Petrol Diesel Price: ಕರ್ನಾಟಕದಲ್ಲಿ ದುಬಾರಿಯಾಯ್ತು ಪೆಟ್ರೋಲ್, ಡೀಸೆಲ್; ಸರ್ಕಾರದ ಆದೇಶದಲ್ಲಿ ಏನಿದೆ?
ಬೆಂಗಳೂರು, ಜೂನ್ 15: 2024 ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರಿಗೆ ಬಿಗ್ ಶಾಕ್ ನೀಡಿದೆ. ಬಹು ದಿನಗಳ ಬಳಿಕ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಖರ್ಚು ಸರಿದೂಗಿಸಲು ಸಿದ್ದರಾಮಯ್ಯ ಸರ್ಕಾರವು ಪೆಟ್ರೋಲ ಹಾಗೂ ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿದೆ. ಜೂನ್ 15 ರಿಂದ(ಶನಿವಾರ ) ರಂದು ಈ ಬಗ್ಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ದರವನ್ನು ಹೆಚ್ಚಳ ಮಾಡುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಶನಿವಾರ ಪ್ರಕಟಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಇಂಧನ ದರ ರಾಜ್ಯದಲ್ಲಿ ದುಬಾರಿಯಾಗಲಿದೆ. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತಿದೆ.
ಈ ಹಿಂದೆ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ 25.92 ರಷ್ಟಿತ್ತು. ಈಗ ಶೇ 3.9ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 29.84 ಕ್ಕೆ ಏರಿಕೆಯಾಗಿದೆ. ಇನ್ನೂ ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ ಹಿಂದೆ ಶೇ 14.34 ರಷ್ಟಿತ್ತು. ಈಗ ಶೇ 4.1 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 18.44 ಕ್ಕೆ ಏರಿಕೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಬಹುದಿನಗಳ ಬಳಿಕ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡಿಸೇಲ್ ದರ 3.50 ರೂಪಾಯಿ ಹೆಚ್ಚವಾಗುವ ಸಾಧ್ಯತೆ ಇದೆ.
ಸರ್ಕಾರ ಲೂಟಿ ಹೊಡೆಯಲು ಹೊರಟಿದೆ: ಸುನೀಲ್ ಕುಮಾರ್
ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ. ಪೆಟ್ರೋಲ್ ಮೇಲಿನ ರಾಜ್ಯ ಸೆಸ್ ನ್ನು ಪ್ರತಿ ಲೀಟರ್ ಮೇಲೆ ಮೂರು ರೂ. ಹೆಚ್ಚಳ ಮಾಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಖಾಲಿಯಾದ ಬೊಕ್ಕಸ ತುಂಬಿಕೊಳ್ಳಲು ಹೊರಟಿದ್ದಾರೆ.
ಲಭ್ಯ ಇರುವ ಎಲ್ಲ ಆದಾಯ ಮೂಲಗಳಿಂದ ಸರ್ಕಾರ ಜನರನ್ನು ಎಷ್ಟು ಸುಲಿಗೆ ಮಾಡಿದರೂ ರಾಜಸ್ವ ಸಂಗ್ರಹ ದಿನೇ ದಿನೇ ಕುಸಿದು ಬೀಳುತ್ತಿದೆ. ಈ ವರ್ಷದ ತೆರಿಗೆ ಸಂಗ್ರಹಣೆಯಲ್ಲಿ ಹದಿಮೂರು ಸಾವಿರ ಕೋಟಿ ಕೊರತೆ ಸೃಷ್ಟಿಯಾಗಿರುವುದರಿಂದ ರಾಜ್ಯ ಸರ್ಕಾರ ಧೂಮಕೇತುವಿನ ರೀತಿ ಜನಸಾಮಾನ್ಯರ ಮೇಲೆ ಎರಗಿದೆ.
ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಇಂಧನ ದರ ಇಳಿಕೆಗಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಆದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಸೆಸ್ ಇಳಿಕೆ ಮಾಡಿದರೂ ಕರ್ನಾಟಕ ಸರ್ಕಾರ ಮಾತ್ರ ತೆಪ್ಪಗಿತ್ತು. ಬಜೆಟ್ ಗೆ ಮುನ್ನವೇ ಪೆಟ್ರೋಲಿಯಂ ಉತ್ಪನಗಳ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. ವೈದ್ಯಶಿಕ್ಷಣ ಸೇರಿದಂತೆ ವೃತ್ತಿ ಶಿಕ್ಷಣ ಶುಲ್ಕವನ್ನು ಶೇ.೧೦ರಷ್ಟು ಏರಿಕೆ ಮಾಡಿದ್ದ ಸರ್ಕಾರ ಪೆಟ್ರೋಲಿಗೆ ಬೆಂಕಿ ಹಚ್ಚಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯ, ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಸಿರಾಡುವುದಕ್ಕೂ ತೆರಿಗೆ ಹಾಕುವುದು ಗ್ಯಾರಂಟಿ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.












Click it and Unblock the Notifications