ರಾಮನಗರ: ಧಾರ್ಮಿಕ ಭಾವನೆ ಕಡೆಗಣಿಸಿ ಗಣಪತಿ ದೇಗುಲ ತೆರವು!
ರಾಮನಗರ, ಆಗಸ್ಟ್ 31: ಜಿಲ್ಲಾಸ್ಪತ್ರೆಯ ಕಟ್ಟಡ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳದಲ್ಲಿದ್ದ ಪುರಾತನ ಗಣಪತಿ ದೇವಾಲಯವನ್ನು ತೆರವುಗೊಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಂದಾಯ ಭವನ ಮತ್ತು ಜಿಲ್ಲಾ ಪಂಚಾಯಿತಿ ಭವನದ ನಡುವೆ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇಲ್ಲಿದ್ದ ದೇವಾಲಯವನ್ನು ಭಗ್ನಗೊಳಿಸಿ ತೆರವುಗೊಳಿಸುವ ಕಾರ್ಯವನ್ನು ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಸಂಸ್ಥೆ ಮಾಡುತ್ತಿದೆ. ಆದರೆ ಈ ರೀತಿ ಮಾಡುವುದು ನಾಗರಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ನಗರ ಘಟಕ ಅಧ್ಯಕ್ಷ ರಾಮಾಂಜನೇಯ, ಗಣೇಶ ದೇವಾಲಯವು ನಗರದ ಪುರಾತನ ದೇವಾಲಯಗಳಲ್ಲೊಂದಾಗಿದೆ. ಕಾಮಗಾರಿ ನಡೆಸುವವರು ಗಣಪತಿ ದೇವಾಲಯವನ್ನು ಹಾಳುಗೆಡವಿದ್ದು, ಅರಳಿ ಮರ ಮತ್ತು ದೇವಾಲಯವನ್ನು ಉಳಿಸಿಕೊಡುವಂತೆ ಮನವಿ ಮಾಡಿದ್ದರೂ ಉದ್ದೇಶಪೂರ್ವಕವಾಗಿ ದೇವಾಲಯವನ್ನು ಕೆಡವಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಇದೀಗ ದೇವಾಲಯವನ್ನು ಭಗ್ನಗೊಳಿಸಿದ್ದು, ಗರ್ಭಗುಡಿಯಲ್ಲಿದ್ದ ಗಣಪತಿ ವಿಗ್ರಹವನ್ನು ನಾಪತ್ತೆ ಮಾಡಲಾಗಿದೆ. ಯಾವುದೇ ದೇವಾಲಯ ನೆಲಸಮ ಮಾಡುವ ಮುನ್ನ ಮುಜರಾಯಿ ಸಮಿತಿ ಅಧ್ಯಕ್ಷರೂ ಆದ ತಾಲೂಕು ತಹಸೀಲ್ದಾರ್ ಮತ್ತು ಸಮಿತಿ ಸದಸ್ಯರ ಸಭೆ ಕರೆದು ಚರ್ಚಿಸಬೇಕು, ಒಂದು ವೇಳೆ ದೇವಾಲಯ ಅನಿವಾರ್ಯವಾದರೆ ಬೇರೆ ಕಡೆ ಜಾಗ ನಿಗದಿ ಮಾಡಿ ಶಾಸ್ತ್ರೋಕ್ತವಾಗಿ ಹೊರತೆಗೆಯಬೇಕಾಗಿದೆ, ಆದರೆ ಇಲ್ಲಿ ಗಣಪತಿ ವಿಗ್ರಹವನ್ನು ಏಕಾಏಕಿ ಕಿತ್ತು ಹಾಕಲಾಗಿದೆ, ಅರಳೀಕಟ್ಟೆಯಲ್ಲಿದ್ದ ನಾಗರಕಲ್ಲುಗಳು ಕೂಡ ಮಾಯವಾಗಿವೆ ಎಂದು ಆರೋಪಿಸಿದ್ದಾರೆ.
ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹೇಳುವಂತೆ ದೇವಾಲಯವನ್ನು ಬೇರೆಡೆ ನಿರ್ಮಿಸಿಕೊಡಲಾಗುತ್ತದೆಯಂತೆ. ಅದು ಏನೇ ಇರಲಿ ಈ ಬಗ್ಗೆ ಸಂಬಂಧಿಸಿದವರು ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯ ಬೇಕಿದೆ.












Click it and Unblock the Notifications