ಈ ವಿಚಾರಕ್ಕೆ ಹೆದರಿ ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ಸಿಎಂ ಬದಲಾವಣೆ ಆಯ್ತು: ಶಾಕಿಂಗ್ ವಿಚಾರ ತಿಳಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಆ ಭಾಷಣ ಈಗ ಇಡೀ ಕರ್ನಾಟಕ ರಾಜಕಾರಣದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಗುಜರಾತ್ನ ಸೂರತ್ನಲ್ಲಿ ನಿಂತು ಪ್ರಧಾನಿ ಮೋದಿ ಅವರು ಆಡಿದ ಆ ಒಂದೇ ಒಂದು ಮಾತು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಠಾತ್ ಮುಖ್ಯಮಂತ್ರಿ ಬದಲಾವಣೆಯ ತೆರೆಮರೆಯ ಅಸಲಿ ರಹಸ್ಯವನ್ನು ಮೋದಿ ನೇರವಾಗಿಯೇ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹಠಾತ್ತನೆ ಸಿಎಂ ಮುಖವನ್ನು ಬದಲಾಯಿಸಿದ್ದು ಯಾಕೆ ಹಾಗೂ ಇದರ ಹಿಂದೆ ಅಡಗಿದ್ದ ಜನರ ಆಕ್ರೋಶದ ಕಥೆ ಏನು ಎಂಬುದನ್ನು ದೇಶದ ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ.
ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಬರೋಬ್ಬರಿ 18,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸೂರತ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಲಿನ ಜನರಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನವಿತ್ತು. ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿ ತನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬೇಕಾಗಿ ಬಂದಿತು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ವೈಫಲ್ಯ ಹಾಗೂ ಆಂತರಿಕ ಅಸ್ಥಿರತೆಯಿಂದಾಗಿ ಸಿಎಂ ಬದಲಾವಣೆಯಾಗಿದೆ ಎಂದು ಗುಜರಾತ್ ನೆಲದಲ್ಲಿ ಪ್ರಧಾನಿ ಮೋದಿ ನೀಡಿರುವ ಈ ಹೇಳಿಕೆ ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ದೇಶದ ಇಂದಿನ ಮುನ್ನಡೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಭಾರತವೀಗ ನಕಾರಾತ್ಮಕತೆಯನ್ನು ದಾಟಿ ಬಹುದೂರ ಬಂದಿದೆ ಎಂದು ಹೆಮ್ಮೆಯಿಂದ ನುಡಿದರು. ಇಂದಿನ ಭಾರತವು ನಕಾರಾತ್ಮಕತೆಯ ಆಲೋಚನೆಗಳಿಂದ ಸಾಕರಷ್ಟು ಮುಂದೆ ಸಾಗಿದೆ. ಇದು ಕೇವಲ ಆಶಾವಾದದಿಂದ ಮಾತ್ರವಲ್ಲದೆ, ಅಸಾಧಾರಣ ಆಕಾಂಕ್ಷೆಗಳಿಂದ ಮುನ್ನಡೆಯುತ್ತಿರುವ ದೇಶವಾಗಿದೆ. ಇಂದು ದೇಶದ ಪ್ರತಿಯೊಬ್ಬ ನಾಗರಿಕನೂ ದೊಡ್ಡ ಕನಸುಗಳನ್ನು ಕಾಣುತ್ತಿದ್ದಾನೆ ಮತ್ತು ಆ ಕನಸುಗಳನ್ನು ನನಸು ಮಾಡುವ ದೃಢ ಸಂಕಲ್ಪವನ್ನು ಹೊಂದಿದ್ದಾನೆ. ದೇಶದ ಜನತೆ ತಮಗಿರುವ ಸಂಕಲ್ಪವನ್ನು ವಾಸ್ತವಕ್ಕೆ ತರಲು ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಸಂಕಲ್ಪವೇ ಭಾರತದ ನಿಜವಾದ ಶಕ್ತಿ
