ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ, ಸಿಬ್ಬಂದಿ ವಾಪಸ್!
ಬೆಂಗಳೂರು, ಡಿಸೆಂಬರ್ 21; ಕರ್ನಾಟಕದ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಡುತ್ತಿರುವ ಸಿಬ್ಬಂದಿಗಳನ್ನು ಹಿಂಪಡೆಯುವ ಕುರಿತು ಆದೇಶಿಸಲಾಗಿದೆ.
ಸೌಮೇಂದು ಮುಖರ್ಜಿ, ಐಪಿಎಸ್. ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಪರವಾಗಿ ಡಿಜಿ & ಐಜಿಪಿಯಿಂದ ಅನುಮೋದಿಸ್ಪಟ್ಟ ಆದೇಶ ಇದಾಗಿದೆ. ಆದೇಶದಲ್ಲಿ ಪ್ರಸ್ತಾವನೆ ಮತ್ತು ವಿವರಗಳನ್ನು ನೀಡಲಾಗಿದೆ.

ಸರ್ಕಾರದ ಆದೇಶ ದಿನಾಂಕ 11/12/2023ರ ಪ್ರತಿಯನ್ನು ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕಾಗಿ ಲಗತ್ತಿಸಿ ಕಳುಹಿಸಲಾಗಿದೆ. ಸರ್ಕಾರದ ಆದೇಶ ಸ್ವೀಕರಿಸಿದ ಕುರಿತು ಪ್ರಧಾನ ಕಛೇರಿಗೆ ಸ್ವೀಕೃತಿಯನ್ನು ಹಾಗೂ ಪಾಲನಾ ವರದಿಯನ್ನು ಸಲ್ಲಿಸಲು ಕೋರಿದೆ ಎಂದು ಆದೇಶ ಹೇಳಿದೆ.
ಆದೇಶದ ವಿವರಗಳು; ಕರ್ನಾಟಕ ಸರ್ಕಾರದ ನಡವಳಿಗಳ ಅನ್ವಯ ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಹಿಂಪಡೆಯುವ ಕುರಿತು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿ 29/04/2022, ಸರ್ಕಾರದ ಅರೆ ಸರ್ಕಾರಿ ಪತ್ರ 4/05/2022. ಅಪರ ಪೊಲೀಸ್ ಮಹಾ ನಿರ್ದೇಶಕರ ಪತ್ರ 12/05/2022ರ ಪ್ರಸ್ತಾವನೆ ಮತ್ತು ಆದೇಶ ಉಲ್ಲೇಖ ಮಾಡಲಾಗಿದೆ.
ಡಾ. ಪಿ. ರವೀಂದ್ರನಾಥ್, ಪೊಲೀಸ್ ಮಹಾ ನಿರ್ದೇಶಕರು ಅವರ ದಿನಾಂಕ 19/04/2022ರ ಪತ್ರವನ್ನು ಕಳುಹಿಸಿ, ಸದರಿ ಪತ್ರದಲ್ಲಿ ಸುನಿಲ್ ಅಗರ್‌ವಾಲ್, ನಿವೃತ್ತ ಐಪಿಎಸ್ ಅಧಿಕಾರಿ ಇವರ ಮನೆಯಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಮನೆ ಆರ್ಡರ್‌ಲಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಈ ವಿಷಯವನ್ನು ಕೂಡಲೇ ಪರಿಶೀಲಿಸಿ ಸುನಿಲ್ ಅಗರ್‌ವಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ಕೂಡಲೇ ಹಿಂಪಡೆಯಬೇಕು. ಇದೇ ರೀತಿ ನಿವೃತ್ತ ಐಪಿಎಸ್/ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಹಿಂಪಡೆದು 15 ದಿನಗಳೊಳಗಾಗಿ ಅನುಸರಣಾ ವರದಿಯನ್ನು ನೀಡಲು ಮುಖ್ಯಮಂತ್ರಿಗಳು ನಿರ್ದೇಶಿಸಿರುತ್ತಾರೆ. ಆದ್ದರಿಂದ ಸೂಕ್ತ ಕ್ರಮವಹಿಸಿ ವರದಿ ನೀಡುವಂತೆ ಕೋರಿರುತ್ತಾರೆ ಎಂದು ಪ್ರಸ್ತಾವನೆ ಹೇಳಿದೆ.
ನಿವೃತ್ತ ಐಪಿಎಸ್/ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಹಿಂಪಡೆದು 1 ವಾರದೊಳಗಾಗಿ ಅನುಸರಣಾ ವರದಿಯನ್ನು ನೀಡುವಂತೆ ಡಿಜಿ ಮತ್ತು ಐಜಿಪಿ ರವರನ್ನು ಕೋರಲಾಗಿತ್ತು.
ಅಪರ ಪೊಲೀಸ್ ಮಹಾ ನಿರ್ದೇಶಕರು ದಿನಾಂಕ 22/04/2022ರಂದು ಜ್ಞಾಪನವನ್ನು ಹೊರಡಿಸಿರುತ್ತಾರೆ. ಸದರಿ ಜ್ಞಾಪನದನ್ವಯ ಘಟಕಾಧಿಕಾರಿಗಳಿಂದ ಸಲ್ಲಿಸಲಾದ ವರದಿಯಲ್ಲಿ ಈಗಾಗಲೇ ನಿವೃತ್ತ ಐಪಿಎಸ್/ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಕ.ರಾ.ಮೀ.ಪೊ. ಸಿಬ್ಬಂದಿಗಳನ್ನು ಹಿಂಪಡೆಯಲಾಗಿರುತ್ತದೆ.
ಭಾಸ್ಕರ್ ರಾವ್ ನಿವೃತ್ತ ಐಪಿಎಸ್ ಅವರು ದೂರವಾಣಿ ಮುಖಾಂತರ ಕರೆಮಾಡಿ ತಾನು ಏಪ್ರಿಲ್ ತಿಂಗಳಿನಲ್ಲಿ ಅಷ್ಟೇ ಸ್ವ-ಇಚ್ಚಾ ನಿವೃತ್ತಿಯ ಹೊಂದಿದ್ದರೂ ಸಹ ತಾಂತ್ರಿಕವಾಗಿ ಇಲಾಖೆಯಲ್ಲಿಯೇ ಮುಂದುವರೆದಿರುವುದಾಗಿ ತಿಳಿಸಿ, ಈ ಸಂಬಂಧ ಇನ್ನೂ ಕೆಲ ದಿನಗಳವರೆಗೆ ಆರ್ಡಲಿಗಳನ್ನು ಮುಂದುವರೆಸುವಂತೆ ಕೋರಿರುತ್ತಾರೆ.
ಹೆಚ್.ಸಿ. ಕಿಶೋರ್ ಚಂದ್ರ, ಐಪಿಎಸ್ (ನಿವೃತ್ತ), ಅಧ್ಯಕ್ಷರು, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ, ಬೆಂಗಳೂರು ರವರು ಹಾಗೂ ರೂಪಕ್ ಕುಮಾರ್ ದತ್ತ, ಐಪಿಎಸ್ (ನಿವೃತ್ತ), ಸದಸ್ಯರು, ಕರ್ನಾಟಕ ರಾಜ್ಯ, ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಅವರು ಕ.ರಾ.ಮೀ.ಪೊ. ಸಿಬ್ಬಂದಿಗಳನ್ನು ತಮ್ಮ ಸುರಕ್ಷಾ ಕರ್ತವ್ಯದ ನಿಮಿತ್ತ ಮುಂದುವರೆಸುವಂತೆ ಕೋರಿರುತ್ತಾರೆಂಬ ಮಾಹಿತಿಯೊಂದಿಗೆ ಉಳಿದಂತೆ ಇತರೆ ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಿಬ್ಬಂದಿಗಳನ್ನು ಹಿಂಪಡೆಯಲಾಗಿದೆ ಎಂಬ ಮಾಹಿತಿಯನ್ನು ಸಲ್ಲಿಸಿರುತ್ತಾರೆ.
ಅಪರ ಪೊಲೀಸ್ ಮಹಾ ನಿರ್ದೇಶಕರು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಎಲ್ಲಾ ನಿವೃತ್ತ ಐಪಿಎಸ್/ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಿಬ್ಬಂದಿಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಆದೇಶಿಸಿದೆ ಎಂದು ತಿಳಿಸಿದೆ.












Click it and Unblock the Notifications