ಅದೇ ಖದರ್, ಅದೇ ಗತ್ತು: ಬಿಜೆಪಿ ವಿರುದ್ದ ಕೆಂಡಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮೇ 18: ಬಹುಮತ ಸಾಬೀತು ಪಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ನಂತರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ದ ಅಕ್ಷರಸ: ಹರಿಹಾಯ್ದಿದ್ದಾರೆ.
ಶುಕ್ರವಾರ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅಡಾಲ್ಫ್ ಹಿಟ್ಲರ್ ನ ಪಳಿಯುಳಿಕೆಗಳು. ಸಂವಿಧಾನದ ಬಗ್ಗೆ ಗೌರವವಿಲ್ಲದ ಅವರ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ, ಜೊತೆಗೆ ಮೂವರು ನ್ಯಾಯಾಧೀಶರಿಗೂ ನನ್ನ ಕೃತಜ್ಞತೆಗಳು. ದೇಶದ ಇತರ ರಾಜ್ಯಗಳಲ್ಲಿ ರಾಜಕೀಯ ಮಾಡಿದ ಹಾಗೇ, ಇಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಯಡಿಯೂರಪ್ಪನವರು ಒಂದು ವಾರದ ಕಾಲಾವಕಾಶ ಕೇಳಿದ್ದರು, ಆದರೆ ರಾಜ್ಯಪಾಲರು ಹದಿನೈದು ದಿನದ ಕಾಲಾವಕಾಶ ನೀಡಿದರು. ಕುದುರೆ ವ್ಯಾಪಾರ ಇನ್ನೂ ಜೋರಾಗಿ ನಡೆಯಲಿ ಎನ್ನುವ ಉದ್ದೇಶದಿಂದ ರಾಜ್ಯಪಾಲರು ಹೆಚ್ಚಿನ ಕಾಲಾವಕಾಶ ನೀಡಿದ್ದಾರಾ ಎಂದು ರಾಜ್ಯಪಾಲರ ನಡೆಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಮತ್ತು ಜೆಡಿಎಸ್ ಪಕ್ಷದ ಯಾವನೇ ಒಬ್ಬ ಶಾಸಕ ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ. ಬಿಜೆಪಿಯವರ ಕುದುರೆ ವ್ಯಾಪಾರದ ಆಮಿಷಕ್ಕೆ ಯಾರೂ ಬಗ್ಗುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಅವರ ಆಟ ಇಲ್ಲಿ ನಡೆಯುವುದಿಲ್ಲ. ನಾವು ಸರಕಾರ ರಚಿಸುವುದು ಖಂಡಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀರಾಮುಲು ಮತ್ತು ಬಳ್ಳಾರಿ ರೆಡ್ಡಿ ಕುದುರೆ ವ್ಯಾಪಾರಕ್ಕೆ ಮುಂದಾದ ಬಗ್ಗೆ ನಮ್ಮಲ್ಲಿ ಸಾಕ್ಷಿಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಮೋದಿ ಮತ್ತು ಶಾಗೆ ಬರೀ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಕಾಯಕ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.












Click it and Unblock the Notifications