ದೇಶದ ಸಾಮರ್ಥ್ಯದ ಕುರಿತು ಮಾತನಾಡಿದ ಅವರು, "ಯಾವಾಗ ಒಂದು ದೇಶದ ಸಾಮೂಹಿಕ ಇಚ್ಛಾಶಕ್ತಿಯು ಇಷ್ಟೊಂದು ದೃಢವಾಗಿರುತ್ತದೆಯೋ, ಆಗ ಆ ದೇಶವು ಯಾವುದೇ ಗುರಿಯನ್ನಾದರೂ ಸುಲಭವಾಗಿ ಸಾಧಿಸಬಲ್ಲದು. ಈ ಜಂಟಿ ಇಚ್ಛಾಶಕ್ತಿಯಲ್ಲೇ ಭಾರತದ ನಿಜವಾದ ಶಕ್ತಿ ಅಡಗಿದೆ" ಎಂದು ಸಾರಿದರು. ದೇಶದಲ್ಲಿ ಇಂದು ಕೆಲವು ನಕಾರಾತ್ಮಕ ಚಿಂತನೆಯುಳ್ಳ ಜನರಿದ್ದಾರೆ. ಅವರು ಸದಾ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಸಂಕಲ್ಪವನ್ನು ಲೇವಡಿ ಮಾಡುತ್ತಿರುತ್ತಾರೆ. ಇಂತಹ ಜನರೇ ಭಾರತವನ್ನು ದೀರ್ಘಕಾಲದವರೆಗೆ ಇತರ ದೇಶಗಳ ಮೇಲೆ ಅವಲಂಬಿತವಾಗಿರುವಂತೆ ನೋಡಿಕೊಂಡಿದ್ದರು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನಿಂದ 12 ವರ್ಷಗಳ ಅರಾಜಕತೆ
ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಿಂದ ಕಾಂಗ್ರೆಸ್ ದೇಶದಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ, "ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಮತ್ತು ಅನಿಶ್ಚಿತತೆಯನ್ನು ಹರಡುವ ಮೂಲಕ ರಾಜಕೀಯ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ ದೇಶದ ಜನತೆ ಕಾಂಗ್ರೆಸ್ನ ಈ ಪ್ರಯತ್ನಗಳಿಗೆ ಪದೇ ಪದೇ ಸೂಕ್ತ ಮತ್ತು ಖಡಕ್ ಉತ್ತರವನ್ನೇ ನೀಡುತ್ತಾ ಬಂದಿದ್ದಾರೆ. ಇತರ ದೇಶಗಳ ಮೇಲೆ ಅವಲಂಬಿತವಾಗಿರುವ ಯಾವುದೇ ರಾಷ್ಟ್ರವೂ ಸಹ ತನಗೆ ಅರ್ಹವಾದ ಅಭಿವೃದ್ಧಿಯ ಶಿಖರವನ್ನು ಎಂದಿಗೂ ತಲುಪಲು ಸಾಧ್ಯವಿಲ್ಲ ಎಂಬುದನ್ನು ಈ ನಾಯಕರು ಅರಿಯುತ್ತಿಲ್ಲ" ಎಂದು ತರಾಟೆಗೆ ತೆಗೆದುಕೊಂಡರು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ದೇಶಕ್ಕೆ ಎಷ್ಟು ಮುಖ್ಯ ಎಂಬುದನ್ನು ಇಂದಿನ ಜಾಗತಿಕ ಪರಿಸ್ಥಿತಿಗಳು ಸಾಬೀತುಪಡಿಸುತ್ತಿವೆ ಎಂದರು. 2014ರ ನಂತರ ಭಾರತವು ಈ ನಿಟ್ಟಿನಲ್ಲಿ ಮಾಡಿಕೊಂಡಿರುವ ಸಾಮರ್ಥ್ಯ ವೃದ್ಧಿಯನ್ನು ಅವರು ಹೆಮ್ಮೆಯಿಂದ ಹಂಚಿಕೊಂಡರು. "ಜಾಗತಿಕ ಬಿಕ್ಕಟ್ಟಿನ ನಡುವೆಯೂ ನಾವು ಒಂದು ಕಡೆ ಜಗತ್ತಿನ ವಿವಿಧ ಭಾಗಗಳಿಂದ ದೇಶಕ್ಕೆ ತೈಲ ಮತ್ತು ಗ್ಯಾಸ್ ಪೂರೈಕೆಯಾಗುವುದನ್ನು ಅತ್ಯಂತ ಸುರಕ್ಷಿತವಾಗಿ ಖಚಿತಪಡಿಸಿಕೊಂಡಿದ್ದೇವೆ. ಮತ್ತೊಂದು ಕಡೆ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಿಂದೆಂದೂ ಕಾಣದ ಮಾದರಿಯಲ್ಲಿ ಐತಿಹಾಸಿಕ ಮಟ್ಟದ ಹೂಡಿಕೆಯನ್ನು ಹೆಚ್ಚಿಸಿದ್ದೇವೆ. ಭಾರತವು ಈಗ ಇಂಧನ ಭದ್ರತೆಯಲ್ಲಿ ಬಲಿಷ್ಠವಾಗುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.













Click it and Unblock the Notifications