ಬಿಜೆಪಿಯ ತ್ರಿಮೂರ್ತಿಗಳು ನನ್ನನ್ನು ಕೆಣಕಿ ಬೆತ್ತಲಾಗಿದ್ದಾರೆ, ಎಚ್ಡಿಕೆ: ಅವರು ಯಾರ್ಯಾರು?
ಬೆಂಗಳೂರು, ಡಿ 24: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರಕಾರದ ವಿರುದ್ದ ಸಾಲುಸಾಲು ಟ್ವೀಟ್ ಗಳನ್ನು ಮಾಡಿತ್ತಿದ್ದಾರೆ. ಮಂಗಳೂರು ಗಲಭೆಯ ಸಿಸಿಟಿವಿ ದೃಶ್ಯಾವಳಿಯ ಬಗ್ಗೆ ಟ್ವೀಟ್ ಮಾಡಿದ್ದ ಎಚ್ಡಿಕೆ, ಈಗ, ಬಿಜೆಪಿ ಮುಖಂಡರ ವಿರುದ್ದ ಕಿಡಿಕಾರಿದ್ದಾರೆ.
"ಇನ್ನು ಮೂರುವರೆ ವರ್ಷ ನಾನೇ ಮುಖ್ಯಮಂತ್ರಿ. ಎಚ್.ಡಿ. ಕುಮಾರಸ್ವಾಮಿಯವರು ಅಡ್ರೆಸ್ ಇಲ್ಲದ ಹಾಗೇ ಹೋಗಿದ್ದಾರೆ" ಎಂದು ಯಡಿಯೂರಪ್ಪನವರ ಹೇಳಿಕೆಗೆ ಮತ್ತೆ ಖಾರವಾಗಿ ಎಚ್ಡಿಕೆ ಉತ್ತರಿಸಿದ್ದಾರೆ. ಈ ಬಗ್ಗೆ, ಅವರು ಮಾಡಿದ ಟ್ವೀಟ್ ಹೀಗಿದೆ:
"ಅನರ್ಹರಿಗಾಗಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರೆಸ್ ಕೇಳಿದ ಬಿಎಸ್ವೈ ಸೂಕ್ತ ಉತ್ತರ ಪಡೆದುಕೊಂಡರು".

"ಈಗ 'ದೊಡ್ಡ ದೊಡ್ಡ ನಾಯಕರ' ಮೂಲಕ ನನ್ನ ಅಡ್ರೆಸ್ ಕೇಳಿಸುತ್ತಿದ್ದಾರೆ. ಅವರಿಗೆಲ್ಲ ಉತ್ತರಿಸುವಷ್ಟು ದೊಡ್ಡವನಲ್ಲದಿದ್ದರೂ ನಾನೇ ಉತ್ತರಿಸುವೆ. ನಾನು ಹಾಸನದ ಹರದನಹಳ್ಳಿಯ 'ದೇವೇಗೌಡ'ರ ಮಗ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ನನ್ನ ಶಾಶ್ವತ ವಿಳಾಸ".
"ಅಧಿಕಾರದ ಮದ ಕೆಲ ರಾಜಕಾರಣಿಗಳಲ್ಲಿ ಮರೆವು ತರಿಸಿದೆ. ನನ್ನ ಅಡ್ರೆಸ್ ಕೂಡಾ ಮರೆತಿದ್ದಾರೆ. 2006ಕ್ಕೂ ಮುನ್ನ ಮಂತ್ರಿಗಿರಿಗಾಗಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು ಬಿಎಸ್ವೈ ಮಾತ್ರ ಅಲ್ಲ. ಬಿಎಸ್ವೈ, ಶೆಟ್ಟರ್, ಈಶ್ವರಪ್ಪ. ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ".
"ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ... ನನ್ನ ಜನ ನನಗೆ ಕೊಟ್ಟ ಬಲ" ಇದು ಕುಮಾರಸ್ವಾಮಿ, ಬಿಜೆಪಿ ನಾಯಕರ ವಿರುದ್ದ ಮಾಡಿದ ಟ್ವೀಟ್.












Click it and Unblock the Notifications