ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟಕ್ಕೆ ದೂರದೃಷ್ಟಿ ಇಲ್ಲ ಹಾಗೂ ನಾಯಕ ಕೂಡ ಇಲ್ಲ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಮತದಾರರು ಹಾಗೂ ಬೆಂಗಳೂರು ವ್ಯಾಪ್ತಿ ಮತದಾರರನ್ನ ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ & ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಹಾಗೂ ಬೆಂಗಳೂರು & ಕೋಲಾರ ಕ್ಷೇತ್ರಗಳ ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ, ಪ್ರಧಾನಿ ಮೋದಿ ಅವರಿಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾತನಾಡಿದರು. ಇದೇ ವೇಳೆ ವಿರೋಧ ಪಕ್ಷಗಳಿಗೆ ಯಾವುದೇ ದೂರ ದೃಷ್ಟಿ ಇಲ್ಲ. ಹಾಗೇ ಅವರಿಗೆ ಉತ್ತಮವಾದ ನಾಯಕನೇ ಇಲ್ಲವೆಂದರು ಪ್ರಧಾನಿ ಮೋದಿ ಅವರು. ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟದ ವಿರುದ್ಧ ಇನ್ನೊಂದು ಗಂಭೀರ ಆರೋಪವನ್ನೂ ಪ್ರಧಾನಿ ಮೋದಿ ಮಾಡಿದರು.

ಹಗರಣಗಳನ್ನು ಹೊತ್ತು ತಂದಿದ್ದಾರೆ!
ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟದಲ್ಲಿ ಇರುವ ಪಕ್ಷಗಳು ಸಾಲು ಸಾಲು ಹಗರಣ & ಆರೋಪಗಳನ್ನ ಹೊತ್ತು ಬಂದಿವೆ. ಹೀಗಾಗಿ ಅವರಿಂದ ದೇಶದ ಅಭಿವೃದ್ಧಿ ಅಸಾಧ್ಯವಾಗಿದೆ. ಈಗಾಗಲೇ ಭಾರತೀಯ ಮತದಾರರು ಮೋದಿ ಅವರನ್ನು ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದು, ಎನ್‌ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವು ಪಡೆಯುವುದು ಗ್ಯಾರಂಟಿ. ವಿರೋಧ ಪಕ್ಷದ ಎಲ್ಲಾ ಪ್ರಯತ್ನಗಳು ಹುಸಿಯಾಗಲಿವೆ, ಮತದಾರರು ಬಿಜೆಪಿ ಮತ್ತು ಎನ್‌ಡಿಎ ಪರವಾಗಿ ಇದ್ದಾರೆ ಅನ್ನೋದಕ್ಕೆ ಇಲ್ಲಿ ನೆರೆದಿರುವ ಜನಸಮೂಹವೇ ಸಾಕ್ಷಿ ಎಂದರು. ಈ ಮೂಲಕ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಪಕ್ಷಗಳ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು ಪ್ರಧಾನಿ ಮೋದಿ.
ಮೊದಲ ಹಂತದಲ್ಲೇ ನಮ್ಮ ಪರ ಒಲವು!
ಹಾಗೇ ನಿನ್ನೆಯಷ್ಟೇ ಮುಕ್ತಾಯವಾದ 2024ರ ಲೋಕಸಭಾ ಚುನಾವಣೆಯ ಮೊದಲ ಹಂತ ಮತದಾನದ ಬಗ್ಗೆ ಕೂಡ ಪ್ರಧಾನಿ ಮೋದಿ ಅವರು ಮಾತನಾಡಿದರು. ಅಲ್ಲದೆ ಮೊದಲನೇ ಹಂತದ ಮತದಾನದಲ್ಲೇ ಜನರು ಎನ್‌ಡಿಎ ಗೆಲ್ಲಿಸಲು ನಿರ್ಧರಿಸಿದ್ದಾರೆ. ಇನ್ನು ಮುಂದಿನ, ಎಲ್ಲಾ ಹಂತದಲ್ಲೂ ನಮಗೆ ಇದೇ ರೀತಿಯ ಬೆಂಬಲ ಸಿಗುತ್ತದೆ ಎಂದರು ಪ್ರಧಾನಿ ಮೋದಿ ಅವರು. ಈ ಮೂಲಕ ಬಿಜೆಪಿ & ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.
ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಕಾಂಗ್ರೆಸ್ ನಾಯಕರು ಹಾಗೂ ಇಂಡಿಯಾ ಒಕ್ಕೂಟದ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎನ್‌ಡಿಎ ಗೆಲುವಿನ ಬಗ್ಗೆ ಭವಿಷ್ಯ ನುಡಿದ ಅವರು, ಈ ಬಾರಿ ವಿರೋಧ ಪಕ್ಷಗಳಿಗೆ ಮತದಾರರು ಪಾಠ ಕಲಿಸುತ್ತಾರೆ ಎಂದರು. ಒಟ್ನಲ್ಲಿ ಈ ಮೂಲಕ ಎನ್‌ಡಿಎ ಹೊಸ ಹುಮ್ಮಸ್ಸಿನಲ್ಲಿ ಮುನ್ನುಗ್ಗಲು ಸಜ್ಜಾಗಿದ್ದು ವಿರೋಧ ಪಕ್ಷಗಳಿಗೆ ಚಿಂತೆ ಶುರುವಾಗಿದೆ.












Click it and Unblock the Notifications