ಪೊಲೀಸ್ ಬಳಕೆಯ ತಂತ್ರಜ್ಞಾನ ಇನ್ನಷ್ಟು ಸುಧಾರಿಸಬೇಕಿದೆ: ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 11: ಪ್ರಸಕ್ತ ದಿನಗಳಲ್ಲಿ ತಂತ್ರಜ್ಞಾನದ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಅವುಗಳ ಕಡಿವಾಣಕ್ಕಾಗಿ ಗೃಹ ಇಲಾಖೆಯು ಪೊಲೀಸರು ಬಳಸುವ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜೊತೆಗೆ ಎನ್ ಡಿಎ ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ ನೀಡಬೇಕಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಭಾನುವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ 'ರಾಷ್ಟ್ರಪತಿಗಳ ಪೊಲೀಸ್ ಪದಕ- 2022' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತಳಹಂತದ ಪೊಲೀಸರು ಹಾಗೂ ಐಪಿಎಸ್ ಗಳಿಗೆ ಉತ್ತಮವಾಗಿ ತರಬೇತಿ ನೀಡಲಾಗಿರುತ್ತದೆ. ಆದರೆ ಮಧ್ಯಮ ಹಂತದ ಪೊಲೀಸರಿಗೆ ಇನ್ನೂ ಪರಿಣಾಮಕಾರಿಯಾಗಿ ತರಬೇತಿ ನೀಡಬೇಕಿದೆ. ಅದಕ್ಕಾಗಿ ಪ್ರತ್ಯೇಕ ತರಬೇತಿ ಸಂಸ್ಥೆಯಡಿ ಅವರಿಗೆ ಸೂಕ್ತ ತರಬೇತಿ ನೀಡಿದರೆ ಮಧ್ಯಮ ಹಂತದ ಪೊಲೀಸರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಹಾಯವಾಗುತ್ತದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಇಂದು ತಂತ್ರಜ್ಞಾನದ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಅದೇ ತಂತ್ರಜ್ಞಾನ ದಲ್ಲಿ ಆರೋಪಿಗಳು ಸಾಕ್ಷಿಗಳನ್ನು ಬಿಟ್ಟು ಹೋಗಿರುತ್ತಾರೆ. ಇಂತಹ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಯುಪೊಲೀಸರು ಬಳಸುವ ತಂತ್ರಜ್ಞಾನ ವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ರಮ ನಡೆಸಬೇಕು. ಅದಕ್ಕಾಗಿ ಅಗತ್ಯ ಪರಿಣಿತರನ್ನು ಬಳಸಿಕೊಳ್ಳಬೇಕು. ಈ ಸಂಬಂಧ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಫಾರೆನ್ಸಿಕ್ ಲ್ಯಾಬ್ ಆಧುನಿಕರಣ
ಕರ್ನಾಟಕ ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಬಹಳ ಆಧುನಿಕರಣ ಮಾಡುತ್ತಿದ್ದೇವೆ. ಫಾರೆನ್ಸಿಕ್ ಲ್ಯಾಬ್ ಆಧುನಿಕರಣ ಮಾಡಲಾಗಿದೆ. ಅಪರಾಧ ಶೋಧನೆಯಲ್ಲಿ ಆಧುನಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಫಾರೆನ್ಸಿಕ್ ಲ್ಯಾಬ್) ಅವಶ್ಯಕತೆಯಿದ್ದು, ಹುಬ್ಬಳ್ಳಿ ಮತ್ತು ಬಳ್ಳಾರಿ ಯಲ್ಲಿ ಈ ಪ್ರಯೋಗಾಲಯಗಳನ್ನು ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಟ ಎರಡು ಫಾರೆನ್ಸಿಕ್ ಲ್ಯಾಬ್ ಸ್ಥಾಪಿಸಬೇಕು. ಶೀಘ್ರ ಅಪರಾಧ ಪತ್ತೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಲಾಖೆಯಲ್ಲೇ ಅಕ್ರಮ ನಡೆದರೆ ತಡೆಯಲು ಸಾಧ್ಯವೇ?
ಪೊಲೀಸ್ ನೇಮಕಾತಿಯಲ್ಲಿ ಆಗುತ್ತಿರುವ ಅಪರಾಧ ತಡೆಯಲು ಇನ್ನಷ್ಟು ಕನಿಷ್ಟ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ. ಪೊಲಿಸ್ ನೇಮಕಾತಿಯಲ್ಲಿಯೇ ಅಕ್ರಮ ನಡೆದರೆ ಬೇರೆ ಅಪರಾಧ ತಡೆಯುವುದು ಸಾಧ್ಯವಿದೆಯೇ?. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನ ಹರಿಸಬೇಕು. ಇಲಾಖೆಯಲ್ಲಿನ ಅಪರಾಧ ತೆಡೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್
ಪೊಲೀಸ್ ಸೇವೆ ವಿಶಿಷ್ಟ ಸೇವೆಯಾಗಿದ್ದು, ಅವರು ತಮ್ಮ ಬದುಕಿನಲ್ಲಿ ಬಹಳ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹತ್ತು ಹಲವಾರು ಒತ್ತಡಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಒತ್ತಡಗಳ ನಡುವೆ ಕರ್ನಾಟಕ ಪೊಲೀಸ್ ಉತ್ತಮ ಕೆಲಸ ಮಾಡುತ್ತಿದೆ. ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್ ಆಗಿದ್ದು, ಶ್ರೇಷ್ಠ ಸೇವೆಯನ್ನು ಸಲ್ಲಿಸುತ್ತಿದೆ ಎಂಬ ಹೆಮ್ಮೆ ಇದೆ. ಪೊಲೀಸರಿಗೆ ಕಾನೂನು ತಂದೆ ಇದ್ದಂತೆ, ಕರ್ತವ್ಯ ತಾಯಿ ಇದ್ದಂತೆ.

ತಂತ್ರಜ್ಞಾನದಿಂದ ಪೊಲೀಸರು ಹೊರಗುಳಿಯಬಾರದು
ಕರ್ನಾಟಕ ಪೊಲೀಸರು ಯಾವುದೇ ಹೊಸ ತಂತ್ರಜ್ಞಾನದಿಂದ ಹೊರಗುಳಿಯಬಾರು. ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸುದೀರ್ಘ ಸೇವೆಯಲ್ಲಿ ರಾಷ್ಟ್ರಪತಿಗಳನ್ನು ನಿಮ್ಮನ್ನು ಗುರುತಿಸುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ತಾವು ಉತ್ತಮ ಕೆಲಸ ಮಾಡಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸುತ್ತವೆ. ಪ್ರಶಸ್ತಿ ಪಡೆದವರೆಲ್ಲರೂ ಈ ಪದಕಗಳಿಗೆ ಅರ್ಹರಾಗಿದ್ದು, ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications