ನಾನು ಸಚಿವನಾಗಲು ಡಾ.ಜಿ.ಪರಮೇಶ್ವರ್ ಕಾರಣ ಎಂದ ಸುಧಾಕರ್, ಸುಧಾಕರ್ ನ ಹಾಡಿಹೊಗಳಿದ ಪರಮೇಶ್ವರ್
ತುಮಕೂರು,ಬೆಳಗಾವಿ, 24: ನಾನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಲು ಡಾ.ಜಿ.ಪರಮೇಶ್ವರ್ ಕಾರಣ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ದೊಡ್ಡಸೆಗ್ಗೆರೆ ಗ್ರಾಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ , 1993 ರಲ್ಲಿ ಪರಮೇಶ್ವರ್ ನನಗೆ ಎಂಬಿಬಿಎಸ್ ಸೀಟು ಕೊಟ್ಟರು. ಪ್ರಥಮ ಬಾರಿ ಶಾಸಕನಾಗಲು ಅವಕಾಶ ಕೊಟ್ಟಿದ್ದೇ ಡಾ.ಜಿ.ಪರಮೇಶ್ವರ್, 2013ರಲ್ಲೂ ನಾನು ಶಾಸಕನಾಗುವ ಅವಕಾಶ ಮಾಡಿಕೊಟ್ಟರು ಎಂದರು.
ನಾನು ಇಂದು ಬೇರೆ ಪಕ್ಷದಲ್ಲಿದ್ದೇನೆ ಅದು ಬೇರೆ ಮಾತು. ಪರಮೇಶ್ವರ್ ನಡುವಿನ ಆತ್ಮಿಯತೆ ಯಾವತ್ತು ಮರೆಯಲ್ಲ. ತುಮಕೂರು ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

ಇನ್ನೂ ಈ ವೇಳೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮಾತನಾಡಿ, ಬಹಳ ಸೂಕ್ಷ್ಮ ದೃಷ್ಟಿಯಿಂದ ನಾವು ಮಂತ್ರಿಗಳನ್ನು ನೋಡುತ್ತೇವೆ. ಎಲ್ಲಾ ಸಮುದಾಯಗಳ ಅಭಿವೃದ್ಧಿ ಮಾಡಿದ ಸಚಿವರೆಂದರೆ ಅದು ಸುಧಾಕರ ಅವರು ಮಾತ್ರ. ಕೊರೊನಾ ಬಂದಾಗ ಇವರಿಗೆ ಬಂದ ಕಷ್ಟ ಮುಖ್ಯಮಂತ್ರಿಗಿಗೂ ಬಂದಿಲ್ಲ. ಕೊರೊನಾ ಸಂದರ್ಭದಲ್ಲಿ ನಾವೆಲ್ಲ ಬೈದಿದ್ದೇವೆ. ಕುರಿಗಳಿಗೆ ಹಾಕಿದಂತೆ ಮಾಸ್ಕ್ ಹಾಕಬೇಕು ಅಂತಾ ಸಿಟ್ಟಾಗಿದ್ದೇವೆ. ಆ ವೇಳೆ ಕ್ರಮ ತೆಗೆದುಕೊಂಡು ಲಕ್ಷಾಂತರ ಪ್ರಾಣ ಉಳಿಸಿದ್ದಾರೆ. ಸುಧಾಕರ್ ಅವರ ಕ್ರಿಯಾಶೀಲತೆ ನಿಜವಾಗಲೂ ಮೆಚ್ಚುವಂತಹದ್ದು ಎಂದು ಸಚಿವ ಸುಧಾಕರ್ ಅವರನ್ನ ಹಾಡಿ ಹೊಗಳಿದ್ದಾರೆ.
ನಾವು ವಿರೋಧ ಪಕ್ಷದಲ್ಲಿದ್ದ ಮಾತ್ರಕ್ಕೆ ಬರೀ ಬೈಯ್ಯಬೇಕು ಅಂತಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆ ಕೆಲಸ ಮಾಡಿದ್ದಾರೆಂದು ಹೇಳಬೇಕು. ನೀವು ನಮ್ಮ ಭಾಗಕ್ಕೆ ಬಂದು ದೇವರು ಥರಾ ಬಂದಿದ್ದೀರಿ. ರೋಗಿಗೆ ವೈದ್ಯರೇ ದೇವರಿದ್ದಂಗೆ. ನಮ್ಮ ಗ್ರಾಮಕ್ಕೆ ನೀವು ಆರೋಗ್ಯ ಕೇಂದ್ರ ಕೊಟ್ಟು ವೈದ್ಯರನ್ನು ನೀಡಿದ್ದೀರಿ. ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ. ನಾವು ನಮ್ಮ ಹುಡುಗ ಅಂತ ಹೇಳುತ್ತೇವೆ. ಸುಧಾಕರ್ಗೆ ಹೆಚ್ಚಿನ ಅಧಿಕಾರ ಕೊಡಲಿ ಅಂತಾ ಪ್ರಾರ್ಥಿಸುತ್ತೇನೆ ಎಂದರು
ಈಗ ಮತ್ತೆ ಕೊರೊನಾ ಶುರುವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳೂ ಹಾಗೂ ಸುಧಾಕರ ಅವರು ಉತ್ತರ ಕೊಟ್ಟಿದ್ದಾರೆ. ಕೊರೊನಾ ಪಕ್ಷ ನೋಡಿ ಬರಲ್ಲ. ಕಾಂಗ್ರೆಸ್ಗೆ ಜಾಸ್ತಿ ಬರುತ್ತೆ, ಬಿಜೆಪಿಗೆ ಕಡಿಮೆ ಬರುತ್ತೆ ಅಂತ ಇಲ್ಲ. ನಡುವೆ ಜನತಾದಳವೂ ಇದೆ. ಅದಕ್ಕೂ ಬರಬಹುದು. ಹೀಗಾಗಿ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದರು.












Click it and Unblock the Notifications