಲಿದ್ದಾರೆ ಎಂದು ಹೇಳಿದರು.

Political Hunt Begins Shikaripura Madhu Bangarappa Says People Will Bring Change Through Votes

ಕೇವಲ ಐದು ದಿನಗಳಲ್ಲಿ ಭಾರತ್ ಜೋಡೋ 2.0 ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು, ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸಂಘಟನಾ ಶಕ್ತಿ ಹಾಗೂ ಜನರ ಬೆಂಬಲವನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಇಂದು ನಾವೆಲ್ಲರೂ ಎತ್ತಿಹಿಡಿದಿದ್ದೇವೆ ಎಂದರು.

ದೇಶವನ್ನು ಒಗ್ಗೂಡಿಸಿ, ಜನರನ್ನು ಒಂದುಗೂಡಿಸಿಕೊಂಡು ಸಾಗಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು 2022ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಿದರು. ಆ ಯಾತ್ರೆ ಕರ್ನಾಟಕಕ್ಕೆ ಆಗಮಿಸಿ ನಾಲ್ಕು ವರ್ಷಗಳು ಕಳೆದಿವೆ. ದೇಶಕ್ಕಾಗಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರೂ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆಯುವ ಉದ್ದೇಶದಿಂದ ಐತಿಹಾಸಿಕ ಪಾದಯಾತ್ರೆ ನಡೆಸಿದರು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಒಡೆದು ಆಳುವ ರಾಜಕಾರಣಕ್ಕೆ ಉತ್ತರ

ಶಿಕಾರಿಪುರದಲ್ಲಿ ಕೆಲವರು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಪಕ್ಷ ಒಂದಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ಭಾರತ್ ಜೋಡೋ 2.0 ಪಾದಯಾತ್ರೆ ನೀಡಿದೆ. ಇದು ಕೇವಲ ಪಾದಯಾತ್ರೆಯಲ್ಲ; ಇದರ ಸಂದೇಶ ಪ್ರತಿಯೊಂದು ಮನೆಗೂ ತಲುಪಬೇಕು ಎಂದರು. ಶಿಕಾರಿಪುರದ ಜನರಿಗೆ ಭೂಮಿ ಹಕ್ಕು ನೀಡಿದವರು ಯಾರು ಎಂಬುದನ್ನು ಜನರು ನೆನಪಿಸಿಕೊಳ್ಳಬೇಕು. ದೇವರಾಜ ಅರಸು ಅವರು ಭೂಮಿ ಹಕ್ಕು ನೀಡಿದರು. ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಉಚಿತ ಪಂಪ್‌ಸೆಟ್ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. 1990ರಲ್ಲಿ ದೇಶದ ಬೇರೆಡೆ ಉಚಿತ ಪಂಪ್‌ಸೆಟ್ ನೀಡದ ಸಂದರ್ಭದಲ್ಲಿ ಕರ್ನಾಟಕದ ರೈತರಿಗೆ ಈ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.

ಶಿಕಾರಿಪುರದ ಜನರಿಗೆ ಸಂಪೂರ್ಣವಾಗಿ ಭೂಮಿ ಹಕ್ಕು ದೊರೆತಿಲ್ಲ. ಈ ವಿಚಾರದಲ್ಲಿ ಜನರಿಗೆ ಅನ್ಯಾಯವಾಗಿದೆ. ಭೂಮಿ ಹಕ್ಕಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

'ಸೊರಬಕ್ಕೆ ಬಂದು ತೋರಿಸುತ್ತೇವೆ ಎಂದು ನೀವು ಹೇಳಿದ್ರೆ, ನಾವು ಶಿಕಾರಿಪುರಕ್ಕೆ ಬಂದು ತೋರಿಸುತ್ತೇವೆ'

ಪಕ್ಷದ ಸಂಘಟನೆಯನ್ನು ಒಡೆಯಬೇಡಿ. ಯಾರೋ ಸೊರಬಕ್ಕೆ ಬಂದು ತೋರಿಸುತ್ತೇವೆ ಎಂದಿದ್ದಾರೆ. ನಾವು ಕೂಡ ಶಿಕಾರಿಪುರಕ್ಕೆ ಬಂದು ತೋರಿಸುತ್ತೇವೆ. ಆದರೆ ಬೇರೆಯವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ನಮ್ಮ ಉದ್ದೇಶವಲ್ಲ. ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿದ್ದರು. ಅವರ ತಂದೆ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳನ್ನು ಜನರು ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಪ್ರತಿನಿಧಿಗಳ ಬಗ್ಗೆ ತೀರ್ಮಾನಿಸುವ ಸಮಯ ಬಂದಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೆರವು

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ತಮ್ಮ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೇ ಕೇಳಿ ನೋಡಲಿ. ಗ್ಯಾರಂಟಿ ಯೋಜನೆಗಳು ಅವರ ಬದುಕಿಗೆ ಎಷ್ಟು ಸಹಕಾರಿಯಾಗಿವೆ ಎಂಬುದು ತಿಳಿಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಮಧು ಬಂಗಾರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+