PM Modi Karnataka Visit: ಕರ್ನಾಟಕದ ರಾಜ್ಯ ಬಿಜೆಪಿಯ ಪೇಟಿಎಂ?, ಲೂಟಿಯಲ್ಲಿ ನಿಮಗೂ ಪಾಲಿದೆಯೇ?:ಮೋದಿ ವಿರುದ್ಧ ಸಿದ್ದು ಕಿಡಿ
ಬೆಂಗಳೂರು, ಮಾರ್ಚ್ 12: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಲೋಕಾಯುಕ್ತ ದಾಳಿ, ರಾಜೀನಾಮೆ ಕುರಿತು ರಾಜಕೀಯ ಇತಿಹಾಸ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಮಂತ್ರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು, ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಹೀಗಿದ್ದರೂ ನೀವು ಮಾತ್ರ ಆ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿಯವರೇ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ?. ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು 'ತುಮ್ ಖಾವೋ, ಮುಜೆ ಬಿ ಖಿಲಾವೋ' (ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ ಎಂದು ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿಯ ಪೇಟಿಎಂ?
ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ರಾಜ್ಯದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್‌ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿದ್ದಕ್ಕಾಗಿ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ?.

ವಾಟಜಪೇಯಿ ಕಾಲದಲ್ಲಿ ರಾಜೀನಾಮೆ
ದಿವಂಗತ ಅಟಲಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮೆರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಿಲ್ಲವೇ? ಎಂದರು.
ಅಟಲಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (BJP) ದೇಶದಲ್ಲಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತ್ರವಲ್ಲದೇ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲಾ? ಈಗ್ಯಾಕೆ ಹೀಗೆ? ಎಂದು ಬಿಜೆಪಿ 40% ಕಮಿಷನ್, ಇತ್ತೀಚಿನ ಲೋಕಾಯುಕ್ತ ದಾಳಿ ಕುರಿತು ಅವರು ಗುಡುಗಿದರು.

ಮೋದಿ ಆಡಳಿತದಲ್ಲಿ ಈ ಬದಲಾವಣೆ ಏಕೆ?
ಸದನದಲ್ಲಿ ಬ್ಲೂಫಿಲ್ಮ್ (ನೀಲಿಚಿತ್ರ) ನೋಡಿದ್ದ ಕಾರಣಕ್ಕಾಗಿ ಕರ್ನಾಟಕ ಬೀಜೆಪಿಯ ಮೂವರು ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಹಾಗೆ ಆಗುತ್ತಿಲ್ಲ ಎಂದರು.

ಹಣ ಸಂದಾಯ: ಭ್ರಷ್ಟರು ಸುರಕ್ಷಿತ
ಈ ಹಿಂದಿನ ಸಲದ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಬಿಜೆಪಿ ಸರ್ಕಾರ 40ಪರ್ಸೆಂಟ್ ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ನೀವು (ಪ್ರಧಾನಮಂತ್ರಿ ) ಯಾಕೆ ಉತ್ತರಿಸುತ್ತಿಲ್ಲ? ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯವರೆಗೆ ಲಂಚದ ಹಣದಲ್ಲಿ ಪಾಲು ಕೇಂದ್ರದ ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ? ನರೇಂದ್ರ ಮೋದಿಯವರೆ ಉತ್ತರಿಸಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications