'ಕರ್ನಾಟಕದಿಂದ ಕಾಂಗ್ರೆಸ್ ಕಿತ್ತೊಗೆಯಲು ಜನ ಬಯಸಿದ್ದಾರೆ, ಅದಕ್ಕೆ ಸಿದ್ಧರಾಗಿ'
ಬೆಂಗಳೂರು, ಸೆಪ್ಟೆಂಬರ್ 5: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಡೆಯಿಂದ ಸೋಮವಾರ ಅಧಿಕೃತ ರಣಕಹಳೆ ಮೊಳಗಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಪ್ರಕಾಶ್ ಜಾವಡೇಕರ್ ಸೋಮವಾರ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಎದುರಿಸಲು ಯೋಜನೆಯ ರೂಪು-ರೇಖೆ ಪ್ರಸ್ತಾಪಿಸಿದ್ದಾರೆ.
ಮಂಗಳೂರು ಚಲೋ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಬೇಕು ಎಂದಿರುವ ಈ ನಾಯಕರು, ಚುನಾವಣೆಗೆ ಎದುರು ನೋಡುತ್ತಿರುವ ಕರ್ನಾಟಕ ಜನರು ಬಿಜೆಪಿಗೆ ಮತ ಹಾಕಬೇಕು. ಆ ರೀತಿ ಕೆಲಸ ಮಾಡಬೇಕು. ಇನ್ನು ರಾಜ್ಯ ಬಿಜೆಪಿಯ ನಾಯಕರು ಎಲ್ಲೇ ಇದ್ದರೂ ಮಂಗಳೂರು ಚಲೋಗೆ ಅನುಮತಿ ಸಿಕ್ಕರೂ ಸಿಗದಿದ್ದರೂ ಈ ಹೋರಾಟದಲ್ಲಿ ಭಾಗಿಯಾಗಲೇ ಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಮನ್ನಣೆ ಸಿಕ್ಕಿಲ್ಲ ಎಂಬ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಆ ಭಾಗದ ನಾಯಕರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಾವಡೇಕರ್, ಈ ಬಗ್ಗೆ ಯೋಚನೆ ಮಾಡುವುದಕ್ಕೆ ಏನೂ ಇಲ್ಲ. ಎಲ್ಲ ಪ್ರದೇಶಕ್ಕೂ ಪ್ರಾಶಸ್ತ್ಯ ನೀಡುವುದಕ್ಕೆ ಸಾಧ್ಯವೋ ಅಷ್ಟನ್ನು ಕೇಂದ್ರದಿಂದ ಮಾಡಲಾಗಿದೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನ ಎದುರಿಸುವುದಕ್ಕೆ ನೀಲಿ ನಕಾಶೆ ಸಿದ್ಧಪಡಿಸಬೇಕಿದೆ. ಕೇಂದ್ರದಲ್ಲಿ ಬಿಜೆಪಿ ಸ್ವಚ್ಛ ಆಡಳಿತ ನೀಡಿದೆ. ಆದ್ದರಿಂದ ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆಯಿರಿ. ದೊಡ್ಡ ದೊಡ್ಡ ಸಭೆಗಳನ್ನು ನಡೆಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ನ ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ತಿಳಿಸಿ ಎಂದು ಬಿಜೆಪಿಯ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.












Click it and Unblock the Notifications