ಶಿವಮೊಗ್ಗ ದಸರಾ ಅವಾಂತರದ ಬೆನ್ನಲ್ಲೇ ಮಹತ್ವದ ಪ್ರಸ್ತಾವನೆ: ರಾಜ್ಯಕ್ಕೆ ಯಾಂತ್ರಿಕ ಆನೆಗಳನ್ನ ನೀಡಲು ಮುಂದಾದ ಪೇಟಾ

ಬೆಂಗಳೂರು: ಇತ್ತೀಚೆಗೆ ನಡೆದ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಆನೆ ದಿಢೀರ್ ಬೆದರಿ ಓಡಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಾಸುವ ಮುನ್ನವೇ, ಪ್ರಾಣಿ ಹಕ್ಕುಗಳ ರಕ್ಷಣಾ ಸಂಸ್ಥೆ ಪೇಟಾ ಇಂಡಿಯಾ ರಾಜ್ಯ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆಯೊಂದನ್ನ ಮುಂದಿಟ್ಟಿದೆ.

ರಾಜ್ಯದಲ್ಲಿ ನಡೆಯುವ ದಸರಾ ಉತ್ಸವ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಜೀವಂತ ಆನೆಗಳ ಬಳಕೆಯನ್ನ ಸಂಪೂರ್ಣವಾಗಿ ಕೈಬಿಟ್ಟು, ಅವುಗಳ ಬದಲಾಗಿ ಯಾಂತ್ರಿಕ ಆನೆಗಳನ್ನ (Mechanical Elephants) ಬಳಸುವಂತೆ ಪೇಟಾ ಇಂಡಿಯಾ ಸರ್ಕಾರಕ್ಕೆ ಮನವಿ ಮಾಡಿದೆ.

PETA India Offers Mechanical Elephants For Karnataka Dasara After Shivamogga Elephant Incident

ಮೆರವಣಿಗೆಗಳಲ್ಲಿ ರೋಬೋಟ್ ಅಥವಾ ಯಾಂತ್ರಿಕ ಆನೆಗಳನ್ನ ಬಳಸುವ ಕುರಿತು ಪೇಟಾ ಇಂಡಿಯಾ ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಧಿಕೃತ ಪತ್ರ ಬರೆದಿದೆ. ಈ ಬಾರಿಯ ದಸರಾ ಆಚರಣೆಯೇ ಜೀವಂತ ಆನೆಗಳನ್ನ ಬಳಸುವ ಕೊನೆಯ ಉತ್ಸವವಾಗಲಿ ಎಂದು ಪೇಟಾ ಆಗ್ರಹಿಸಿದೆ.

ಕಾಡಿನಲ್ಲಿ ಅಥವಾ ಪುನರ್ವಸತಿ ಕೇಂದ್ರಗಳಲ್ಲಿ ಮುಕ್ತವಾಗಿ ಬದುಕಬೇಕಾದ ಆನೆಗಳನ್ನ ಸರಪಳಿಯಿಂದ ಬಂಧಿಸಿ ಉತ್ಸವಗಳಲ್ಲಿ ಬಳಸುವ ಬದಲು, ಅವುಗಳನ್ನು ಬಿಡುಗಡೆ ಮಾಡುವಂತೆ ಕೋರಿದೆ. ಈ ಯಾಂತ್ರಿಕ ಆನೆಗಳು ಕೃತಕವಾಗಿದ್ದರೂ ನಿಜವಾದ ಆನೆಗಳಂತೆಯೇ ತಲೆ, ಕಿವಿ, ಕಣ್ಣು, ಸೊಂಡಿಲು ಮತ್ತು ಬಾಲವನ್ನ ಆಡಿಸುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಚಕ್ರಗಳಿರುವ ಬೇಸ್ ಮೇಲೆ ನಿಲ್ಲಿಸಲಾಗಿದ್ದು, ಇವುಗಳ ಮೇಲೆ ದೇವರ ಮೂರ್ತಿಗಳನ್ನು ಇರಿಸಿ ಅತ್ಯಂತ ಸುರಕ್ಷಿತವಾಗಿ ಜಂಬೂಸವಾರಿ ಮೆರವಣಿಗೆ ಮಾಡಬಹುದು ಎಂದು ಪೇಟಾ ಸಲಹೆ ನೀಡಿದೆ.

ಶಿವಮೊಗ್ಗ ದಸರಾ ಆನೆ ಅವಾಂತರ

ಬುಧವಾರ ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಆನೆಯು ಮೆರವಣಿಗೆ ಶುರುವಾದ ಕೆಲವೇ ನಿಮಿಷಗಳಲ್ಲಿ ಏಕಾಏಕಿ ಬೆದರಿ ಓಡಲಾರಂಭಿಸಿತ್ತು. ಈ ದಿಢೀರ್ ಬೆಳವಣಿಗೆಯಿಂದ ನೆರೆದಿದ್ದ ಜನಸಾಗರ ದಿಕ್ಕಾಪಾಲಾಗಿ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಆತಂಕಕಾರಿ ಘಟನೆಯಲ್ಲಿ ಮಾವುತನಿಗೆ ಗಾಯಗಳಾಗಿದ್ದು, ರಸ್ತೆಯಲ್ಲಿದ್ದ ಹಲವು ವಾಹನಗಳಿಗೂ ಹಾನಿಯಾಗಿತ್ತು. ಇಂತಹ ಅಪಾಯಕಾರಿ ಸನ್ನಿವೇಶಗಳು ಮರುಕಳಿಸದಂತೆ ತಡೆಯಲು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾಂತ್ರಿಕ ಆನೆಗಳ ಬಳಕೆಯೇ ಸೂಕ್ತ ಪರಿಹಾರ ಎಂದು ಪೇಟಾ ಇಂಡಿಯಾ ಪ್ರತಿಪಾದಿಸಿದೆ.

ರೋಬೋಟ್ ಆನೆಗಳತ್ತ ಒಲವು

"ದಸರಾ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನ ಸಾರುತ್ತದೆ. ಈ ಸಂದೇಶವು ಮೂಕ ಪ್ರಾಣಿಗಳ ಮೇಲಿನ ದಯೆಗೂ ಅನ್ವಯವಾಗಬೇಕು" ಎಂದು ಪೇಟಾ ಇಂಡಿಯಾದ ನೀತಿ ವಿಭಾಗದ ಉಪಾಧ್ಯಕ್ಷೆ ಖುಷ್ಬೂ ಗುಪ್ತಾ ಮಾರ್ಮಿಕವಾಗಿ ಹೇಳಿದ್ದಾರೆ. "ಸಂಭ್ರಮಾಚರಣೆಯ ಹೆಸರಿನಲ್ಲಿ ಆನೆಗಳಿಗೆ ಹಿಂಸೆ ನೀಡುವುದು ಅಥವಾ ಜನರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುವುದು ಸರಿಯಲ್ಲ. ಈಗ ಯಾಂತ್ರಿಕ ಆನೆಗಳು ಸುಲಭವಾಗಿ ಲಭ್ಯವಿರುವುದರಿಂದ ರಾಜ್ಯ ಸರ್ಕಾರ ಈ ಐತಿಹಾಸಿಕ ಬದಲಾವಣೆಗೆ ಮುಂದಾಗಬೇಕು. ಇದಕ್ಕಾಗಿ ಪೇಟಾ ಸಂಪೂರ್ಣ ಸಹಕಾರ ನೀಡಲಿದೆ" ಎಂದು ಅವರು ತಿಳಿಸಿದ್ದಾರೆ.

ಈ ಮನವಿಯ ಬೆನ್ನಲ್ಲೇ, ಪೇಟಾ ಮತ್ತು ಕ್ಯೂಪಾ (CUPA) ಸಂಸ್ಥೆಗಳ ಸಹಯೋಗದಲ್ಲಿ ಮಂಡ್ಯದ ಡಿಎಂಎಸ್ ಚಂದ್ರವನ ಆಶ್ರಮಕ್ಕೆ ಶಿವಯೋಗೀಶ್ವರ ಹೆಸರಿನ 11ನೇ ಯಾಂತ್ರಿಕ ಆನೆಯನ್ನು ಬುಧವಾರ ಕೊಡುಗೆಯಾಗಿ ನೀಡಿ ಉದ್ಘಾಟಿಸಲಾಗಿದೆ.

ಕರ್ನಾಟಕ ದಸರಾ ಹಾಗೂ ಆನೆಗಳ ಕಾದಾಟದ ಇತಿಹಾಸ

ರಾಜ್ಯದ ದಸರಾ ಉತ್ಸವಗಳಲ್ಲಿ ಆನೆಗಳು ಬೆದರುವ ಅಥವಾ ಕಾದಾಟಕ್ಕಿಳಿಯುವ ಘಟನೆಗಳು ಇದೇ ಮೊದಲೇನಲ್ಲ. 2021ರ ಅಕ್ಟೋಬರ್‌ನಲ್ಲಿ ಶ್ರೀರಂಗಪಟ್ಟಣ ದಸರಾ ವೇಳೆ ಪಟಾಕಿ ಶಬ್ದಕ್ಕೆ ಹೆದರಿ ಗೋಪಾಲಸ್ವಾಮಿ ಎಂಬ ಆನೆ ಓಡಲಾರಂಭಿಸಿತ್ತು. ಆಗ ಆನೆ ಮೆರವಣಿಗೆಯನ್ನೇ ರದ್ದುಗೊಳಿಸಿ, ಬೆಳ್ಳಿ ರಥದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗಿತ್ತು.

ಇನ್ನು 2024ರ ಸೆಪ್ಟೆಂಬರ್‌ನಲ್ಲಿ ಮೈಸೂರು ಅರಮನೆ ಆವರಣದಲ್ಲೇ ಅಂಬಾರಿ ಆನೆಗಳಾದ ಧನಂಜಯ ಮತ್ತು ಕಂಜನ್ ನಡುವೆ ಭೀಕರ ಕಾಳಗ ನಡೆದಿತ್ತು. ಕಂಜನ್ ಆನೆ ರಸ್ತೆಗೆ ಓಡಿಬಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು. ಇದೇ ವರ್ಷದ ಆರಂಭದಲ್ಲಿ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ಕಾದಾಟದಲ್ಲಿ ಓರ್ವ ಮಹಿಳಾ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಗಾಯಗೊಂಡಿದ್ದ ಮಾರ್ತಾಂಡ ಆನೆ ಮರುದಿನ ಸಾವನ್ನಪ್ಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+